ಶನಿವಾರ, ಸೆಪ್ಟೆಂಬರ್ 21, 2019
21 °C
ನಗರದ ಹಲವೆಡೆ ಗಮನ ಸೆಳೆದ ನಾನಾ ಭಂಗಿಯ ಗಣಪತಿ ವಿಗ್ರಹಗಳು

ನೆರೆ ಸಂಕಷ್ಟದಲ್ಲೂ ಗಣೇಶ ಹಬ್ಬದ ಸಂಭ್ರಮ

Published:
Updated:
Prajavani

ಶಿವಮೊಗ್ಗ: ಈಚೆಗೆ ಸುರಿದ ಆಶ್ಲೇಷ ಮಳೆಯ ತೀವ್ರತೆಯಿಂದ ನಲುಗಿರುವ ಜಿಲ್ಲೆಯ ಜನರು ಸಂಕಷ್ಟದಲ್ಲೂ ಗೌರಿ–ಗಣೇಶರನ್ನು ಸಂಭ್ರಮದಿಂದ ಸ್ವಾಗತಿಸಲು ಸಜ್ಜಾಗಿದ್ದಾರೆ. 

ಬಹುತೇಕ ಬಡಾವಣೆಗಳಲ್ಲಿ ಯುವಕರು ಉತ್ಸಾಹದಿಂದ ಗಣಪತಿ ಪ್ರತಿಷ್ಠಾಪನೆಗೆ ಪೆಂಡಾಲ್‌ಗಳನ್ನ ನಿರ್ಮಿಸಿ, ಕಣ್ಮನ ಸೆಳೆಯುವಂತೆ ಮಂಟಪಗಳಿಗೆ ದೀಪಾಲಂಕಾರ ಮಾಡಿದ್ದಾರೆ.

ನಗರದ ಸೈನ್ಸ್ ಮೈದಾನ, ಗೋಪಿ ವೃತ್ತ, ವಿನೋಬನಗರ ಪೊಲೀಸ್ ಚೌಕಿ, ಜೈಲು ವೃತ್ತ, ಲಕ್ಷ್ಮಿ ಚಿತ್ರಮಂದಿರ ವೃತ್ತ ಸೇರಿ ಹಲವೆಡೆ ಶಿವಲಿಂಗದ ಮೇಲೆ ಪ್ರತಿಷ್ಠಾಪಿಸಿದ ಗಣಪತಿ, ಕೃಷ್ಣನ ವೇಷದ ಗಣಪತಿ, ಕಾಳಿಂಗಮರ್ಧನ ಗಣಪತಿ, ಗೋವಿನ ಬಳಿ ಕುಳಿತಿರುವ ಗಣಪತಿ ಹೀಗೆ ನಾನಾ ಭಂಗಿಯ ಗಣಪತಿ ವಿಗ್ರಹಗಳು ಗಮನ ಸೆಳೆಯುತ್ತಿವೆ.

ಸಿದ್ಧಗೊಂಡಿದ್ದ ಮೂರ್ತಿಗಳು ನೀರು ಪಾಲು: ನಗರದಲ್ಲಿ ಗಣೇಶ ಹಬ್ಬಕ್ಕಾಗಿ ತಿಂಗಳಿಂದ ಸಿದ್ಧಗೊಂಡಿದ್ದ ಶೇ 80ರಷ್ಟು ಗಣೇಶ ಮೂರ್ತಿಗಳು ತುಂಗಾ ಪ್ರವಾಹದಲ್ಲಿ ಕರಗಿ ಹೋಗಿ, ಹಬ್ಬದ ಉತ್ಸಾಹ ಸ್ವಲ್ಪ ಕಡಿಮೆಯಾಗಿದೆ. ಪ್ರವಾಹದ ಪರಿಣಾಮ ಗಣೇಶ ಮೂರ್ತಿಗಳ ತಯಾರಿಕಾ ಪ್ರದೇಶ ಕುಂಬಾರ ಗುಂಡಿಯನ್ನು ರಾತ್ರೋ ರಾತ್ರಿ ನೀರು ಆವರಿಸಿತ್ತು. ಜನರು ಜೀವ ಉಳಿಸಿಕೊಳ್ಳಲು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದರು. ಸಿದ್ಧವಾಗಿದ್ದ ಗಣೇಶ ಮೂರ್ತಿಗಳು ನೀರಿನಲ್ಲಿ ಮುಳುಗಿಹೋಗಿದ್ದವು. ಮೂರ್ತಿಗಳು ಕರಗಿ ಹೋಗಿರುವ ಕಾರಣ ಹಲವು ಗಣಪತಿ ಮೂರ್ತಿ ತಯಾರಕರು ವಿವಿಧ ಸಂಘ–ಸಂಸ್ಥೆಗಳು, ಸಾರ್ವಜನಿಕರು ಮುಂಗಡವಾಗಿ ನೀಡಿದ್ದ ಹಣವನ್ನು ವಾಪಸ್‌ ನೀಡಿದ್ದರು.

ಪ್ರಮುಖ ಸಂಘ–ಸಂಸ್ಥೆಗಳ ಗಣೇಶ ಮೂರ್ತಿಗಳನ್ನು ಒತ್ತಾಯದ ಮೇರೆಗೆ 2 ವಾರಗಳಲ್ಲೇ ಮೂರ್ತಿ ತಯಾರಕರು ಸಿದ್ಧಪಡಿಸಿದರು. ಆದರೂ ಮೂರ್ತಿ ತಯಾರಕರಿಗೆ ಸಿದ್ಧಪಡಿಸಿದ್ದ ಗಣೇಶನ ವಿಗ್ರಹಗಳು ಕರಗಿ ನಷ್ಟವಾಗಿರುವುದರಿಂದ ಅವರ ಮನೆಯಲ್ಲಿ ಹಬ್ಬದ ಕಳೆ ಕುಂದಿದೆ.

ಹಬ್ಬದ ಸಂಭ್ರಮ ಕಳೆದುಕೊಂಡ ಕಾರ್ಮಿಕರು: ಎರಡು ತಿಂಗಳಿನಿಂದ ಬೇಡಿಕೆ ಗಣನೀಯವಾಗಿ ಕುಸಿಯುತ್ತಿರುವ ಪರಿಣಾಮ ಶಿವಮೊಗ್ಗದ ಹಲವು ಕೈಗಾರಿಕಾ ಘಟಕಗಳು ಶೇ 60ರಷ್ಟು ಉತ್ಪಾದನೆ ಸ್ಥಗಿತಗೊಳಿಸಿದ್ದು, ಒಂದು ತಿಂಗಳ ಅವಧಿಯಲ್ಲಿ ಶೇ 50ರಷ್ಟು ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ. ಹಾಗಾಗಿ ಕಾರ್ಮಿಕರಿಗೆ ಈ ಹಬ್ಬ ಸಂಭ್ರಮ ನೀಡಿಲ್ಲ.

ಇದೆಲ್ಲರ ಮಧ್ಯೆಯೂ ಗಣಪತಿ ಹಬ್ಬವನ್ನು ಜೋರಾಗಿ ಅಲ್ಲದಿದ್ದರೂ  ತಕ್ಕಮಟ್ಟಿಗೆ  ಸರಳವಾಗಿಯಾದರೂ ಆಚರಿಸಲು ಜನರು ಮುಂದಾಗಿದ್ದಾರೆ. ಬೇರೆ ಬೇರೆ ಊರುಗಳಿಂದ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ತಂದಿದ್ದಾರೆ. 

ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗಿತ್ತು. ಪ್ರಮುಖ ವೃತ್ತಗಳಲ್ಲಿ ಬಾಳೆಕಂದು, ಮಾವಿನ ಸೊಪ್ಪು ಮಾರಾಟವಾಗುತ್ತಿದ್ದು, ಜನರು ಖರೀದಿಯಲ್ಲಿ ತೊಡಗಿದ್ದರು. ತರಕಾರಿ, ಹಣ್ಣು, ಹೂವುಗಳ ಬೆಲೆಯಲ್ಲಿ ಏರಿಕೆ ಕಂಡಿದ್ದು, ಮೋಸಂಬಿ ಕೆ.ಜಿ.ಗೆ ₹ 60ರಿಂದ ₹ 80, ಸೀತಾಫಲ ₹ 100, ಸೇಬು ₹100ರಿಂದ ₹150, ಮರಸೇಬು ₹80, ಬಾಳೆಹಣ್ಣು ₹80, ಹೂವು ಮಾರಿಗೆ ₹60ರಿಂದ ₹ 80ಕ್ಕೆ, ಸೇವಂತಿಗೆ ಕೆ.ಜಿಗೆ ₹ 200ಕ್ಕೆ ಮಾರಾಟವಾದವು. 

ದೂರದ ಊರುಗಳಲ್ಲಿ ನೆಲೆಸಿರುವ ಸ್ಥಳೀಯರು ಈಗಾಗಲೇ ಹಬ್ಬಕ್ಕೆಂದು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲು, ಕೆಎಸ್ಆರ್‌ಟಿಸಿ ಬಸ್ ಹಾಗೂ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಅಗತ್ಯ ಕ್ರಮ
ಕೈಗೊಂಡಿದೆ.

Post Comments (+)