ಗುರುವಾರ , ಜೂನ್ 17, 2021
21 °C
ಭೀಮಾ ತೀರದ ರೌಡಿ ಧರ್ಮರಾಜ ಚಡಚಣನ ಎನ್‌ಕೌಂಟರ್‌ ಪ್ರಕರಣ

ಸಿಐಡಿಗೆ ಹಸ್ತಾಂತರಿಸಲು ಡಿಜಿಗೆ ಎಸ್‌ಪಿ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಭೀಮಾ ತೀರದ ರೌಡಿ ಧರ್ಮರಾಜ ಚಡಚಣನ ಎನ್‌ಕೌಂಟರ್‌ ಪ್ರಕರಣದ ತನಿಖೆಯನ್ನೂ ಸಿಐಡಿಗೆ ಹಸ್ತಾಂತರಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ್‌ ಅಮೃತ್‌ ನಿಕ್ಕಂ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

‘ಗಂಗಾಧರ ಚಡಚಣನ ನಿಗೂಢ ಕೊಲೆ ಹಾಗೂ ಧರ್ಮರಾಜನ ಎನ್‌ಕೌಂಟರ್‌ಗೆ ನಂಟಿದೆ. ಎರಡೂ ಪ್ರಕರಣ ಒಂದೇ ದಿನ ನಡೆದಿದೆ. ಇಬ್ಬರೂ ಸಹೋದರರು. ಈಗಾಗಲೇ ಸಿಐಡಿ ಗಂಗಾಧರನ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದು, ಎನ್‌ಕೌಂಟರ್‌ ಪ್ರಕರಣದ ತನಿಖೆಯನ್ನೂ ಸಿಐಡಿಗೆ ಹಸ್ತಾಂತರಿಸುವಂತೆ ಪತ್ರದಲ್ಲಿ ಕೋರಲಾಗಿದೆ. ವಾರದೊಳಗೆ ಸಿಐಡಿ ಈ ಪ್ರಕರಣದ ಕುರಿತಂತೆಯೂ ತನಿಖೆ ಆರಂಭಿಸಬಹುದು’ ಎಂದು ಎಸ್‌ಪಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾನವ ರಕ್ತ: ಗಂಗಾಧರನ ನಿಗೂಢ ಹತ್ಯೆ ನಡೆದಿದೆ ಎನ್ನಲಾದ ಸ್ಥಳದಿಂದ ಸಿಐಡಿ ಪೊಲೀಸರು ಸಂಗ್ರಹಿಸಿದ್ದ ಮಣ್ಣಿನಲ್ಲಿ ಮಾನವ ರಕ್ತ ಇರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಹತ್ಯೆ ದೃಢಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆಗೆ ಸಿಐಡಿ ತನಿಖಾ ತಂಡ ಮುಂದಾಗಿದ್ದು, ಗಂಗಾಧರನ ತಾಯಿ ವಿಮಲಾಬಾಯಿ ಚಡಚಣ ಹಾಗೂ ಪುತ್ರ ಸೃಶಾಂತ (1)ನ ರಕ್ತದ ಮಾದರಿ ಸಂಗ್ರಹಿಸಲಾಗಿದೆ ಎನ್ನಲಾಗಿದೆ.

ಹತ್ಯೆಯ ಸ್ಥಳದಲ್ಲಿ ದೊರೆತ ರಕ್ತದ ಕಣ ಹಾಗೂ ಗಂಗಾಧರನ ಕುಟುಂಬದವರ ರಕ್ತದಲ್ಲಿನ ಡಿಎನ್‌ಎ ಹೊಂದಾಣಿಕೆಯಾಗಲಿದೆಯಾ ಎಂಬುದರ ಪರೀಕ್ಷೆಯನ್ನು ಎಸ್‌ಎಫ್‌ಎಲ್‌ ತಜ್ಞರು ನಡೆಸಲಿದ್ದಾರೆ. ವರದಿ ಬಂದ ಬಳಿಕ ಕೊಲೆಯಾಗಿರುವುದನ್ನು ಖಚಿತಪಡಿಸಬಹುದು ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದರು.

ವಿಚಾರಣೆ:  ಸಿಐಡಿ ತನಿಖೆ ಆರಂಭಗೊಂಡ ಬೆನ್ನಿಗೆ ನಾಪತ್ತೆಯಾಗಿರುವ ಸಿಪಿಐ ಎಂ.ಬಿ.ಅಸೋಡೆ ಕುಟುಂಬ ವರ್ಗ ಹಾಗೂ ಆತನ ಜತೆ ಆತ್ಮೀಯ ಒಡನಾಟ ಹೊಂದಿದ್ದರು ಎನ್ನಲಾದ ಮಹಿಳೆಯೊಬ್ಬರ ಮನೆಯ ತಪಾಸಣೆಯನ್ನು ಸಿಐಡಿ ಅಧಿಕಾರಿಗಳು ಬುಧವಾರ ನಡೆಸಿದ್ದಾರೆ ಎಂಬುದು ಗೊತ್ತಾಗಿದೆ.

ಎರಡೂ ಮನೆಗಳಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು, ಕೆಲ ಮಹತ್ವದ ದಾಖಲೆ, ಬ್ಯಾಂಕ್‌ ಪಾಸ್‌ ಪುಸ್ತಕಗಳ ಪರಿಶೀಲನೆ ನಡೆಸಿದ್ದಾರೆ. ಇದೇ ಸಂದರ್ಭ ವಿಚಾರಣೆಗೆ ಹಾಜರಾಗುವಂತೆ ಅಸೋಡೆಗೆ ತಿಳಿಸಿ ಎಂಬ ಖಡಕ್‌ ಸಂದೇಶವನ್ನು ಕುಟುಂಬ ವರ್ಗದವರಿಗೆ ನೀಡಿದ್ದಾರೆ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.