13ಕ್ಕೆ ಪದ್ಮನಾಭ ‘ಸಂಗೀತ ಸಂಜೆ’

7
ರಾಜಸ್ಥಾನದಲ್ಲಿ ಜಲಯೋಧರ ಸಮಾವೇಶ

13ಕ್ಕೆ ಪದ್ಮನಾಭ ‘ಸಂಗೀತ ಸಂಜೆ’

Published:
Updated:
Prajavani

ಹಾಸನ: ಪರಿಸರ ಸಂರಕ್ಷಣೆ ಚಟುವಟಿಕೆಗಳನ್ನು ನಡೆಸಲು ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸುವ ಉದ್ದೇಶದಿಂದ ಜ.13ರಂದು ಸಂಜೆ 5.30ಕ್ಕೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಸಂಗೀತ ವಿದ್ವಾನ್‌ ಆರ್.ಕೆ.ಪದ್ಮನಾಬ್ ಹಾಗೂ ಸಂಗಡಿಗರಿಂದ ‘ಸಂಗೀತ ಸಂಜೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ವೈ.ಎನ್.ಸುಬ್ಬಸ್ವಾಮಿ ಹೇಳಿದರು.

ಕರ್ನಾಟಕ ಶಾಸ್ತ್ರೀಯ ಸಂಗೀತ ಸುಧೆ ಕಾರ್ಯಕ್ರಮಕ್ಕೆ ₹ 1000 ಮತ್ತು ₹ 500 ಟಿಕೆಟ್ ನಿಗದಿ ಮಾಡಲಾಗಿದೆ. ಇದರಿಂದ ಬಂದ ಹಣವನ್ನು ಕೆರೆ, ಕಲ್ಯಾಣಿಗಳ ಅಭಿವದ್ಧಿಗೆ ಬಳಸಲಾಗುವುದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ 146 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಇದನ್ನು ಎದುರಿಸಲು ತಾತ್ಕಾಲಿಕ ಕಾರ್ಯಗಳ ಜತೆಗೆ ಕೆರೆ, ಕಲ್ಯಾಣಿಗಳ ಪುನಶ್ಚೇತನ, ನೀರು ಹರಿಯುವ ಮಾರ್ಗ ದುರಸ್ತಿ, ಮಳೆ ಮೋಡಗಳ ಆಕರ್ಷಣೆಗೆ ಹಸಿರೀಕರಣ ಹಾಗೂ ನೀರಿನ ಮಿತಬಳಕೆ ಬಗ್ಗೆ ಜನ ಜಾಗೃತಿ, ಪರಿಸರಕ್ಕೆ ಪೂರಕವಾದ ಸಹಜ, ಸಾವಯವ, ಸಮಗ್ರ ಹಾಗೂ ವೃಕ್ಷ ಆಧಾರಿತ ಕೃಷಿ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಬರಪೀಡಿತ ರಾಜಸ್ಥಾನದಲ್ಲಿ ಡಾ.ರಾಜೇಂದ್ರಸಿಂಗ್ ನೇತೃತ್ವದಲ್ಲಿ ಮೂರು ವರ್ಷಗಳಿಂದ ನಡೆಸಿದ ಜಲಾಂದೋಲನದ ಪರಿಣಾಮ ಸಾವಿರಾರು ಕೆರೆಗಳ ನಿರ್ಮಾಣ, ವ್ಯಾಪಕ ಅರಣ್ಯೀಕರಣದ ಫಲವಾಗಿ ಬತ್ತಿಹೋಗಿದ್ದ ಏಳು ನದಿಗಳಿಗೆ ಮರು ಜೀವ ಬಂದಿದೆ. ವಲಸೆ ಹೋಗುವ ಹಳ್ಳಿ ಜನರು ತಮ್ಮ ಹಳ್ಳಿಯಲ್ಲೇ ನೆಲೆ ನಿಂತು ಕೃಷಿ ಚಟುವಟಿಕೆಗಳಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದರು.

ಜಲಾಂದೋಲನವು ಸರ್ಕಾರ ಹಾಗೂ ಜನರ ಮೊದಲ ಆದ್ಯತೆಯಾಗಬೇಕಿದೆ. ನೆಲ, ಜಲ ಹಾಗೂ ವಾಯು ಮಾಲಿನ್ಯ ತಡೆಯಲು ವ್ಯಾಪಕ ಕಾರ್ಯಕ್ರಮಗಳು ಆಗಬೇಕಿದೆ. ಮಣ್ಣಿನ ಆರೋಗ್ಯ ಕಾಪಾಡುವ ಕುರಿತು ತಿಳುವಳಿಕೆ ಮೂಡಿಸಬೇಕಿದೆ. ಅಭಿವೃದ್ಧಿ, ರಸ್ತೆ ವಿಸ್ತರಣೆ ಹೆಸರಿನಲ್ಲಿ ನಡೆಯುವ ಮರಗಳ ಮಾರಣ ಹೋಮ ನಿಲ್ಲಬೇಕು. ಪ್ರತಿ ಹಳ್ಳಿ ಹಾಗೂ ಪಟ್ಟಣಗಳಲ್ಲಿ ಪರಿಸರ ಸಂರಕ್ಷಣೆಗೆ ಜಲ ಯೋಧ ಪಡೆ ಹುಟ್ಟಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

2019ರ ಮೇ 1 ರಿಂದ ಹಸಿರು ಭೂಮಿ ಪ್ರತಿಷ್ಠಾನ ಜಿಲ್ಲೆಯ ಮಿತಿಯೊಳಗೆ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದೇ ಜ. 15 ಹಾಗೂ 16 ರಂದು ರಾಜಸ್ಥಾನದಲ್ಲಿ ನಡೆಯುವ ರಾಷ್ಟ್ರಮಟ್ಟದ ಜಲಯೋಧರ ಸಮಾವೇಶದಲ್ಲಿ ಹಸಿರುಭೂಮಿ ಪ್ರತಿಷ್ಠಾನ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
ಹಸಿರು ಭೂಮಿ ಪ್ರತಿಷ್ಠಾನದ ಸಂಚಾಲಕರಾದ ಎಸ್.ಪಿ.ರಾಜೀವ್ ಗೌಡ, ಎಚ್ .ಪಿ.ಕಿಶೋರ್ ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !