ಮುದ್ದೇಬಿಹಾಳಪುರಸಭೆ ಅತಂತ್ರ: ಚುಕ್ಕಾಣಿಕ್ಕಾಗಿ ‘ಕೈ’ಚಳಕ;ತಂತ್ರಕ್ಕೆ ಪ್ರತಿತಂತ್ರ!

7
ಮುದ್ದೇಬಿಹಾಳ ಪುರಸಭೆ ಅತಂತ್ರ; ಕಾಂಗ್ರೆಸ್–ಬಿಜೆಪಿ ಸಮಬಲ

ಮುದ್ದೇಬಿಹಾಳಪುರಸಭೆ ಅತಂತ್ರ: ಚುಕ್ಕಾಣಿಕ್ಕಾಗಿ ‘ಕೈ’ಚಳಕ;ತಂತ್ರಕ್ಕೆ ಪ್ರತಿತಂತ್ರ!

Published:
Updated:

ಮುದ್ದೇಬಿಹಾಳ: ಪಟ್ಟಣದ ಪುರಸಭೆ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಬಹು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷಗಳೆರಡು ಮೇಲುಗೈ ಸಾಧಿಸಿವೆ. ಜತೆಗೆ ಸಮಬಲವೂ ಸಿಕ್ಕಿದೆ. ಪಕ್ಷೇತರರ ಹಾಗೂ ಪ್ರಾದೇಶಿಕ ಪಕ್ಷದ ಪ್ರಾಬಲ್ಯ ಈ ಬಾರಿ ತಗ್ಗಿದ್ದರೂ ನಿರ್ಣಾಯಕ ಸ್ಥಾನದಲ್ಲಿರುವುದು ವಿಶೇಷ.

23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್‌, ಬಿಜೆಪಿ ತಲಾ ಎಂಟು ಸ್ಥಾನ ಗೆದ್ದಿವೆ. ಜೆಡಿಎಸ್‌ ಎರಡು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರೆ; ಪಕ್ಷೇತರರು ಐದು ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಸಂದರ್ಭ ಶಾಸಕ, ಸಂಸದರ ಮತವೂ ಪರಿಗಣನೆಯಾಗುವುದರಿಂದ ಬಿಜೆಪಿ ಬಲ 10ಕ್ಕೇರಿದಂತಾಗುತ್ತದೆ.

25 ಸದಸ್ಯರ ಬಲದಲ್ಲಿ ಅಧ್ಯಕ್ಷ–ಉಪಾಧ್ಯಕ್ಷರಾಗಲು 13 ಮತಗಳು ಬೇಕಿವೆ. ಬಿಜೆಪಿ ಬುಟ್ಟಿಯಲ್ಲಿ 10 ಮತಗಳಿದ್ದು, ಮೂರು ಮತಗಳಿಗೆ ಜೆಡಿಎಸ್‌ ಅಥವಾ ಪಕ್ಷೇತರರಿಗೆ ಮೊರೆ ಹೊಕ್ಕಬೇಕಿದೆ. ಒಂಭತ್ತನೇ ವಾರ್ಡ್‌ನಿಂದ ಗೆಲುವು ಸಾಧಿಸಿರುವ ವೀರೇಶ ಹಡಲಗೇರಿ ಬಿಜೆಪಿ ಟಿಕೆಟ್‌ ದೊರಕದಿದ್ದರಿಂದ, ಬಂಡಾಯವಾಗಿ ಸ್ಪರ್ಧಿಸಿದ್ದರು. ಇದೀಗ ವೀರೇಶರ ಮನವೊಲಿಕೆ ಕೆಲಸ ಕಮಲ ಪಾಳೆಯದಲ್ಲಿ ಬಿರುಸುಗೊಂಡಿದೆ.

ಇದರ ಜತೆಯಲ್ಲಿ ಶತಾಯ–ಗತಾಯವಾಗಿ ಮುದ್ದೇಬಿಹಾಳ ಪುರಸಭೆಯಲ್ಲಿ ತಾವರೆ ಅರಳಿಸಲು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ತಮ್ಮದೇ ತಂತ್ರಗಾರಿಕೆಗೆ ಈಗಾಗಲೇ ಚಾಲನೆ ನೀಡಿದ್ದಾರೆ. ಅಧ್ಯಕ್ಷ–ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ಪಕ್ಷೇತರರು, ಜೆಡಿಎಸ್‌ಗೆ ಬಿಟ್ಟುಕೊಟ್ಟರೂ ಚಿಂತೆಯಿಲ್ಲ. ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲೇ ಬೇಕು ಎಂದು ಹಠ ತೊಟ್ಟು ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇದು ಯಶಸ್ವಿಯಾದರೆ ಮೊದಲ ಬಾರಿಗೆ ಮುದ್ದೇಬಿಹಾಳ ಪುರಸಭೆ ಅಂಗಳದಲ್ಲಿ ಕಮಲ ಅರಳಲಿದೆ. ಆದರೆ ಇಲ್ಲಿ ಕಷ್ಟಸಾಧ್ಯವೂ ಇದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ.

ಕಾಂಗ್ರೆಸ್‌ ಎಂಟು ಸ್ಥಾನಗಳಲ್ಲಿ ಜಯಭೇರಿ ಗಳಿಸಿದ್ದು, ರಾಜ್ಯದಲ್ಲಿನ ಮೈತ್ರಿಯಂತೆ ಇಲ್ಲಿಯೂ ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಳ್ಳಲಿದೆ. ಇದರಿಂದ ಸದಸ್ಯರ ಬಲ 10ಕ್ಕೇರಲಿದೆ. ಐವರು ಪಕ್ಷೇತರರಲ್ಲಿ ಒಬ್ಬರು ಮಾತ್ರ ಬಿಜೆಪಿ ಟಿಕೆಟ್‌ ವಂಚಿತರು. ಉಳಿದ ನಾಲ್ವರು ಕಾಂಗ್ರೆಸ್‌–ಜೆಡಿಎಸ್‌ ಬಂಡುಕೋರರು. ಇವರು ಕಾಂಗ್ರೆಸ್‌ ಮೈತ್ರಿ ಬೆಂಬಲಿಸಿದರೆ 14 ಸದಸ್ಯ ಬಲದಿಂದ ಪುರಸಭೆಯ ಚುಕ್ಕಾಣಿಯನ್ನು ಸುಲಭವಾಗಿ ‘ಕೈ’ ವಶಪಡಿಸಿಕೊಳ್ಳುವ ಚಿಂತನೆ ‘ಕೈ’ ಪಡೆಯಲ್ಲಿ ನಡೆದಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !