‘ಹಸಿರು ಕರ್ನಾಟಕ' ಸ್ವಾತಂತ್ರ್ಯ ದಿನಾಚರಣೆ

7
ಆ.18ರವರೆಗೆ ವಿವಿಧೆಡೆ ಸಸಿ ನೆಡುವ ಮೂಲಕ ವನಮಹೋತ್ಸವ

‘ಹಸಿರು ಕರ್ನಾಟಕ' ಸ್ವಾತಂತ್ರ್ಯ ದಿನಾಚರಣೆ

Published:
Updated:
Deccan Herald

ಮಾಗಡಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆ.15ರಂದು ಬೆಳಿಗ್ಗೆ 9ಕ್ಕೆ ಪಟ್ಟಣದ ಸರ್ಕಾರಿ ಕಿರಿಯ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮೊದಲಿಗೆ ಶಾಸಕ ಎ.ಮಂಜುನಾಥ, ಸಸಿನೆಟ್ಟು ಹಸಿರು ಕರ್ನಾಟಕ ನಿರ್ಮಾಣಕ್ಕಾಗಿ ಪ್ರತಿಜ್ಞೆ ಸ್ವೀಕರಿಸಿದ ನಂತರ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ ಎಂದು ವಲಯ ಅರಣ್ಯ ಅಧಿಕಾರಿ ತಿಮ್ಮರಾಯಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಡಿಸಿದ 2018–19ನೇ ಸಾಲಿನ ಬಜೆಟ್‌ನಲ್ಲಿ ಹಸಿರು ಕರ್ನಾಟಕ ಕಾರ್ಯಕ್ರಮದ ಮೂಲಕ ಸಸಿನೆಟ್ಟು ಸ್ವಾತಂತ್ರ್ಯ ದಿನಾಚರಣೆ ಆಚರಿಸುವಂತೆ ಆದೇಶ ನೀಡಿದ್ದಾರೆ ಎಂದು ತಿಳಿಸಿದರು.

ಆ.18ರವರೆಗೆ ವಿವಿಧೆಡೆಗಳಲ್ಲಿ ಸಸಿ ನೆಡುವ, ವಿತರಿಸುವ ಮೂಲಕ ವನಮಹೋತ್ಸವ ಆಚರಿಸಲಾಗುವುದು. ಈ ಕಾರ್ಯಕ್ರಮದ ಅಡಿಯಲ್ಲಿ ಸಾಮಾಜಿಕ ಅರಣ್ಯ ಬೆಳವಣಿಗೆಗೆ ಹೆಚ್ಚು ಒತ್ತು ನೀಡುವ ಮೂಲಕ ಸಣ್ಣಪುಟ್ಟ ಬೆಟ್ಟ–ಗುಡ್ಡಗಳು, ಗೋಮಾಳ ಮತ್ತು ಕೆರೆ ಅಂಗಳ ಸುತ್ತಲಿನ ಸರ್ಕಾರಿ ಜಮೀನುಗಳಲ್ಲಿ ಸ್ಥಳೀಯ ದೇಸಿ ಸಸಿಗಳನ್ನು ನೆಡಲಾಗುವುದು ಎಂದು ಮಾಹಿತಿ ನೀಡಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳು, ಪರಿಸರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಸೇರಿಸಿಕೊಂಡು ಮನೆಗೊಂದು ಮತ, ಊರಿಗೊಂದು ತೋಪು, ತಾಲ್ಲೂಕಿಗೆ ಒಂದು ಕಿರು ಅರಣ್ಯ ಬೆಳೆಸಲಾಗುವುದು. ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳ ಆವರಣದಲ್ಲಿ ಸಸಿ ನೆಡಲಾಗುವುದು ಎಂದರು.

ಹಸಿರು ಕರ್ನಾಟಕ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸರ್ಕಾರ ಬಜೆಟ್‌ನಲ್ಲಿ ₹1000 ಲಕ್ಷ ಅನುದಾನ ಒದಗಿಸಿದೆ. ಕೃಷಿ ಮತ್ತು ಖಾಸಗಿ ಜಮೀನುಗಳಲ್ಲಿ ಸಸಿ ನೆಡಲು ರಿಯಾಯ್ತಿ ದರದಲ್ಲಿ ನೀಡಲಾಗುವುದು ಎಂದರು.

ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಅರಣ್ಯ ಇಲಾಖೆ 20 ವನಪಾಲಕರು ಸೈನಿಕರಂತೆ ಸಮವಸ್ತ್ರ ಧರಿಸಿ, ಸಸಿ ವಿತರಿಸಲಿದ್ದಾರೆ ಎಂದು ವಲಯ ಅರಣ್ಯ ಅಧಿಕಾರಿ ತಿಳಿಸಿದರು.

ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಆಶಾ.ಕೆ.ಎಸ್‌.ಮಾತನಾಡಿ, ‘ಕಾಡಿದ್ದರೆ ನಾಡು, ಇಲ್ಲಿದರೆ ಸುಡುಗಾಡು’ ಎಂಬ ಅನುಭಾವಿಗಳ ಮಾತಿನಂತೆ ಜನಸಂಖ್ಯೆಗೆ ಅನುಗುಣವಾಗಿ ವನ ಸಂಪತ್ತು ಬೆಳೆಸುವುದು ನಮ್ಮೆಲ್ಲರ ಗುರಿಯಾಗಿದೆ ಎಂದರು.

ಮನೆಗೊಂದು ಮಗು, ಮಗುವಿಗೊಂದು ಸಸಿ ನೆಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನೆಡುತೋಪು ಬೆಳೆಸುವ ಮೂಲಕ ಹಸಿರು ಕರ್ನಾಟಕ ನಿರ್ಮಾಣಕ್ಕೆ ಸರ್ವರೂ ಶ್ರಮಿಸಬೇಕು ಎಂದರು.

ಉಪವಲಯ ಅರಣ್ಯ ಅಧಿಕಾರಿಗಳಾದ ಚಿದಾನಂದಪ್ಪ, ವರದರಾಜು, ಕೆಂಪೇಗೌಡ, ಕೃಷ್ಣಮೂರ್ತಿ, ವನಪಾಲಕರಾದ ಸಿದ್ದರಾಜು, ಬಸವರಾಜು ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !