ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಲಾನಂದನಾಥ ಶ್ರೀಗಳಿಗೆ ರಜತ ತುಲಾಭಾರ

ಬೇಲೂರಿನಲ್ಲಿ ಸಂಸ್ಮರಣೋತ್ಸವ ಮತ್ತು ಬೆಳದಿಂಗಳೋತ್ಸವ
Last Updated 14 ಅಕ್ಟೋಬರ್ 2019, 11:26 IST
ಅಕ್ಷರ ಗಾತ್ರ

ಬೇಲೂರು: ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಗೆ ಸೋಮವಾರ 108 ಕೆ.ಜಿ ಬೆಳ್ಳಿಯಿಂದ ತುಲಾಭಾರ ನಡೆಸಲು ಭಕ್ತರು ಸಿದ್ಧತೆ ಮಾಡಿಕೊಂಡಿದ್ದಾರೆ.

ಬಾಲಗಂಗಾಧರನಾಥ ಸ್ವಾಮಿಗಳ ಸಂಸ್ಮರಣೋತ್ಸವದ ನಂತರ ರಜತ ತುಲಾಭಾರ ನಡೆಯಲಿದೆ. ಇದಕ್ಕಾಗಿ ಭಕ್ತರು ಸಿದ್ಧತೆ ನಡೆಸಿದ್ದಾರೆ. ‘9 ಸಂಖ್ಯೆ ಹೆಚ್ಚಿನ ಮಹತ್ವ ಹೊಂದಿದೆ. ಆದಿಚುಂಚನಗಿರಿ ಮಠವನ್ನು ನವನಾಥರು ಸ್ಥಾಪಿಸಿದರು. ರಾಮ ನವಮಿಯ ಸಂಕೇತವೂ 9 ಆಗಿದೆ. ಈ ಹಿನ್ನೆಲೆಯಲ್ಲಿ 108 ಕೆ.ಜಿ ಬೆಳ್ಳಿಯಿಂದ ತುಲಾಭಾರ ನಡೆಸಲಾಗುತ್ತಿದೆ’ ಎಂದು ಶಂಭುನಾಥ ಸ್ವಾಮೀಜಿ
ತಿಳಿಸಿದರು.

ಸೋಮವಾರ ಬೆಳಿಗ್ಗೆ 9 ಗಂಟೆಗೆ ಚನ್ನಕೇಶವ ದೇವಾಲಯದ ಬಳಿಯಿಂದ ಸಂಸ್ಮರಣೋತ್ಸವ ಮತ್ತು ಬೆಳದಿಂಗಳೋತ್ಸವ ಕಾರ್ಯಕ್ರಮದ ಅಂಗವಾಗಿ ನಿರ್ಮಲಾನಂದನಾಥ ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಈ ವೇಳೆ 1008 ಕಳಶಗಳು, ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ.

ಮೆರವಣಿಗೆಯು ದೇವಸ್ಥಾನದ ರಸ್ತೆ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನವನ್ನು ತಲುಪಲಿದೆ. ಕಾರ್ಯಕ್ರಮಕ್ಕಾಗಿ ಬೃಹತ್‌ ಸಭಾ ಮಂಟಪ ಹಾಗೂ ವಿಶಾಲ ವೇದಿಕೆಯನ್ನು ನಿರ್ಮಿಸಲಾಗಿದೆ. ಸುಮಾರು 6 ಸಾವಿರ ಜನರಿಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧೆಡೆ ಮತ್ತು ಹೊರ ತಾಲ್ಲೂಕುಗಳಿಂದ ಸುಮಾರು 20 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಸುಮಾರು 50ಕ್ಕೂ ಹೆಚ್ಚು ಮಠಾಧೀಶರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಬೆಳದಿಂಗಳೋತ್ಸವದ ಸಾಂಸ್ಕತಿಕ ಕಾರ್ಯಕ್ರಮ ನಡೆಯಲಿದೆ.

ಭೋಜನ ವ್ಯವಸ್ಥೆ: ಕಾಲೇಜು ಮೈದಾನದ ಹಿಂಭಾಗದಲ್ಲಿ ನಿರಂತರ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಳಿಗ್ಗೆ ಉಪ್ಪಿಟ್ಟು ಸೇರಿದಂತೆ ಇನ್ನಿತರ ತಿಂಡಿ ಮತ್ತು ಮಧ್ಯಾಹ್ನ ಪಲಾವ್‌, ಮೊಸರನ್ನ ಹಾಗೂ ಸಿಹಿ ತಿಂಡಿಯನ್ನು ನೀಡಲಾಗುತ್ತಿದೆ.

ಸ್ವಾಮೀಜಿಗಳು ಮತ್ತು ಗಣ್ಯರಿಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ದಾಸೋಹದ ವ್ಯವಸ್ಥೆ ಮಾಡಲಾಗಿದೆ.

‘ಬೇಲೂರು ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಆದಿಚುಂಚನಗಿರಿಯ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ ರಜತ ತುಲಾಭಾರ ನಡೆಯುತ್ತಿರುವುದು ಸಂತಸ ಉಂಟು ಮಾಡಿದೆ. ತಾಲ್ಲೂಕಿನ ಭಕ್ತರು ಉದಾರವಾಗಿ ಸಹಕಾರ ನೀಡಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಕಾರ್ಯಕ್ರಮದ ಸಂಚಾಲಕ ಎಂ.ಎ.ನಾಗರಾಜ್‌ ಮನವಿ ಮಾಡಿದರು.

‘ಬೇಲೂರಿನಲ್ಲಿ ಹಲವು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಸಂಸ್ಮರಣೋತ್ಸವ ಕಾರ್ಯಕ್ರಮವೂ ಯಶಸ್ವಿಯಾಗಲಿದೆ’ ಎಂದರು ಕಾರ್ಯಕ್ರಮದ ಸಂಚಾಲಕ ವೈ.ಟಿ.ದಾಮೋದರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT