ಬುಧವಾರ, ಸೆಪ್ಟೆಂಬರ್ 18, 2019
25 °C

ಗಣೇಶ ಮೂರ್ತಿಯ ವೈಭವೋಪಿತ ಮೆರವಣಿಗೆ

Published:
Updated:
Prajavani

ಶಿವಮೊಗ್ಗ: ಹಿಂದೂ ಸಂಘಟನಾ ಮಹಾ ಮಂಡಳಿ ಕೋಟೆ ರಸ್ತೆಯಲ್ಲಿ ಪ್ರತಿಷ್ಠಾಪಿಸಿದ್ದ 75ನೇ ವರ್ಷದ ಗಣೇಶ ಮೂರ್ತಿಯ ವಿಸರ್ಜನಾ ಪೂರ್ವ ಮೆವರಣಿಗೆ ಅತ್ಯಂತ ವೈಭವೋಪಿತವಾಗಿ, ಅದ್ದೂರಿಯಾಗಿ ಗುರುವಾರ ನೆರವೇರಿತು.

ಕೋಟೆ ಭೀಮೇಶ್ವರ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ 11ಕ್ಕೆ ಗಣೇಶ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ತಾಳ ಮದ್ದಲೆ, ಮಂಗಳವಾದ್ಯ, ಚಂಡೆಮೇಳ, ಕಹಳೆ, ಡೊಳ್ಳುಕುಣಿತ ಮತ್ತಿತರ ವೈವಿಧ್ಯಮಯ ಕಲಾತಂಡಗಳು ಮೆರವಣಿಗೆಗೆ ಕಳೆ ತಂದಿದ್ದವು. ಯುವಕರು, ಯುವತಿಯರು, ಮಹಿಳೆಯರು, ಮಕ್ಕಳು, ವೃದ್ಧರು ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ಹಣೆಗೆ ಕುಂಕುಮ ತಿಲಕವಿಟ್ಟು, ಕೇಸರಿ ಶಾಲು ಹಾಕಿಕೊಂಡು ಮೈಲುದ್ದದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಕೋಟೆ ರಸ್ತೆಯ ಭೀಮೆಶ್ವರ ದೇವಸ್ಥಾನದಿಮದ ಆರಂಭವಾದ ಮೆರವಣಿಗೆ ಎಸ್.ಪಿ.ಎಂ. ರಸ್ತೆ, ರಾಮಣ್ಣ ಶ್ರೇಷ್ಟಿ ಪಾರ್ಕ್‌, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮದ್‌ ವೃತ್ತ, ನೆಹರು ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ ಮುಖ್ಯರಸ್ತೆ, ಜೈಲ್‌ ವೃತ್ತ, ಕುವೆಂಪು ರಸ್ತೆ, ಶಿವಮೂರ್ತಿ ವೃತ್ತ, ಸವಳಂಗ ರಸ್ತೆ, ಮಹಾವೀರ ವೃತ್ತ, ಡಿವಿಎಸ್ ಕಾಲೇಜು ರಸ್ತೆ, ಬಿ.ಎಚ್. ರಸ್ತೆ ಮೂಲಕ ಸಾಗಿ ತುಂಗಾ ನದಿ ತೀರದ ಭೀಮೇಶ್ವರ ಮಡು ತಲುಪಿತು.

ದಾರಿ ಉದ್ದಕ್ಕೂ ಮಹಿಳೆಯರು ರಂಗೋಲಿ ಹಾಕಿ, ತಳಿರು ತೋರಣ ಕಟ್ಟಿದ್ದರು. ಪ್ರತಿ, ಅಂಗಡಿ ಮನೆಯ ಮುಂದೂ ಸರದಿಯಲ್ಲಿ ನಿಂತು ಪೂಜೆ ಸಲ್ಲಿಸಿದರು. ಪ್ರಮುಖ ಸ್ಥಳಗಳಲ್ಲಿ ತಂಡೋಪ ತಂಡವಾಗಿ ಬಂರುತ್ತಿದ್ದ ಜನರು ದೊಡ್ಡದೊಡ್ಡ ಹಾರ ಹಾಕಿ ಭಕ್ತಿ ಮೆರೆದರು.

ದಾರಿಯುದ್ದಕ್ಕೂ ವಿವಿಧ ಹಿಂದೂ ಸಂಘಟನೆಗಳು ಪ್ರಸಾದ, ನೀರು, ಮಜ್ಜಿಗೆ ವಿತರಣೆ ಮಾಡುತ್ತಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಮನೆ, ಕಟ್ಟಡ, ಅಂಗಡಿ ಮುಂಗಟ್ಟುಗಳ ಮೇಲೆ ನಿಂತು ಜನರು ಗಣೇಶ ಮೂರ್ತಿಯ ಮೆರವಣಿಗೆ ವೀಕ್ಷಿಸಿದರು. ಪ್ರತಿ ಮಾರ್ಗ, ಪ್ರತಿ ವೃತ್ತಗಳೂ ಕೇಸರಿಮಯವಾಗಿದ್ದರು. ಶಿವಾಜಿ ಮಹಾರಾಜ, ಚಾಣಕ್ಯರ ಬೃತ್ತ ಕಟೌಟ್‌ಗಳು ಗಮನ ಸೆಳೆದವು. ವೀರ ಸಾವರ್ಕರ್, ಭಗತ್‌ಸಿಂಗ್, ಸ್ವಾಮಿ ವಿವೇಕಾನಂದ, ಅಂಬೇಡ್ಕರ್, ರಾಣಾ ಪ್ರತಾಪ್, ಸರ್ದರ್ ವಲ್ಲಭಬಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಪುರಂದರದಾಸರು, ಜಾನ್ಸಿ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು ಗಮನ ಸೆಳೆದವು. ಎಲ್ಲೆಲ್ಲೂ ಕೇಸರಿ ಬಾವುಟ, ಬ್ಯಾನರ್, ಬಂಟಿಂಗ್ಸ್ ರಾರಾಜಿಸುತ್ತಿದ್ದವು.

ಅಬ್ಬರದ ಸಂಗೀತ ಇರುವ ಹಾಡಿಗೆ ಯುವ ಜನರು ಹುಚ್ಚೆದ್ದು ಕುಣಿದರೆ, ಭಗವಾಧ್ವಜ ಹಿಡಿದು ಯುವಕರು ನಿರಂತರವಾಗಿ ಜೈ ಶ್ರೀರಾಮ ಘೋಷಣೆ ಕೂಗುತ್ತಿದ್ದರು.

ಶಿವಪ್ಪನಾಯಕ ವೃತ್ತದಲ್ಲಿ ಆಂಜನೇಯ, ಛತ್ರಪತಿ ಶಿವಾಜಿ ಬೃಹತ್ ಕಟೌಟ್‌ ಬಳಿ ಹೆಚ್ಚಿನ ಸಂಖ್ಯೆಯ ಯುವಕರು ಫೋಟೊ, ಸೆೆಲ್ಪಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಲವೆಡೆ ಕೇಸರಿ ಟವೆಲ್, ಶಾಲುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಯುವತಿಯರೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಎಸ್.ರುದ್ರೇಗೌಡ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಕೆ.ಇ.ಕಾಂತೇಶ್, ಎಂಕೆ. ಸುರೇಶ್‌ ಕುಮಾರ್, ಎನ್‌.ರಮೇಶ್, ಜ್ಯೋತಿ ಪ್ರಕಾಶ್, ಪಾಲಿಕೆ ಮೇಯರ್ ಲತಾ ಗಣೇಶ್, ಉಪ ಮೇಯರ್ ಚನ್ನಬಸಪ್ಪ ಮೆರವಣಿಗೆಯಲ್ಲಿ ಭಾಗವಹಿಸಿ ಜನರನ್ನು ಹುರಿದುಂಬಿಸಿದರು.

Post Comments (+)