ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ಸರ್ಕಾರಿ ಶಾಲೆ ದತ್ತು

ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆಯ ವಿನೂತನ ಯೋಜನೆ
Last Updated 18 ಜನವರಿ 2019, 14:21 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸುವ ಗುರಿ ಹೊತ್ತಿರುವ ಶಿಕ್ಷಣ ಇಲಾಖೆಯು ಅಧಿಕಾರಿಗಳಿಗೆ 107 ಸರ್ಕಾರಿ ಪ್ರೌಢಶಾಲೆಗಳನ್ನು ದತ್ತು ನೀಡಿದೆ.

ಶುಕ್ರವಾರ ಈ ಯೋಜನೆಗೆ ಚಾಲನೆ ದೊರೆತಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಮೊದಲ ದಿನದಂದು ತರಗತಿ ತೆಗೆದುಕೊಂಡು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನು ಎರಡು ತಿಂಗಳಷ್ಟೇ ಬಾಕಿ ಉಳಿದಿದೆ. ಈ ಅವಧಿಯಲ್ಲಿ ದತ್ತು ಪಡೆದ ಅಧಿಕಾರಿಗಳು ತಮ್ಮ ಶಾಲೆಗಳ ಉಸ್ತುವಾರಿ ನೋಡಿಕೊಳ್ಳುವ ಜೊತೆಗೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಿದ್ದಾರೆ. ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಲಿದ್ದಾರೆ. ಮಾತ್ರವಲ್ಲ, ಶಾಲೆಯ ಸಣ್ಣಪುಟ್ಟ ಅಗತ್ಯಗಳನ್ನೂ ಪೂರೈಸಲಿದ್ದಾರೆ.

ಯಾರು ಯಾರಿಗೆ ಹೊಣೆ: ಜಿಲ್ಲಾಧಿಕಾರಿ, ಜಿ.ಪಂ. ಸಿಇಒ, ಎಸ್ಪಿ, ತಹಶೀಲ್ದಾರ್, ತಾ.ಪಂ. ಇಒ ... ಹೀಗೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ. ಸಬ್‌ ಇನ್‌ಸ್ಪೆಕ್ಟರ್ ಹಾಗೂ ಮೇಲಿನ ದರ್ಜೆಯ ಅಧಿಕಾರಿಗಳಿಗೂ ಈ ಹೊಣೆಯನ್ನು ಹಂಚಲಾಗಿದೆ.

ಹೆಚ್ಚಿನ ಅಧಿಕಾರಿಗಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದಾರೆ. ಬಡತನದಿಂದ ಬಂದವರಿದ್ದಾರೆ. ಅಂತಹವರು ವಿದ್ಯಾರ್ಥಿಗಳ ಜೊತೆ ಬೆರೆತು ಮಕ್ಕಳ ಸಮಸ್ಯೆ ಅರಿತು ಅದನ್ನು ಪರಿಹರಿಸುವ ಕೆಲಸ ಮಾಡಲಿದ್ದಾರೆ. ವಿದ್ಯಾರ್ಥಿಗಳ ಜೊತೆ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಪರೀಕ್ಷೆಗೆ ಬೇಕಾದ ಸಿದ್ಧತೆಗಳ ಕುರಿತು ಮಾರ್ಗದರ್ಶನ ಮಾಡಲಿದ್ದಾರೆ. ಜೊತೆಗೆ ಅವರಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವ ಕೆಲಸ ಮಾಡಲಿದ್ದಾರೆ. ಅಧಿಕಾರಿಗಳೇ ಪಾಠ ಮಾಡುವುದರಿಂದ ಸರ್ಕಾರಿ ಶಾಲೆಗಳ ಘನತೆ ಹೆಚ್ಚಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಚ್. ಗಂಗಮಾರೇಗೌಡ ತಿಳಿಸಿದರು. ಮುಂದಿನ ಶೈಕ್ಷಣಿಕ ವರ್ಷದ ಆರಂಭದಿಂದಲೇ ಈ ಯೋಜನೆಯನ್ನು ಕಾರ್ಯಗತಗೊಳಿಸುವುದಾಗಿ ಹೇಳಿದರು.

ಮೊದನ ದಿನದ ತರಗತಿ: ಶುಕ್ರವಾರದಂದು ಜಿ.ಪಂ. ಸಿಇಒ ಮುಲ್ಲೈ ಮುಹಿಲನ್ ತಾವು ದತ್ತು ಪಡೆದ ಚನ್ನಪಟ್ಟಣದ ಸರ್ಕಾರಿ ಬಾಲಕಿಯರ ಉರ್ದು ಪ್ರೌಢಶಾಲೆಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಯಾವುದೇ ಆತಂಕಕ್ಕೆ ಒಳಗಾಗದೇ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅಂತೆಯೇ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಬೆರೆತರು.


ಯಾರಿಗೆ ಯಾವ ಶಾಲೆ?
ಜಿಲ್ಲಾಧಿಕಾರಿಗೆ ಅವ್ವೇರಹಳ್ಳಿ ಪ್ರೌಢಶಾಲೆ, ಜಿ.ಪಂ. ಸಿಇಒಗೆ ಚನ್ನಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆ, ಹೆಚ್ಚುವರಿ ಜಿಲ್ಲಾಧಿಕಾರಿಗೆ ಕರೇನಹಳ್ಳಿ ಶಾಲೆ, ಉಪವಿಭಾಗಾಧಿಕಾರಿಗೆ ಮಾಯಗಾನಹಳ್ಳಿ ಶಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ರಾಮನಗರ ಸ.ಪ.ಪೂ. ಕಾಲೇಜಿನ ಪ್ರೌಢಶಾಲೆಯ ಹೊಣೆಯನ್ನು ನೀಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗೆ ಕೆಲವು ಶಾಲೆಗಳ ಹೆಚ್ಚುವರಿ ಹೊಣೆ ಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT