ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕರು ಸರ್ಕಾರಿ ಸಮೂಹ ಸಾರಿಗೆ ಸೌಲಭ್ಯವನ್ನು ಬಳಸಬೇಕು: ಕಾರಜೋಳ

Last Updated 13 ಏಪ್ರಿಲ್ 2022, 14:57 IST
ಅಕ್ಷರ ಗಾತ್ರ

ಬೆಳಗಾವಿ: ‘ಸರ್ಕಾರಿ ವಾಹನಗಳು ಸುರಕ್ಷಿತವಾಗಿದ್ದು, ಸಾರ್ವಜನಿಕರು ಖಾಸಗಿ ವಾಹನಗಳಿಗಿಂತ ಸಮೂಹ ಸಾರಿಗೆ ಸೌಲಭ್ಯವನ್ನು ಬಳಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಲಹೆ ನೀಡಿದರು.

ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಬುಧವಾರ ನಡೆದ ವಾಯವ್ಯ ಕರ್ನಾಟಕ ರಸ್ಥೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದ ಅಪಘಾತರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಿಸಿ ಅವರು ಮಾತನಾಡಿದರು.

‘ಖಾಸಗಿ ಜೊತೆ ಸರ್ಕಾರಿ ಸಾರಿಗೆಯು ಪೈಪೋಟಿ ನಡೆಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಖಾಸಗಿ ಸಾರಿಗೆ ಬಸ್‌ ಅಥವಾ ವಾಹನಗಳಲ್ಲಿ ಯಾವುದೇ ಉತ್ತಮ ಗುಣಮಟ್ಟದ ಸುರಕ್ಷಿತ ವ್ಯವಸ್ಥೆ ಇರುವುದಿಲ್ಲ. ಆ ವಾಹನಗಳ ಅಪಘಾತಗಳು ಜಾಸ್ತಿ ಆಗುತ್ತಿವೆ’ ಎಂದರು.

ಮಾದರಿಯಾಗಿ ಮಾಡಿಕೊಳ್ಳಿ:

‘ಉತ್ತಮವಾಗಿ ಕಾರ್ಯನಿರ್ವಹಿಸಿದ ಚಾಲಕರು ಮತ್ತು ನಿರ್ವಾಹಕರಿಗೆ ಬೆಳ್ಳಿ ಹಾಗೂ ಬಂಗಾರದ ಪದಕ ನೀಡುವುದು ಉತ್ತಮ ಯೋಜನೆಯಾಗಿದೆ. ಉಳಿದ ಚಾಲಕರು ಇದನ್ನು ಮಾದರಿಯಾಗಿ ಇಟ್ಟುಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಪದಕ ಪಡೆದ ನೌಕರರು ಸಾರ್ವಜನಿಕರ ಜೀವ ಉಳಿಸುವ ಜೊತೆಗೆ ಉತ್ತಮ ಸೇವೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಚಾಲಕರೂ ಬೆಳ್ಳಿ ಮತ್ತು ಬಂಗಾರದ ಪದಕ ಪಡೆಯಬೇಕು’ ಎಂದು ಆಶಿಸಿದರು.

‘ಸಾರಿಗೆ ಸಂಸ್ಥೆಯು ಕೊರೊನಾ ಪರಿಸ್ಥಿತಿಯಿಂದ ನಷ್ಟವನ್ನು ಅನುಭವಿಸುತ್ತಿದೆ. ನಷ್ಟದಿಂದ ಹೊರಬರುವ ನಿಟ್ಟಿನಲ್ಲಿ ಸಂಸ್ಥೆಯವರು ಜವಾಬ್ದಾರಿ ಮತ್ತು ಕರ್ತವ್ಯ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ವೈ. ನಾಯಕ್, ‘ಅಪಘಾತ ಇಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸಿದ 125 ಮಂದಿ ಚಾಲಕರಿಗೆ ಬೆಳ್ಳಿ ಪದಕ, 5 ಜನ ಚಾಲಕರಿಗೆ ಬಂಗಾರದ ಪದಕ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಪದಕ ವಿಜೇತರ ಸಂಖ್ಯೆ ಹೆಚ್ಚಾಗಬೇಕು’ ಎಂದು ತಿಳಿಸಿದರು.

ಶಾಸಕ ಅನಿಲ ಬೆನಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ, ವಾ.ಕ.ರ.ಸಾ. ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲ, ಉಪಾಧ್ಯಕ್ಷರಾದ ಡಾ.ಬಸವರಾಜ ಎಸ್.ಕೆಲಗಾರ ಇದ್ದರು.

ಸಂಸ್ಥೆಯ ಕೇಂದ್ರ ಕಚೇರಿ ಸಹಾಯಕ ಸುನೀಲ ಪತ್ರಿ ನಿರೂಪಿಸಿದರು. ಕಾರ್ಮಿಕ ಕಲ್ಯಾಣ ಅಧಿಕಾರಿ ಸತ್ಯನಾರಾಯಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT