ಬ್ಯಾಂಕಿನಲ್ಲೇ ಉಳಿದಿದೆ ₹ 64 ಲಕ್ಷ, ರೈತರ ಖಾತೆಗೆ ಜಮೆಯಾಗದ ಬಡ್ಡಿ ಹಣ– ಆರೋಪ

7

ಬ್ಯಾಂಕಿನಲ್ಲೇ ಉಳಿದಿದೆ ₹ 64 ಲಕ್ಷ, ರೈತರ ಖಾತೆಗೆ ಜಮೆಯಾಗದ ಬಡ್ಡಿ ಹಣ– ಆರೋಪ

Published:
Updated:

ಅರಕಲಗೂಡು: ತಂಬಾಕು ಬೆಳೆಗಾರರು ರಸಗೊಬ್ಬರ ಸಾಲ ಪಡೆಯಲು ಮುಂಗಡವಾಗಿ ಇರಿಸಿದ್ದ ಠೇವಣಿ ಹಣದ ಬಡ್ಡಿಯನ್ನು ರೈತರಿಗೆ ವಿತರಿಸದೆ ವಂಚಿಸಲಾಗುತ್ತಿದೆ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ವಿ.ಯೋಗಣ್ಣ ಆರೋಪಿಸಿದರು.

ತಂಬಾಕು ಮಂಡಳಿ ಪ್ರತಿ ಬೆಳೆಗಾರರಿಂದ ₹ 3 ಸಾವಿರದಂತೆ ಮುಂಗಡ ಹಣವನ್ನು 8 ಸಾವಿರ ರೈತರಿಂದ ಪಡೆದಿದ್ದು ಇದು ₹ 2.40 ಕೋಟಿ ಮೊತ್ತವಾಗಿದ್ದು ಇದನ್ನು ರಾಮನಾಥಪುರ ಕೆನರಾ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ರೂಪದಲ್ಲಿ ಇರಿಸಲಾಗಿದೆ. ಇದರಿಂದ ₹ 64 ಲಕ್ಷ ಬಡ್ಡಿ ಬಂದಿದೆ. ಇದನ್ನು 2015 ರಿಂದ 2018ರವರೆವಿಗೂ ರೈತರ ಖಾತೆಗೆ ಜಮಾ ಮಾಡಿಲ್ಲ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಂಡಳಿ ಹಾಗೂ ಬ್ಯಾಂಕ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ಲಾಟ್ ಫಾರಂ 7 ಮತ್ತು 63ರಲ್ಲಿ 8 ಸಾವಿರ ತಂಬಾಕು ಬೆಳೆಗಾರರಿದ್ದು ಇವರು ಬ್ಯಾಂಕಿನಲ್ಲಿ ಖಾತೆ ತೆರೆದು 4 ವರ್ಷಗಳಾಗಿದ್ದರೂ ಪಾಸ್‌ಬುಕ್ ನೀಡಿಲ್ಲ. ಇದರಿಂದ ಪಾರದರ್ಶಕತೆ ಎಷ್ಟಿದೆ ಎಂಬುದು ತಿಳಿಯುತ್ತದೆ ಎಂದರು.

ಬ್ಯಾಂಕ್ ರಸಗೊಬ್ಬರಕ್ಕಾಗಿ ರೂ 25 ಸಾವಿರ ಸಾಲ ನೀಡುತ್ತಿದೆ. ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದ್ದರೂ ಕೇಂದ್ರ ಸರ್ಕಾರ ನೀಡುವ ₹ 3 ಸಹಾಯಧನವನ್ನು ಕಳೆದ ನಾಲ್ಕು ವರ್ಷಗಳಿಂದ ರೈತರ ಖಾತೆಗೆ ಜಮಾ ಮಾಡಿಲ್ಲ. ಇದರ ಒಟ್ಟು ಮೊತ್ತ ಸುಮಾರು ₹ 80 ಲಕ್ಷ ಹಲವು ರೈತರಿಗೆ ಬರಬೇಕಿದೆ. ಕೃಷಿ ಸಾಲಕ್ಕೆ ಶೇ 7 ಬಡ್ಡಿ ವಿಧಿಸಬೇಕು ಎಂದು ರಿಸರ್ವ್‌ ಬ್ಯಾಂಕ್ ಸೂಚನೆ ಇದೆ. ಆದರೆ ಇಲ್ಲಿ ಶೇ 11 ಬಡ್ಡಿ ಪಡೆಯಲಾಗುತ್ತಿದೆ ಎಂದು ಆರೋಪಿಸಿದರು.

ಈ ಸಮಸ್ಯೆ ಕುರಿತು ಈವರೆಗೆ ಯಾವುದೇ ಶಾಸಕರಾಗಲಿ, ಜನಪ್ರತಿನಿಧಿಗಳಾಗಲಿ ಗಮನಹರಿಸಿಲ್ಲ. ಶಾಸಕ ಎ.ಟಿ.ರಾಮಸ್ವಾಮಿ ಕೂಡಲೇ ಮಂಡಳಿ ಹಾಗೂ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ರೈತರಿಗೆ ಸೇರಬೇಕಾದ ಹಣವನ್ನು ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸೆ. 19ರಂದು ತಂಬಾಕು ಮಾರುಕಟ್ಟೆ ಆರಂಭವಾಗುತ್ತಿದೆ. ಅಷ್ಟರೊಳಗೆ ಸಮಸ್ಯೆ ಬಗೆಹರಿಸದಿದ್ದರೆ ರೈತ ಸಂಘವು ತಂಬಾಕು ಮಂಡಳಿ ಮತು ಬ್ಯಾಂಕ್ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾಗಲಿದೆ ಎಂದು ಎಚ್ಚರಿಸಿದರು.

ರೈತ ಸಂಘದ ಮುಖಂಡರಾದ ಜಗನ್ನಾಥ್, ಮಂಜೇಗೌಡ, ಸುಬ್ಬೇಗೌಡ ಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !