ಶುಕ್ರವಾರ, ಆಗಸ್ಟ್ 6, 2021
22 °C
ಸಿ.ಎಂ ರಾಜಕೀಯ ಕಾರ್ಯದರ್ಶಿ ಸಂತೋಷ್‌ ವಿರುದ್ಧ ಆರೋಪ

ಬಿಜೆಪಿ ಸೇರಲು ₹10 ಲಕ್ಷ ಪಾವತಿ: ಕಲೈ ಅರಸಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ–ಸಾಂಕೇತಿಕ ಚಿತ್ರ

ಹಾಸನ: ‘ಜೆಡಿಎಸ್‌ ತೊರೆದು ಬಿಜೆಪಿ ಸೇರುವಂತೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್‌.ಆರ್‌.ಸಂತೋಷ್ ನನಗೆ ₹25 ಲಕ್ಷ ಆಮಿಷವೊಡ್ಡಿ, ಮುಂಗಡವಾಗಿ ₹10 ಲಕ್ಷ ನಗದು ನೀಡಿದ್ದಾರೆ’ ಎಂದು ಅರಸೀಕೆರೆ ನಗರಸಭೆ ಎರಡನೇ ವಾರ್ಡ್‌ ಸದಸ್ಯೆ ಕಲೈ ಅರಸಿ ಆರೋಪಿಸಿದ್ದಾರೆ.

₹10 ಲಕ್ಷ ಬಂಡಲ್‌ನೊಂದಿಗೆ ಶಾಸಕರಾದ ಎಚ್‌.ಡಿ.ರೇವಣ್ಣ, ಕೆ.ಎಂ.ಶಿವಲಿಂಗೇಗೌಡ ಜತೆ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸೇರುವಂತೆ ಒಂದು ವಾರದಿಂದ ಒತ್ತಡ ಇತ್ತು. ಗುರುವಾರ ರಾತ್ರಿ 10 ಗಂಟೆಗೆ ಮನೆಗೆ ಬಂದ ಸಂತೋಷ್‌ ಅವರ ಆಪ್ತ ಸಯ್ಯದ್‌ ಸಿಕಂದರ್‌ ₹10 ಲಕ್ಷ ನೀಡಿ, ಸಂತೋಷ್‌ ಅವರಿಗೆ ಕರೆ ಮಾಡಿಕೊಟ್ಟರು. 'ಸರ್ಕಾರ ನಮ್ಮ ಕೈಯಲಿದೆ. ಏನು ಬೇಕಾದರೂ ಮಾಡಬಹುದು. ಮುಂಗಡವಾಗಿ ₹10 ಲಕ್ಷ ತಲುಪಿಸಿದ್ದೇನೆ. ಉಳಿದ ಹಣವನ್ನು ನಂತರ ನೀಡಲಾಗುವುದು. ಬಿಜೆಪಿ ಸೇರಲೇಬೇಕು’ ಎಂಬುದಾಗಿ ಬೆದರಿಕೆ ಹಾಕಿದರು. ಹಣ ವಾಪಸ್ ತೆಗೆದುಕೊಂಡು ಹೋಗುವಂತೆ ಹೇಳಿದರೂ ಕೇಳಲಿಲ್ಲ’ ಎಂದಿದ್ದಾರೆ.

ರೇವಣ್ಣ ಮಾತನಾಡಿ, ‘ಹಣ ಕೊಟ್ಟು ಸದಸ್ಯರನ್ನು ಸಂತೋಷ್‌ ಖರೀದಿಸುತ್ತಿದ್ದಾರೆ. ಹಣ ಬೇಡವೆಂದರೂ ಇಟ್ಟು ಹೋಗಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ಆಗಬೇಕು’ ಎಂದು ಆಗ್ರಹಿಸಿದ್ದಾರೆ.

ಶಿವಲಿಂಗೇಗೌಡ ಮಾತನಾಡಿ, ‘ಕನ್ನಡ ಓದಲು ಬಾರದ ಸದಸ್ಯೆ ಕಲೈ ಅರಸಿ ಅವರಿಂದ ಜೆಡಿಎಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡುವ ಪತ್ರಕ್ಕೆ ಸಹಿ ಹಾಕಿಸಿಕೊಂಡು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ನಗರಸಭೆಯಲ್ಲಿ ಬಹುಮತಕ್ಕಾಗಿ ಸಂತೋಷ್‌ ವಾಮಮಾರ್ಗದ ರಾಜಕೀಯ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

31 ಸದಸ್ಯ ಬಲದ ನಗರಸಭೆಯಲ್ಲಿ ಜೆಡಿಎಸ್ 21‌, ಬಿಜೆಪಿ 6, ಕಾಂಗ್ರೆಸ್‌ 1 ಹಾಗೂ ಮೂವರು ಪಕ್ಷೇತರರು ಇದ್ದಾರೆ. ಜೆಡಿಎಸ್‌ಗೆ ಬಹುಮತ ಇದ್ದರೂ ಮೀಸಲಾತಿ ಬಲದಿಂದ ಬಿಜೆಪಿ ಅಧ್ಯಕ್ಷ ಸ್ಥಾನ ಪಡೆದಿದೆ. ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು, ಜುಲೈ 7ಕ್ಕೆ ವಿಚಾರಣೆ ಇದೆ. ಮೂರು ದಿನಗಳ ಹಿಂದೆಯಷ್ಟೇ ಜೆಡಿಎಸ್‌ನ ಆರು ಸದಸ್ಯರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿ, ತಮಗೆ ಪ್ರತ್ಯೇಕ ಆಸನ ಮೀಸಲಿರಿಸುವಂತೆ ಕೋರಿ ಜಿಲ್ಲಾಧಿಕಾರಿ ಆರ್.ಗಿರೀಶ್‌ ಅವರಿಗೆ ಮನವಿ ಸಲ್ಲಿಸಿದ್ದರು. 

‘ಮಾನನಷ್ಟ ಮೊಕದ್ದಮೆ ಹೂಡುವೆ’

‘ಅರಸೀಕೆರೆ ಜೇನುಕಲ್ಲು ಸಿದ್ದೇಶ್ವರನ ಮೇಲೆ ಆಣೆ ಮಾಡಿ ಹೇಳುವೆ, ಸದಸ್ಯೆ ಕಲೈ ಅರಸಿ ಅವರಿಗೆ ನೀಡಿರುವ 
₹ 10 ಲಕ್ಷಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನ ಬಗ್ಗೆ ಜನರಿಂದ ಒಳ್ಳೆಯ ಅಭಿಪ್ರಾಯ ಬರುತ್ತಿರುವುದನ್ನು ಸಹಿಸದೆ ಶಾಸಕ ಶಿವಲಿಂಗೇಗೌಡ ಈ ರೀತಿ ಆರೋಪ ಮಾಡುದ್ದಾರೆ. ರೇವಣ್ಣ ಅವರಿಗೂ ದಾರಿ ತಪ್ಪಿಸಿದ್ದಾರೆ. ನನ್ನ ಮೇಲಿನ ಆರೋಪಕ್ಕೆ ಸಾಕ್ಷ್ಯ ಎಲ್ಲಿದೆ? ನನ್ನ ವಿರುದ್ಧ ಆರೋಪ ಮಾಡಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ’ ಎಂದು ಎನ್‌.ಆರ್‌.ಸಂತೋಷ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು