ಗುಡ್ಡೇಕಲ್‌ ಜಾತ್ರಾ ಮಹೋತ್ಸವಕ್ಕೆ ವೈಭವದ ಚಾಲನೆ

7
ತಂತಿ ಹಾಗೂ ತ್ರಿಶೂಲದಿಂದ ಗಲ್ಲ, ನಾಲಿಗೆ ಚುಚ್ಚಿಕೊಂಡ ಭಕ್ತರ ಭಕ್ತಿಯ ಪರಾಕಾಷ್ಠೆ

ಗುಡ್ಡೇಕಲ್‌ ಜಾತ್ರಾ ಮಹೋತ್ಸವಕ್ಕೆ ವೈಭವದ ಚಾಲನೆ

Published:
Updated:
Deccan Herald

ಶಿವಮೊಗ್ಗ: ಪ್ರಸಿದ್ಧ ಗುಡ್ಡೇಕಲ್‌ ಬಾಲಸುಬ್ರಮಣ್ಯ ಸ್ವಾಮಿ ಜಾತ್ರಾ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ಆರಂಭವಾಯಿತು.

ಎರಡು ದಿನಗಳು ನಡೆಯುವ ಈ ಜಾತ್ರಾ ಮಹೋತ್ಸವದ ಮೊದಲ ದಿನ ದೂರದ ಊರುಗಳಿಂದ ಕಾಲುನಡೆಗೆಯಲ್ಲಿ ಕಾವಡಿ ಹೊತ್ತು ಬಂದಿದ್ದ ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಈ ಜಾತ್ರೆಗೆ ಎಲ್ಲ ಸಮುದಾಯದ ಜನರು ಬಂದರೂ, ತಮಿಳು ಸಮುದಾಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ರಾಜ್ಯದ ವಿವಿಧ ಜಿಲ್ಲೆಗಳು, ಹೊರ ರಾಜ್ಯಗಳ ಭಕ್ತರು ಇಲ್ಲಿಗೆ ಬಂದು ದೇವರ ದರ್ಶನ ಪಡೆದರು.

ಜಾತ್ರೆ ಪ್ರಯುಕ್ತ ಭಕ್ತರು ವಿವಿಧ ಹೂ ಮಾಲೆಗಳಿಂದ ಅಲಂಕರಿಸಿದ ಕರಗ ಹೊತ್ತು ಗುಂಪುಗುಂಪಾಗಿ ಬರುತ್ತಿದ್ದ ದೃಶ್ಯಗಳನ್ನು ಶಿವಮೊಗ್ಗದ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಭಕ್ತಿಯ ಸೊಬಗು ಕಣ್ತುಂಬಿಕೊಂಡರು.

ಭಕ್ತಿಯ ಪರಾಕಾಷ್ಟೆಯಲ್ಲಿ ಹರಕೆ ತೀರಿಸುವ ಸಲುವಾಗಿ ಕೆಲವು ಭಕ್ತರು ಗಲ್ಲ, ನಾಲಿಗೆ ಭಾಗಕ್ಕೆ ತಂತಿ ಹಾಗೂ ತ್ರಿಶೂಲದಿಂದ ಚುಚ್ಚಿಕೊಂಡು ಹರೋಹರ ಎಂದು ಘೊಷಣೆ ಕೂಗುತ್ತಾ ಬರುತ್ತಿದ್ದರು. ತುಂತುರು ಮಳೆಯ ಸಿಂಚನದ ಮಧ್ಯೆಯೇ ಭಕ್ತರು ಕಾವಡಿ ಹೊತ್ತು ಸುಬ್ರಮಣ್ಯ ಸ್ವಾಮಿಗೆ ಹರಕೆ ತೀರಿಸಿದರು. ದೇವಸ್ಥಾನದಲ್ಲಿ ಸುಬ್ರಮಣ್ಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬುಡಕಟ್ಟು ಸಂಪ್ರದಾಯದ ವಿಶೇಷ ಪೂಜೆ ನೆರವೇರಿಸಲಾಯಿತು.

ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ ದೇವಸ್ಥಾನಕ್ಕೆ ಬರುವ ಎಲ್ಲ ಭಕ್ತರಿಗೂ ಪ್ರಸಾದ ವ್ಯವಸ್ಥೆ ಮಾಡಿತ್ತು. ಭಕ್ತರಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿತ್ತು.

ದೇವಸ್ಥಾನದ ಸುತ್ತಮುತ್ತಲೂ ಹಣ್ಣು, ಕಾಯಿ, ಹೂ, ಮಕ್ಕಳ ಆಟಿಕೆಗಳ ಮಳಿಗೆಗಳು ತಲೆಎತ್ತಿದ್ದವು. ಜಾತ್ರೆಗೆ ಬಂದ ಭಕ್ತರಲ್ಲದೇ ಸ್ಥಳೀಯ ಪೋಷಕರು ಮಕ್ಕಳಿಗಾಗಿ ಜಾತ್ರೆ ತೋರಿಸುತ್ತಾ ಆಟಿಕೆ ಸೇರಿದಂತೆ ವಿವಿಧ ಸಾಮಗ್ರಿ ಖರೀದಿಸಿದರು.

ಗುಡ್ಡೆಕಲ್ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈಶಾನ್ಯ ದಿಕ್ಕಿನ ಮಹಾದ್ವಾರ ಪೂರ್ಣಗೊಂಡಿದ್ದು, ಈಶಾನ್ಯ ದಿಕ್ಕಿಯಿಂದ ಹರಕೆ, ಕಾವಡಿ ಹೊತ್ತು ಬರುವ ಭಕ್ತರಿಗೆ, ಸಾರ್ವಜನಿಕರಿಗೆ ಈ ಮಹಾದ್ವಾರದ ಮೂಲಕವೇ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಿಶೇಷ ಕಾಳಜಿ ವಹಿಸಿ ಪ್ರತ್ಯೇಕವಾಗಿ 36 ಮೆಟ್ಟಿಲು ಹಾಗೂ ನೂತನ ರಸ್ತೆ ನಿರ್ಮಿಸಿರುವುದು ಕರಗಹೊತ್ತ ಭಕ್ತರಿಗೆ ಅನುಕೂಲವಾಗಿತ್ತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !