ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ಚೇತನ ಯೋಜನೆ: ಮೇ 6ಕ್ಕೆ ಚಾಲನೆ

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ
Last Updated 2 ಮೇ 2020, 12:04 IST
ಅಕ್ಷರ ಗಾತ್ರ

ಶಿವಮೊಗ್ಗ: ಅಂತರ್ಜಲ ಚೇತನ ಯೋಜನೆಗೆ ಮೇ 6ರಂದು ಜಿಲ್ಲೆಯಲ್ಲಿ ಅಧಿಕೃತ ಚಾಲನೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ 9 ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯನ್ನು ‘ಪೈಲೆಟ್ ಪ್ರಾಜೆಕ್ಟ್‌’ ಆಗಿ ತೆಗೆದುಕೊಳ್ಳಲಾಗಿದೆ.

ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲೇ ಅಂತರ್ಜಲ ಚೇತನ ಅನುಷ್ಠಾನಗೊಳಿಸಲಾಗುತ್ತಿದೆ. ಖಾತ್ರಿಯ 260 ಕಾಮಗಾರಿಗಳಲ್ಲಿ 181 ಕಾಮಗಾರಿಗಳು ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಮೀಸಲಿಡಲಾಗಿದೆ. ಜಿಲ್ಲೆಯ ಎಲ್ಲ ಹಳ್ಳಿಗಳನ್ನೂಯೋಜನೆ ವ್ಯಾಪ್ತಿಗೆ ತರಲಾಗಿದೆ. ತಿಂಗಳಿಗೆ 4 ಸಾವಿರ ಕಾಮಗಾರಿ ನಡೆಯಲಿದ್ದು, ವರ್ಷಕ್ಕೆ 32,700 ಕಾಮಗಾರಿ ಪೂರೈಸುವ ಗುರಿ ಹೊಂದಲಾಗಿದೆ. ₹252 ಕೋಟಿ ಮೀಸಲಿಡಲಾಗಿದೆ ಎಂದುಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ತಾಲ್ಲೂಕಿನತಮ್ಮಡಿಹಳ್ಳಿ ಅಥವಾ ಆಯನೂರು, ಸಾಗರತಾಲ್ಲೂಕಿನ ಕೆಳದಿ, ತೀರ್ಥಹಳ್ಳಿಯ ಆರಗ, ಭದ್ರಾವತಿಯ ದೊಡ್ಡೇರಿ, ಸೊರಬದ ಬಾರಂಗಿ, ಶಿಕಾರಿಪುರದ ತರಲಘಟ್ಟ, ಹೊಸನಗರತಾಲ್ಲೂಕಿನ ಮೇಲಿನ ಬೆಸಿಗೆ ಗ್ರಾಮಗಳಲ್ಲಿಏಕಕಾಲಕ್ಕೆಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.

ಮಳೆ ನೀರು ಸಂಗ್ರಹ, ಮಣ್ಣಿನ ಸವಕಳಿ ತಡೆಯುವುದು, ಸ್ವಾಭಾವಿಕ ಹಳ್ಳಗಳ ಉದ್ದಕ್ಕೂ ಕೃತಕ ಅಂತರ್ಜಲ ಮರುಪೂರಣಗಳ ರಚನೆ, ಸ್ವಾಭಾವಿಕ ಸಸ್ಯವರ್ಗ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇಂಗುಬಾವಿ, ಇಂಗು ಕೊಳವೆ ಬಾವಿಗಳು, ಕೆರೆ, ಹೊಂಡ ಕಾಮಗಾರಿಗಳು, ಬಾವಿಗಳ ಮರುಪೂರಣಕಾಮಗಾರಿ ಕೈಗೊಳ್ಳಲಾಗುವುದು. ಇದು ಸಂಪೂರ್ಣ ಮಾನವ ಬಳಕೆಯ ಯೋಜನೆ. ಪ್ರತಿ ವ್ಯಕ್ತಿಗೆ ದಿನಕ್ಕೆ ₹275 ಕೂಲಿ ನೀಡಲಾಗುವುದು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಕಾರ್ಯಕರ್ತರು ತಾಂತ್ರಿಕ ಸಹಾಯ ಒದಗಿಸುವ ಜತೆಗೆ, ಮೇಲುಸ್ತುವಾರಿ ನಿರ್ವಹಿಸುವರು. ಅವರ ವೇತನ ಭತ್ಯೆಗಳನ್ನು ಸಂಸ್ಥೆಯೇ ಭರಿಸಲಿದೆ ಎಂದು ವಿವರ ನೀಡಿದರು.

ಕೆರೆ ಅಭಿವೃದ್ಧಿಗಾಗಿ ಈ ವರ್ಷ ಜಲಾಮೃತದಲ್ಲಿ ₹14 ಕೋಟಿ ತೆಗೆದಿಡಲಾಗಿದೆ. ರಾಜ್ಯದಲ್ಲಿ ಇರುವ 23 ಸಾವಿರ ಕೆರೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ಕೆರೆಗಳು ಜಿಲ್ಲೆಯಲ್ಲೇ ಇವೆ. ಶಿವಮೊಗ್ಗ ನಗರದಲ್ಲಿ 70 ಕೆರೆಗಳಿವೆ. ಕೆರೆ ಒತ್ತುವರಿ ಮಾಡಿದವರು ಸ್ವಯಂ ತೆರೆವುಗೊಳಿಸಲು ಮನವಿ ಮಾಡಲಾಗುವುದು. ನಂತರ ಕಾನೂನು ಕ್ರಮ ಜರುಗಿಸಲಾಗುವುದು. ನಗರದ ಮೂರು ಕೆರೆಗಳ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ನೀಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸಿಇಒಎಂ.ಎಲ್. ವೈಶಾಲಿ, ಆರ್ಟ್ಆಫ್ ಲಿಂವಿಂಗ್‌ ಸಂಸ್ಥೆಯ ಸಂಯೋಜಕ ನಾಗರಾಜ್ ಗೊಂಗೊಳ್ಳಿ, ಯೋಜನಾ ನಿರ್ದೇಶಕ ಕೆ.ವಿ.ಗಂಗೊಳ್ಳಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT