ಶುಕ್ರವಾರ, ಆಗಸ್ಟ್ 19, 2022
22 °C
2 ವರ್ಷದಿಂದ ನಿಂತು ಹೋದ ಅಂಗವಿಕಲರ ವೇತನ

ಏಳಲಾರದವನಿಗೂ ಬಾರದ ವೇತನ

ಎಚ್.ವಿ. ಸುರೇಶ್‍ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಹೊಳೆನರಸೀಪುರ: ದೇವರು ವರ ಕೊಟ್ಟರೂ ಪೂಜಾರಿ ಕೊಡ ಎನ್ನುವ ಹಾಗಾಗಿದೆ ಪಟ್ಟಣದಲ್ಲೊಂದು ಪ್ರಕರಣ. ಸರ್ಕಾರ ಅಂಗವಿಕಲರಿಗೆ ವೇತನ ನೀಡುತ್ತಿದ್ದರೂ ಶೇ 100 ಅಂಗವೈಕಲ್ಯವಿರುವ ವ್ಯಕ್ತಿಯೊಬ್ಬರಿಗೆ ವೇತನವೇ ಬರುತ್ತಿಲ್ಲ.

ಹುಟ್ಟಿದಾಗಿನಿಂದ ಎದ್ದೇಳಲು ಆಗದೆ. ಮಾತು ಬಾರದೆ, ತಾನೇ ಊಟ ಮಾಡಲು ಶಕ್ತಿಯೂ ಇಲ್ಲದೆ ಕಳೆದ 36 ವರ್ಷಗಳಿಂದ ಮಲಗಿದ್ದಲ್ಲೇ ಮಲಗಿರುವ ಶೇ 100ರಷ್ಟು ಅಂಗವೈಕಲ್ಯವಿರುವ ರಾಕೇಶ್‌ನಿಗೆ ಕಳೆದೆರೆಡು ವರ್ಷಗಳಿಂದ ವೇತನ ಬರುತ್ತಿಲ್ಲ. ಈತನ ತಾಯಿ ವತ್ಸಲಾ ಹಲವು ಬಾರಿ ತಾಲ್ಲೂಕು ಕಚೇರಿಗೆ ಅಲೆಯುತ್ತಿದ್ದರೂ ಸಿಬ್ಬಂದಿಗೆ ಈ ಅಂಗವಿಕಲನ ಪೋಷಕರ ಸಮಸ್ಯೆ ಆಲಿಸುತ್ತಿಲ್ಲ.

ಪಟ್ಟಣದ ದೇವಾಂಗ ರಾಮಮಂದಿರ ಬೀದಿಯಲ್ಲಿ ವಾಸ ಇರುವ ಕೃಷ್ಣಮೂರ್ತಿ ಹಾಗೂ ವತ್ಸಲಾ ದಂಪತಿ ಪುತ್ರ ರಾಕೇಶ್ ಎಂಬಾತನೇ ಈ ವ್ಯಕ್ತಿ. ನಿತ್ಯ ಕರ್ಮ ಸೇರಿದಂತೆ ಎಲ್ದಕ್ಕೂ ತಂದೆ, ತಾಯಿ, ಚಿಕ್ಕಪ್ಪ ಎತ್ತಿಕೊಂಡೇ ಹೋಗಬೇಕು. ಆದರೆ, ಸ್ವಲ್ಪವೂ ಬೇಸರ ಇಲ್ಲದಂತೆ ಸೇವೆ ಮಾಡುತ್ತಿದ್ದಾರೆ.

ಈತನ ಸ್ಥಿತಿಯ ಬಗ್ಗೆ 2011ರಲ್ಲಿ ‘ಪ್ರಜಾವಾಣಿ’ ವರದಿ ಪ್ರಕಟಿಸಿದ ನಂತರ ಅಂದಿನ ತಹಶೀಲ್ದಾರ್ ರಾಕೇಶ್ ಮನೆಗೆ ತೆರಳಿ ಅಂಗವಿಕಲ ವೇತನ ಮಂಜೂರು ಮಾಡಿದ್ದರು. ಕಳೆದ 2 ವರ್ಷಗಳ ಹಿಂದೆ ಅಂಗವಿಕಲರ ವೇತನಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಎಂದಾಗ ಏಳಲಾರದ ಈತನನ್ನು ಎಸ್‍ಬಿಐ ಶಾಖೆಗೆ ಎತ್ತಿಕೊಂಡು ಹೋಗಿ ಆಧಾರ್ ಕಾರ್ಡ್ ಮಾಡಿಸಿದ್ದರು. ತಾಲ್ಲೂಕು ಕಚೇರಿಗೆ ಆಧಾರ್ ಕಾರ್ಡ್ ನೀಡಿ ಒಂದು ವರ್ಷ ಕಳೆಯುತ್ತಾ ಬಂದರೂ ಇನ್ನೂ ವೇತನವೇ ಬರುತ್ತಿಲ್ಲ.

ಈತನ ತಾಯಿ ತಾಲ್ಲೂಕು ಕಚೇರಿಗೆ ಹತ್ತಾರು ಬಾರಿ ಅಲೆದರೂ ಅವರು ಇನ್ನೂ ಮೂರ್ನಾಲ್ಕು ತಿಂಗಳಾಗುತ್ತದೆ ಎಂದು ಸಬೂಬು ಹೇಳುತ್ತಾ ಕಳುಹಿಸುತ್ತಿದ್ದಾರಂತೆ.

‘ಈತನಿಗೆ ಬರುತ್ತಿದ್ದ ₹ 1,200 ವೇತನ ಈತನ ಔಷಧಿ ಮಾತ್ರೆಗೆ ಸಾಕಾಗುತ್ತಿತ್ತು.ಆದರೆ, ಈಗ ಅದೂ ನಿಂತು ಹೋಗಿದೆ. ಹತ್ತಾರು ಬಾರಿ ಅಲೆದರೂ ಎನ್ನೂ ಮೂರ್ನಾಲ್ಕು ತಿಂಗಳು ಆಗುತ್ತದೆ ಎಂದು ಸಬೂಬು ಹೇಳುತ್ತಾರೆ ಅಧಿಕಾರಿಗಳು ಎಂದು ಪೋಷಕರು ಸಂಕಟ ಹೇಳಿಕೊಂಡರು.

ಈ ಕುರಿತು ತಹಶೀಲ್ದಾರ್ ಅವರನ್ನು ಸಂಪರ್ಕಿಸಿದಾಗ ಈ ಬಗ್ಗೆ ವಿಚಾರಿಸಿ ತಕ್ಷಣ ಕ್ರಮ ಕೈಗೊಂಡು ಅಂಗವಿಕಲರ ವೇತನ ದೊರೆಯುವಂತೆ ಮಾಡುವುದಾಗಿ ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.