ಪ್ರಸಿದ್ಧ ಗುಡ್ಡೆಕಲ್‌ ಜಾತ್ರೆ ನಾಳೆ ಆರಂಭ

7
ಹೊಳೆನಿಲ್ದಾಣದಿಂದ ಗುರುಪುರದವರೆಗೆ ಎರಡು ದಿನ ವಾಹನ ಸಂಚಾರ ಬಂದ್

ಪ್ರಸಿದ್ಧ ಗುಡ್ಡೆಕಲ್‌ ಜಾತ್ರೆ ನಾಳೆ ಆರಂಭ

Published:
Updated:

ಶಿವಮೊಗ್ಗ: ಹೊಳೆಹೊನ್ನೂರು ರಸ್ತೆಯ ಗುಡ್ಡೇಕಲ್ ಶ್ರೀಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಆ. 4ರಂದು ಭರಣಿ ಕಾವಡಿ ಹಾಗೂ 5ರಂದು ಅಡಿಕೃತ್ತಿಕೆ ಜಾತ್ರಾ ಮಹೋತ್ಸವ ನೆರವೇರಲಿದೆ.

ಎರಡು ದಿನದ ಜಾತ್ರಾ ಮಹೋತ್ಸವದಲ್ಲಿ ಸುಮಾರು 2ಲಕ್ಷ ಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಕ್ತರು, ವಿಶೇಷವಾಗಿ ತಮಿಳು ಸಮುದಾಯದ ಜನರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಾರೆ.

ಭಕ್ತರ ಭಕ್ತಿಯ ಪರಾಕಾಷ್ಠೆ:

ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯ ಮೂಲೆಮೂಲೆಗಳಿಂದ ನಡೆದುಕೊಂಡು ಬರುವ ಭಕ್ತರು ವಿವಿಧ ಹೂವುಗಳ ಮಾಲೆಯಿಂದ ಅಲಂಕರಿಸಿದ ಕರಗ ಹೊತ್ತು ಗುಂಪುಗುಂಪಾಗಿ ಬರುವ ದೃಶ್ಯ ಕಣ್ಣಿಗೆ ನೋಡಲು ಹಬ್ಬ. ಜತೆಗೆ ಹಲವು ಭಕ್ತರು ಗಲ್ಲ, ನಾಲಿಗೆ ಭಾಗಕ್ಕೆ ತಂತಿಯಿಂದ ಚುಚ್ಚಿಕೊಂಡು ನಡೆಯುವ ದೃಶ್ಯ ಭಕ್ತಿಯ ಪಾರಾಕಾಷ್ಠೆಗೆ ದ್ಯೋತಕ.

 

ಪ್ರವಾಸಿ ತಾಣವಾಗಿ ಗುಡ್ಡೆಕಲ್:

ಗುಡ್ಡೇಕಲ್‌ ಪ್ರದೇಶವನ್ನು ಪ್ರವಾಸಿ ತಣವವಾಗಿ ಅಭಿವೃದ್ಧಿಪಡಿಸಲು ಹಲವು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಗುಡ್ಡೇಕಲ್‌ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎಂ.ಪಿ.ಸಂಪತ್ ಮಾಹಿತಿ ನೀಡಿದರು.

ಹಲವು ವರ್ಷ ನೆನೆಗುದ್ದಿಗೆ ಬಿದ್ದಿದ ಈಶಾನ್ಯ ದಿಕ್ಕಿನ ಮಹಾದ್ವಾರ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿದೆ. ಈಶಾನ್ಯ ದಿಕ್ಕಿನಿಂದ ಹರಕೆ ಕಾವಡಿಗಳನ್ನು ಹೊತ್ತು ಬರುವ ಭಕ್ತರಿಗೆ, ಸಾರ್ವಜನಿಕರಿಗೆ ವಿಶೇಷ ಕಾಳಜಿವಹಿಸಿ ಪ್ರತ್ಯೇಕವಾಗಿ 36 ಮೆಟ್ಟಿಲು ಹಾಗೂ ನೂತನ ರಸ್ತೆ ನಿರ್ಮಿಸಲಾಗಿದೆ. ಆ. 4ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನಾ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ದೇವಸ್ಥಾನದ ಆವರಣದಲ್ಲಿ ಸಕಲ ವ್ಯವಸ್ಥೆಯುಳ್ಳ ಮೂರು ಸಮುದಾಯ ಭವನ ನಿರ್ಮಿಸಲಾಗಿದೆ. ಎಲ್ಲಾ ಜಾತಿ,- ಜನಾಂಗದವರಿಗೆ ಮದುವೆ ಹಾಗೂ ಸಭೆ ಸಮಾರಂಭಕ್ಕೆ ಕನಿಷ್ಠ ದರದಲ್ಲಿ ನೀಡಲಾಗುವುದು. ಎಲ್ಲ ಸೌಲಭ್ಯ ಒದಗಿಸಲಾಗುವುದು ಎಂದರು.

ಪ್ರತಿ ತಿಂಗಳ ಷಷ್ಟಿ, ಕೃತ್ತಿಕೆ, ಪ್ರತಿ ಮಂಗಳವಾರ ಮತ್ತು ಶುಕ್ರವಾರ ಸ್ವಾಮೀಯ ವಿಶೇಷ ದಿನಗಳಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಎಲ್ಲರ ಸಹಕಾರದ ಸ್ಮರಣೆ: ಜಾತ್ರೆಗೆ ಬರುವ ಭಕ್ತರಿಗೆ ಶುದ್ಧ ಕುಡಿಯುವ ನೀರು, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಮೊಬೈಲ್ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲಾ ಪೊಲಿಸರು ಹಾಗೂ ನಗರಪಾಲಿಕೆ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು ನಿರೀಕ್ಷೆಗೂ ಮೀರಿ ಸಹಕಾರ ನೀಡಿದ್ದಾರೆ ಎಂದು ಸಂಪತ್‌ ಶ್ಲಾಘಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಪಿ. ರಘುಕುಮಾರ್, ಎಂ. ಲೋಕೇಶ್, ಪಿ. ರವಿಕುಮಾರ್, ಸಿ. ರವಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !