ಭಾನುವಾರ, ಫೆಬ್ರವರಿ 28, 2021
31 °C
ಬೆಳಿಗ್ಗೆ ಮಂದಗತಿ ನಂತರ ಬಿರುಸು ಪಡೆದುಕೊಂಡ ಮತದಾನ, ಸಂ‍ಪೂರ್ಣ ಶಾಂತಿಯುತ

ಗ್ರಾಮ ಸಮರ: ಮಂಡ್ಯದಲ್ಲಿ ಉತ್ಸಾಹ ತೋರಿದ ಮತದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಮದ್ದೂರು, ಮಳವಳ್ಳಿ, ಮಂಡ್ಯ ತಾಲ್ಲೂಕಿನಲ್ಲಿ ಮಂಗಳವಾರ ನಡೆದ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಸಂಪೂರ್ಣ ಶಾಂತಿಯುತವಾಗಿತ್ತು. ಗ್ರಾಮೀಣ ಜನರು ಬಹಳ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು.

ಬೆಳಿಗ್ಗೆ 7 ಗಂಟೆಯಿಂದ ಸಂಜೆಯ 5 ಗಂಟೆಯವರೆಗೆ ಶೇ 85.95ರಷ್ಟು ಮತದಾರರು ಹಕ್ಕು ಚಲಾವಣೆ ಮಾಡಿದರು. ಮೂರು ತಾಲ್ಲೂಕುಗಳಿಂದ 921 ಮತಗಟ್ಟೆಯಲ್ಲಿ ಮತದಾನ ನಡೆಯಿತು. ಕುತೂಹಲಕ್ಕೆ ಕಾರಣವಾಗಿದ್ದ ಚುನಾವಣೆಯಲ್ಲಿ ಜನರು ಬಹಳ ಉತ್ಸಾಹದಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿ ಮತಗಟ್ಟೆಯಲ್ಲಿ ಜನರು ಗುರುತು ಪತ್ರ ಹಿಡಿದು ಸಾಲುಗಟ್ಟಿ ನಿಂತಿದ್ದರು.

ಕೋವಿಡ್‌ –19 ಭಯದ ಹಿನ್ನೆಲೆಯಲ್ಲಿ ಪ್ರತಿ ಮತಗಟ್ಟೆಯ ಮುಂದೆ ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿ ಮತದಾರರನ್ನು ಒಳಗೆ ಬಿಡಲಾಯಿತು. ಮಾಸ್ಕ್‌ ಧರಿಸದವರಿಗೆ ಮತಗಟ್ಟೆಯೊಳಗೆ ಪ್ರವೇಶ ನಿಷೇಧಿಸಲಾಗಿತ್ತು. ಮತಗಟ್ಟೆ ಸಿಬ್ಬಂದಿಗೂ ಸುರಕ್ಷತಾ ಕಿಟ್‌ ವಿತರಣೆ ಮಾಡಲಾಗಿತ್ತು. ಪ್ರತಿಯೊಬ್ಬರೂ ಫೇಸ್‌ ಶೀಲ್ಡ್‌ ಧರಿಸಿ ಕರ್ತವ್ಯ ನಿರ್ವಹಿಸಿದರು.

ಪ್ರಜಾಪ್ರಭುತ್ವದ ಹಬ್ಬ

ಕೆಲವು ಮತಗಟ್ಟೆಗಳಿಗೆ ಗ್ರಾಮಸ್ಥರು ಮಾವಿನ ತೋರಣ ಕಟ್ಟಿ ಸಿಂಗಾರ ಮಾಡಿದ್ದರು. ದೂಳು ನಿಯಂತ್ರಣಕ್ಕಾಗಿ ಮತಗಟ್ಟೆಯ ಮುಂದೆ ಟ್ಯಾಂಕರ್‌ನಿಂದ ನೀರು ಹಾಕಲಾಗಿತ್ತು. ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಮತಗಟ್ಟೆಯ ಪ್ರವೇಶ ದ್ವಾರದಲ್ಲಿ ‘ಪ್ರಜಾಪ್ರಭುತ್ವದ ಹಬ್ಬ’ಕ್ಕೆ ಸ್ವಾಗತ ಎಂಬ ಫ್ಲೆಕ್ಸ್‌ ಅಳವಡಿಸಲಾಗಿತ್ತು. ವಿಧಾನಸಭೆ, ಲೋಕಸಭೆ ಚುನಾವಣೆಗಿಂತಲೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜನರು ಬಹಳ ಸಂಭ್ರದಿಂದ ಪಾಲ್ಗೊಳ್ಳುತ್ತಿದ್ದ ವಾತಾವರಣ ಕಂಡು ಬಂತು.

ಹೊಸ ಮತದಾರರು ಕೂಡ ಬಹಳ ಖುಷಿಯೊಂದಿಗೆ ಮತ ಚಲಾವಣೆ ಮಾಡಲು ಬಂದಿದ್ದರು. ಹಿರಿಯ ನಾಗರಿಕರು ತಮ್ಮ ಹಕ್ಕು ಚಲಾವಣೆ ಮಾಡಲು ಮತಗಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಪ್ರತಿ ಮತಗಟ್ಟೆಗೂ ತಲಾ 2 ವ್ಹೀಲ್‌ಚೇರ್‌ ವಿತರಣೆ ಮಾಡಲಾಗಿತ್ತು. ಹಿರಿಯ ನಾಗರಿಕರನ್ನು ಅವರ ಮೊಮ್ಮಕ್ಕಳು, ಸಂಬಂಧಿಗಳು ಕರೆತಂದು ಮತ ಚಲಾವಣೆ ಮಾಡಿಸುತ್ತಿದ್ದರು.

ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಮಂಡ್ಯ ತಾಲ್ಲೂಕಿನಲ್ಲಿ ಶೇ 8.98ರಷ್ಟು, ಮದ್ದೂರು ತಾಲ್ಲೂಕಿನಲ್ಲಿ ಶೇ 9.76ರಷ್ಟು, ಮಳವಳ್ಳಿ ತಾಲ್ಲೂಕಿನಲ್ಲಿ 7.89ರಷ್ಟು, ಒಟ್ಟಾರೆ ಶೇ 8.9ರಷ್ಟು ಮತದಾನವಾಗಿತ್ತು. ಬೆಳಿಗ್ಗೆ 11 ಗಂಟೆಯವರೆಗೆ ಮಂಡ್ಯ ಶೇ 23.32, ಮದ್ದೂರು, ಶೇ 27.23, ಮಳವಳ್ಳಿ ಶೇ 25.11, ಒಟ್ಟಾರೆ ಶೇ 2.16ರಷ್ಟ ಮತದಾನವಾಗಿತ್ತು.

ಮಧ್ಯಾಹ್ನ 1 ಗಂಟೆಯವರೆಗೆ ಮಂಡ್ಯ ತಾಲ್ಲೂಕಿನಲ್ಲಿ ಸೇ 46.49, ಮದ್ದೂರು ಶೇ 50.03, ಮಳವಳ್ಳಿ ಶೇ 48.25ರಷ್ಟು, ಒಟ್ಟಾರೆ 48.25ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆಯ ವೇಳೆಗೆ ಮಂಡ್ಯ ಶೇ 67.91ರಷ್ಟು, ಮದ್ದೂರು ಶೇ 71.43, ಮಳವಳ್ಳಿ ಶೇ 67.32ರಷ್ಟು, ಒಟ್ಟಾರೆ 67.88ರಷ್ಟು ಮತದಾನವಾಗಿತ್ತು. ಸಂಜೆ 5 ಗಂಟೆಯಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಾಗ 85.95ರಷ್ಟು ಮತದಾನವಾಗಿತ್ತು.

ಮತಗಟ್ಟೆಗೆ ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ಪರಿಶೀಲನೆ ನಡೆಸಿದರು. ಕ್ಯಾತುಂಗೆರೆ, ಸುಂಡಹಳ್ಳಿ ಮತಗಟ್ಟೆಗೆ ತೆರಳಿ ಮತದಾನ ಪ್ರಕ್ರಿಯೆ ವೀಕ್ಷಣೆ ಮಾಡಿದರು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಮತಗಟ್ಟೆಯೊಳಗೆ ತೆರಳುವಂತೆ ಸೂಚನೆ ನೀಡಿದರು.

ಪರ ಊರುಗಳಿಗೆ ವಲಸೆ ಹೋಗಿದ್ದ ಜನರು ನೇರವಾಗಿ ಮತಗಟ್ಟೆಗಳಿಗೆ ಕುಟುಂಬ ಸಮೇತರಾಗಿ ಬಂದು ಮತ ಚಲಾವಣೆ ಮಾಡುತ್ತಿದ್ದರು. ಬೆಂಗಳೂರು, ಮೈಸೂರುಗಳಿಂದ ಕಾರು, ವ್ಯಾನ್‌ಗಳ ಮೂಲಕ ಮತಗಟ್ಟೆಗಳಿಗೆ ಬರುತ್ತಿದ್ದರು.

ಮತಗಟ್ಟೆ ಬಳಿಯೂ ಪ್ರಚಾರ

ಮತಗಟ್ಟೆ ಸಮೀಪದಲ್ಲೇ ಅಭ್ಯರ್ಥಿಗಳು ಮತದಾರರಿಗೆ ಕೈಮುಗಿದು ತಮ್ಮ ಗುರುತಿಗೇ ಮತ ಹಾಕುವಂತೆ ಮನವಿ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಪೊಲೀಸರು ಇದಕ್ಕೆ ಅವಕಾಶ ನೀಡದೆ ದೂರ ಕಳುಹಿಸುತ್ತಿದ್ದರೂ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಕಡೇ ಕ್ಷಣದ ಕಸರತ್ತಿನಲ್ಲಿ ತೊಡಗಿದ್ದರು.

ಅಭ್ಯರ್ಥಿಗಳ ಬೆಂಬಲಿಗರು ಮತಗಟ್ಟೆಯಿಂದ ಕೊಂಚ ದೂರದಲ್ಲಿ ಮತದಾರರ ಪಟ್ಟಿಯೊಂದಿಗೆ ಜನರಿಗೆ ಚೀಟಿಗಳನ್ನು ವಿತರಣೆ ಮಾಡುತ್ತಿದ್ದರು. ಅಲ್ಲೂ ಮತದಾರರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿದ್ದವು. ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಿದ್ದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಮತದಾನದ ನಂತರ ಆಯಾ ತಾಲ್ಲೂಕುಗಳ ಮಸ್ಟರಿಂಗ್‌ ಕೇಂದ್ರಗಳಲ್ಲಿ ಮತಪೆಟ್ಟಿಗೆಗಳನ್ನು ಸಂಗ್ರಹ ಮಾಡಲಾಯಿತು.

ಕಾಡಿದ ಚುಮುಚುಮು ಚಳಿ

ಮಂಗಳವಾರ ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು. ಹೀಗಾಗಿ ಜನರು ಚುಮುಚುಮು ಚಳಿಯಲ್ಲಿ ಮನೆಯಿಂದ ಹೊರಬರಲು ಕಷ್ಟಪಡಬೇಕಾಯಿತು. ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾದ ಮತದಾನ ಮಂದಗತಿಯಲ್ಲಿತ್ತು.  ಕೆಲವರು ಸ್ವೆಟರ್‌, ಟೋಪಿ ಧರಿಸಿ ಧರಿಸಿ ಬೆಳ್ಳಂಬೆಳಿಗ್ಗೆಯೇ ಬಂದು ಮತದಾನ ಮಾಡಿದರು.

ಬೆಳಿಗ್ಗೆ 9 ಗಂಟೆಗೆ ಬಿಸಿಲು ಬಂದ ನಂತರ ಹೆಚ್ಚಿನ ಸಂಖ್ಯೆಯ ಜನರು ಮತಗಟ್ಟೆಗೆ ಬರಲಾರಂಭಿಸಿದರು. ಕೆಲ ಮತಗಟ್ಟೆಗಳ ಸಮೀಪ ಬೆಂಕಿ ಹಾಕಿಕೊಂಡು ಮೈಕಾಯಿಸಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಕುಸಿದು ಬಿದ್ದ ಮಹಿಳೆ

ಮದ್ದೂರು ತಾಲ್ಲೂಕು ಚಿಕ್ಕದೊಡ್ಡಿ ಮತಗಟ್ಟೆಯಲ್ಲಿ ಸಾಲಿನ ಮೂಲಕ ಬರುತ್ತಿದ್ದ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಕುಸಿದು ಬಿದ್ದರು. ತಕ್ಷಣ ಜನರು, ಮತಗಟ್ಟೆ ಸಿಬ್ಬಂದಿ ನೀರು ಕುಡಿಸಿ ಅವರನ್ನು ಸಂತೈಸಿದ್ದರು. ಆರೋಗ್ಯ ಸರಿ ಇಲ್ಲದ ಕಾರಣ ಅವರು ಸುಸ್ತಾಗಿ ಕುಸಿದರು. ಅವರು ಮೊದಲು ಮತದಾನ ಮಾಡಲು ಸಿಬ್ಬಂದಿ ಅವಕಾಶ ಮಾಡಿಕೊಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು