ನಿರ್ಲಕ್ಷ್ಯಕ್ಕೆ ಒಳಗಾದ ಗಾಂಧಿ ಸ್ಮಾರಕ ಭವನ

7
1950ರಲ್ಲಿ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೇರವೇರಿಸಿದ್ದ ಅಂದಿನ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ

ನಿರ್ಲಕ್ಷ್ಯಕ್ಕೆ ಒಳಗಾದ ಗಾಂಧಿ ಸ್ಮಾರಕ ಭವನ

Published:
Updated:
Deccan Herald

ಚನ್ನಪಟ್ಟಣ: ಮಹಾತ್ಮ ಗಾಂಧೀಜಿ ಅವರು ಭೇಟಿ ನೀಡಿದ್ದರ ಸವಿನೆನಪಿಗಾಗಿ ನಿರ್ಮಾಣಗೊಂಡಿದ್ದ ಇಲ್ಲಿನ ಗಾಂಧಿ ಸ್ಮಾರಕ ಭವನ ಶಿಥಿಲಗೊಂಡು ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಗಾಂಧೀಜಿ ಅವರು 1936ರಲ್ಲಿ ತಾಲ್ಲೂಕಿಗೆ ಆಗಮಿಸಿದ್ದ ಸಂದರ್ಭದಲ್ಲಿ ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರನ್ನು ಒಟ್ಟುಗೂಡಿಸಿ ಈ ಜಾಗದಲ್ಲಿ ಸಭೆ ನಡೆಸಿದ್ದರು. ಇದರ ನೆನಪಿಗಾಗಿ ಅದೇ ಜಾಗದಲ್ಲಿ ಈ ಸ್ಮಾರಕವನ್ನು ನಿರ್ಮಾಣ ಮಾಡಲಾಗಿತ್ತು. ಅಂದಿನ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರು 1950ರಲ್ಲಿ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಈ ಸ್ಮಾರಕವನ್ನು ಆ ನಂತರ ಕೇಂದ್ರ ಗ್ರಂಥಾಲಯವನ್ನಾಗಿ ಮಾರ್ಪಾಡು ಮಾಡಿ, ಓದುಗರಿಗೆ, ಸಾಹಿತ್ಯಾಭಿಮಾನಿಗಳಿಗೆ ಅನುಕೂಲ ಮಾಡಿ ಕೊಡಲಾಗಿತ್ತು.

ಆದರೆ, ಈಗ ಅದೇ ಭವನ ಪ್ರತಿನಿತ್ಯ ಕೆಲಸವಿಲ್ಲದವರ, ಕುಡಿದು ಮಲಗೋ ಸೋಮಾರಿಗಳ ತಾಣವಾಗಿದೆ. ಸ್ಮಾರಕವನ್ನು ಸಂರಕ್ಷಿಸಬೇಕಾದ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಈ ಬಗ್ಗೆ ಗಮನ ಹರಿಸುತ್ತಿಲ್ಲ.

ಬೀಳುವ ಹಂತದಲ್ಲಿರುವ ಕಟ್ಟಡದ ಗೋಡೆಗಳು, ಸರಿಯಾಗಿ ನಿರ್ವಹಣೆ ಇಲ್ಲದೆ ಬೆಳೆದು ನಿಂತಿರುವ ಗಿಡಗಳು, ಬೆಂಗಳೂರಿಗೆ ತೆರಳುವ ಕೆಲವರ ಬೈಕ್ ನಿಲ್ಲಿಸುವ ಜಾಗವಾಗಿದೆ ಈ ಭವನದ ಆವರಣ.  

ಗಾಂಧಿ ಸ್ಮಾರಕ ಭವನದಲ್ಲಿರುವ ಗ್ರಂಥಾಲಯ ಪ್ರತಿನಿತ್ಯ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ ತೆರೆದಿರುತ್ತದೆ. ಆನಂತರ ಗ್ರಂಥಾಲಯ ಮುಚ್ಚಿರುವ ಸಮಯದಲ್ಲಿ ವಿಶಾಂತ್ರಿಗೆಂದು ಈ ಆವರಣದಲ್ಲಿ ಕೆಲವರು ಬಂದು ಮಲಗಿಕೊಳ್ಳುತ್ತಾರೆ. ಭಾನುವಾರ ಸಂಘ ಸಂಸ್ಥೆಗಳು ಕಾರ್ಯಕ್ರಮ ಮಾಡಿಕೊಳ್ಳಲು ಇದನ್ನು ಬಳಸುತ್ತಾರೆ. ಹೋರಾಟಗಾರರು ತಮ್ಮ ಪ್ರತಿಭಟನೆ ಆರಂಭಿಸಲು ಈ ಜಾಗದಲ್ಲಿ ಜಮಾಯಿಸುತ್ತಾರೆ ಎಂದು ಗ್ರಂಥಾಲಯದ ಓದುಗರಾದ ಪ್ರಮೋದ್ ಹಾಗೂ ಶಿವಣ್ಣ ತಿಳಿಸುತ್ತಾರೆ.

ಭವನದ ಕಟ್ಟಡ ತೀರಾ ಹಳೆಯದಾಗಿದೆ. ಕಟ್ಟಡದ ಮೇಲ್ಛಾವಣಿ ಕಿತ್ತು ಬಿದ್ದಿದೆ. ಈ ಭವನದಲ್ಲಿರುವ ಗ್ರಂಥಾಲಯಕ್ಕೆ ಬರುವ ಎಷ್ಟೋ ಓದುಗರ ಮೇಲೂ ಸಿಮೆಂಟ್ ಕಾಂಕ್ರೀಟ್ ಬಿದ್ದು ಗಾಯಗಳಾಗಿರುವ ಘಟನೆಗಳೂ ನಡೆದಿದೆ. ರಾತ್ರಿಯ ವೇಳೆಯಲ್ಲಿ ಗ್ರಂಥಾಲಯ ಕುಡುಕರ ತಾಣವಾಗುತ್ತದೆ. ಇಷ್ಟಿದ್ದರೂ ಇಲ್ಲಿನ ಸಿಬ್ಬಂದಿ ಮಾತ್ರ ಯಾವುದಕ್ಕೂ ತಲೆಕೆಡಿಕೊಳ್ಳುತ್ತಿಲ್ಲ ಎಂಬುದು ಗ್ರಂಥಾಲಯದ ಓದುಗರಾದ ಲಕ್ಷ್ಮಣ್ ಹಾಗೂ ಅಭಿಲಾಷ್ ಅವರ ಆರೋಪ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !