ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಲ್ಲಿ 11 ಬಿಎಸ್‌ಎನ್‌ಎಲ್‌ ಟವರ್ ಅಳವಡಿಕೆ

ದೂರಸಂಪರ್ಕ ಸಲಹಾ ಸಮಿತಿ ಸಭೆಯಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ
Published 26 ಅಕ್ಟೋಬರ್ 2023, 14:23 IST
Last Updated 26 ಅಕ್ಟೋಬರ್ 2023, 14:23 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಭಾರತ್ ಸಂಚಾರ ನಿಗಮದ ಟವರ್‌ಗೆ ಪ್ರಾಮುಖ್ಯತೆ ನೀಡಲಾಗಿದ್ದು, ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಗತ್ಯವಿರುವ ಕಡೆಗಳಲ್ಲಿ 11 ಟವರ್ ಕೆಲಸ ನಡೆಯುತ್ತಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಭಾರತ್ ಸಂಚಾರ ನಿಗಮದ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಎಸ್ಎನ್ಎಲ್ ನೆಟ್‌ವರ್ಕ್ ಬೇಕು ಎಂದು ಜನರಿಂದ ಬೇಡಿಕೆ ಬಂದಿದೆ. ಈ ನಿಟ್ಟಿನಲ್ಲಿ ಈಗ ಇರುವ 2ಜಿ ಹಾಗೂ 3ಜಿ ನೆಟ್‌ವರ್ಕ್‌ಗಳನ್ನು ನಿರ್ಭರ ಭಾರತ ಯೋಜನೆಯಡಿ 4ಜಿಯಾಗಿ ಪರಿವರ್ತನೆಗಾಗಿ 194 ಟವರ್‌ಗಳಲ್ಲಿ ಕೆಲಸ ನಡೆಯುತ್ತಿದೆ. ಉಳಿದ 106 ಟವರ್‌ಗಳನ್ನು ಮುಂದಿನ ಹಂತದಲ್ಲಿ ಕ್ಯೆಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅಳವಡಿಸಿರುವ ಒಟ್ಟು ಟವರ್ ಹಾಗೂ ಅವುಗಳ ಕಾರ್ಯ ನಿರ್ವಹಣೆ ಬಗ್ಗೆ ಸಂಸದ ಪ್ರಜ್ವಲ್ ಮಾಹಿತಿ ಕಲೆ ಹಾಕಿದರು.

ಹಾಸನ ಜಿಲ್ಲೆಯಲ್ಲಿ ಹೆಚ್ಚುವರಿ 4ಜಿ ಟವರ್‌ಗಳನ್ನು ಸ್ಥಾಪಿಸಿ ಗ್ರಾಹಕರಿಗೆ ಅನುಕೂಲ ಕಲ್ಪಿಸಬೇಕು. ಪ್ರತಿ 3 ತಿಂಗಳಿಗೊಮ್ಮೆ ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಎಸ್ಎನ್ಎಲ್ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು, ತಮ್ಮ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.

ಟವರ್ ಅಳವಡಿಕೆಗೆ ಜಾಗದ ಸಮಸ್ಯೆ ಹಾಗೂ ಭೂ ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಗೊಂದಲ ಇದ್ದಲ್ಲಿ ಗಮನಕ್ಕೆ ತಂದು ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.

ರಾಜ್ಯದಲ್ಲಿ 17 ಅಂಚೆ ಕಚೇರಿಗಳ ಸ್ಥಾಪನೆಗೆ ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ ಹಾಸನ ಜಿಲ್ಲೆಗೆ 2ಅಂಚೆ ಕಚೇರಿ ಸ್ಥಾಪಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದರು.

ಶಾಸಕರಾದ ಎಚ್.ಡಿ. ರೇವಣ್ಣ ಮಾತನಾಡಿ, ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಪ್ಪಿಸಲು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನಾಗತಿಹಳ್ಳಿ, ಬ್ಯಾಡರಹಳ್ಳಿ ಗೇಟ್, ಬೂಕನಬೆಟ್ಟ ಗ್ರಾಮದ ಕ್ರಾಸ್, ಮಾದಿಹಳ್ಳಿ, ಗೌಡಗೆರೆ ಗ್ರಾಮದ ಕ್ರಾಸ್, ಮಲ್ಲವನಘಟ್ಟ ಗ್ರಾಮದ ಕ್ರಾಸ್, ಜೋಗಿಪುರ ಗ್ರಾಮದ ಕ್ರಾಸ್, ಚಿಕ್ಕಗುಂಡೆನಹಳ್ಲಿ, ದೊಡ್ಡ ಮತ್ತಿಘಟ್ಟ ಮತ್ತು ಗುಲಸಿಂದ, ಕತ್ರಿಘಟ್ಟ ಗೇಟ್ ಮತ್ತು ಚೌಡೇನಹಳ್ಳಿ, ಮಳಲಿ ಕ್ರಾಸ್ ಶಾಂತಿಗ್ರಾಮ ಟೋಲ್ ಹತ್ತಿರ, ತ್ಯಾವೆಹಳ್ಳಿ ಮತ್ತು ಜಿ. ಮೈನಹಳ್ಳಿ ನಡುವಿನ ಕೆ.ಇ.ಬಿ ಸಬ್ ಸ್ಟೇಷನ್ ಬಳಿ ಸೇರಿದಂತೆ ಒಟ್ಟು 12 ಫ್ಲೈಓವರ್ ನಿರ್ಮಾಣಕ್ಕೆ ₹ 428 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT