ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹200 ಕೋಟಿ ಅನುದಾನ ನೀಡಿ

ಕಾಫಿ ಬೆಳೆಗಾರರಿಗೆ 7 ವರ್ಷ ಬಡ್ಡಿ ರಹಿತ ಸಾಲ ವಿತರಿಸಿ: ಸಂಸದ ಪ್ರಜ್ವಲ್‌
Last Updated 16 ಫೆಬ್ರುವರಿ 2021, 14:40 IST
ಅಕ್ಷರ ಗಾತ್ರ

ಹಾಸನ: ಆನೆ ಹಾವಳಿ ತಡೆಗೆ ತಡೆಗೋಡೆ ನಿರ್ಮಾಣಕ್ಕೆ ₹200 ಕೋಟಿ ಹಣ ಏಕಕಾಲದಲ್ಲಿ ನೀಡಿ, ಕಾಮಗಾರಿ ಪೂರ್ಣಗೊಳಿಸಿದ ನಂತರ ಆನೆಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಸಂಸದ ಪ್ರಜ್ವಲ್‌ ರೇವಣ್ಣ ಒತ್ತಾಯಿಸಿದರು.

ಸಕಲೇಶಪುರದ ಪುರಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಆನೆ ನಿಯಂತ್ರಣಕ್ಕೆ ಬ್ಯಾರಿಕೇಡ್ ಹಾಕಲು
ಅಗತ್ಯದಷ್ಟು ಅನುದಾನ ಒಂದೇ ಬಾರಿಗೆ ಒದಗಿಸಬೇಕು. ಆನೆ ಕಾರಿಡಾರ್ ಯೋಜನೆ ನೆನೆಗುದಿಗೆ ಬಿದ್ದಿದ್ದು ಅರಣ್ಯ ಇಲಾಖೆ ವತಿಯಿಂದ ಪರಿಣಾಮಕಾರಿಯಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಿ, ಭೂಮಿ ಪಡೆದು ಆನೆ ಕಾರಿಡಾರ್ ಮಾಡಲೇಬೇಕು ಎಂದು ಹೇಳಿದರು.

ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕುಗಳಲ್ಲಿ ಆನೆ ಆವಾಸ ಹಾಗೂ ಅರಣ್ಯ ವಿಸ್ತರಣೆ ಯೋಜನೆಗೆ ಪೂರಕವಾಗಿಲ್ಲ ಎಂಬುದನ್ನು ಈಗಾಗಲೇ ಅಧ್ಯಯನ ಸಂಸ್ಥೆಗಳು ತಿಳಿಸಿವೆ. ಅರಣ್ಯ ಇಲಾಖೆ ಅವುಗಳನ್ನು ಅರಿತು ಪೂರಕ ಯೋಜನೆಗಳ ಅನುಷ್ಠಾನ ನಡೆಸಬೇಕು ಎಂದರು.

ಕಾಫಿ ಬೆಳೆಗಾರರಿಂದ ಪ್ರತಿ ವರ್ಷ ಕೇಂದ್ರ ಸರ್ಕಾರಕ್ಕೆ ಲಕ್ಷಾಂತರ ಕೋಟಿ ರೂಪಾಯಿ ಆದಾಯ ಬರುತ್ತಿದೆ. ಆದರೆ
ಬೆಳೆಗಾರರು ಬಸವಳಿದಿದ್ದಾರೆ. ಹಾಗಾಗಿ ₹ 400-600 ಕೋಟಿ ಹಣವನ್ನು ರೈತರಿಗೆ ಪ್ಯಾಕೇಜ್ ರೂಪದಲ್ಲಿ ನೀಡಿ 7
ವರ್ಷಗಳ ಕಾಲ ಬಡ್ಡಿ ರಹಿತ ಸಾಲ ವಿತರಿಸಬೇಕು ಎಂದು ಸಲಹೆ ನೀಡಿದರು.

ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳ ಕಾಫಿ ಬೆಳೆಗಾರರು ಮತ ಹಾಕಿರುವುದು ಬಿಜೆಪಿಗೆ. ಹಾಗಾಗಿ ಬಿಜೆಪಿ ಸರ್ಕಾರ ಇದ್ದಾಗಲೇ ಅವರ ಸಮಸ್ಯೆ ಬಗೆಹರಿಸಬೇಕು. ಇಲ್ಲಿನ ಜನರು ನಮಗೆ ಮತ ನೀಡದಿದ್ದರೂ ಪರವಾಗಿಲ್ಲ, ಮನೆ ಬಾಗಿಲಿಗೆ ಹೋದಾಗ ಒಂದು ಲೋಟ ನೀರು, ಊಟ ಕೊಡುತ್ತಾರೆ. ಹಾಗಾಗಿ ಅವರ ಸಮಸ್ಯೆ ಬಗೆಹರಿಯಬೇಕು ಎಂದರು.

‘ಕೇಂದ್ರದ ಬಜೆಟ್ ವೇಳೆ ಪ್ರಜ್ವಲ್‌ ರೇವಣ್ಣ ಸರಿಯಾಗಿ ಮಾತಾಡಿಲ್ಲ. ಅದಕ್ಕೆ ಅನುದಾನ ಬಂದಿಲ್ಲ’ ಅಂತ ಯಾರೋ ಮೂರ್ಖರು ಹೇಳುತ್ತಾರೆ. ‘ಆ ಮೂರ್ಖರಿಗೆ ಕೇಂದ್ರದ ಬಜೆಟ್‌ ಹೇಗೆ ಮಂಡನೆ ಆಗುತ್ತೆ ಎನ್ನುವುದೇ ಗೊತ್ತಿಲ್ಲ’ ಎಂದು ಶಾಸಕ ಪ್ರೀತಂ ಗೌಡ ವಿರುದ್ಧ ಪರೋಕ್ಷವಾಗಿ ಪ್ರಜ್ವಲ್‌ ರೇವಣ್ಣ ವಾಗ್ದಾಳಿ ನಡೆಸಿದರು.

ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಮಲೆನಾಡು ಭಾಗದಲ್ಲಿ ಹದಿನೈದು ವರ್ಷದಿಂದ ಕಾಡಾನೆ ಹಾವಳಿ ಇದೆ. ಎರಡು ತಿಂಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದೆ. ಅರಣ್ಯ ಇಲಾಖೆ ಪ್ರಕಾರ 85 ಆನೆಗಳು ಇವೆ. ಆನೆ ಕಾರಿಡರ್‌ ನಿರ್ಮಿಸಿ ಆನೆಗಳನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಎಚ್.ಎಂ ವಿಶ್ವನಾಥ್ ಮಾತನಾಡಿ, ರಾಜ್ಯದಲ್ಲಿ ಆರು ಸಾವಿರ ಆನೆಗಳು ಇವೆ. ಒಂದು ಆನೆ ಬದುಕಲು ಒಂದೂವರೆ ಸಾವಿರ ಎಕರೆ ಪ್ರದೇಶ ಬೇಕು. ಏಳು ವರ್ಷಗಳ ಹಿಂದೆ 23 ಈ ಭಾಗದಲ್ಲಿ ಆನೆಗಳನ್ನು ಸ್ಥಳಾಂತರ ಮಾಡಲಾಗಿತ್ತು. ಈಗ ಸೋಲಾರ್ ಬೇಲಿ, ಕಂದಕ ಕೊರೆದರೂ ಪ್ರಯೋಜನವಾಗುತ್ತಿಲ್ಲ ಎಂದರು.

ಬೆಕ್ಕನಹಳ್ಳಿ ನಾಗರಾಜ್ , ಕಣದಳ್ಳಿ ಮಂಜಣ್ಣ, ಬಾಳ್ಳುಗೋಪಾಲ್ ಹಾಗೂ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ನಿರಂತರವಾಗಿ ಮುಂದುವರೆದಿರುವ ಆನೆ ಹಾವಳಿ, ಸ್ಥಳೀಯರ ಸಂಕಷ್ಟ, ಅವೈಜ್ಞಾನಿಕ ಬೆಳೆ ಪರಿಹಾರಗಳ ಬಗ್ಗೆ ಸಚಿವರ ಗಮನ ಸೆಳೆದರು. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿ ಆನೆ ನಿಯಂತ್ರಣಕ್ಕೆ ವೈಜ್ಞಾನಿಕವಾಗಿ ಪ್ರಯತ್ನ ನಡೆಸಬೇಕು ಒತ್ತಾಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT