ಶನಿವಾರ, ನವೆಂಬರ್ 28, 2020
18 °C
ಸಾಲ ಪಡೆಯುವ ನೌಕರರಿಗೆ ಅನುಕೂಲ; ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ

15 ಲಕ್ಷ ವಿಮಾ ಪಾಲಿಸಿ ಗಣಕೀಕೃತ ಡಿಸೆಂಬರ್‌ಗೆ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ರಾಜ್ಯದ ಸರ್ಕಾರಿ ನೌಕರರ 15 ಲಕ್ಷ ವಿಮಾ ಪಾಲಿಸಿಗಳ ಗಣಕೀಕೃತ ಪ್ರಕ್ರಿಯೆ ಡಿಸೆಂಬರ್‌ ಅಂತ್ಯಕ್ಕೆ
ಪೂರ್ಣಗೊಳ್ಳಲಿದೆ. ಇದರಿಂದ ಸಾಲ, ಸೌಲಭ್ಯ ಪಡೆಯಲು ಅನುಕೂಲವಾಗಲಿದೆ ಎಂದು ರಾಜ್ಯ ಸರ್ಕಾರಿ
ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಕ್ಷರಿ ಹೇಳಿದರು.

ನಗರದ ಗುರುಭವನದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ನೌಕರರ ಕುಂದುಕೊರತೆ ಸಭೆಯಲ್ಲಿ
ಮಾತನಾಡಿದ ಅವರು, ಮೂರು ದಶಕಗಳ ಹೋರಾಟದ ಫಲವಾಗಿ ಕಂಪ್ಯೂಟರೀಕರಣ ಮಾಡಲಾಗುತ್ತಿದೆ.
ಹಿಂದೆ ಸಾಲ ಪಡೆದುಕೊಳ್ಳಲು ಸರ್ಕಾರಿ ನೌಕರರ ವಿಮಾ ಇಲಾಖೆ (ಕೆಜೆಐಡಿ)ಗೆ ಅಲೆಯಬೇಕಿತ್ತು. ಗಣಕೀಕೃತಗೊಂಡರೆ ಹತ್ತು ದಿನದಲ್ಲಿ ಸಾಲ ಸಿಗಲಿದೆ. ಈ ವರ್ಷ ಸರ್ಕಾರ ಘೋಷಿಸಿರುವ ಬೋನಸ್‌ ₹500
ಕೋಟಿ ಹಣ ಕೋವಿಡ್‌ ಆರ್ಥಿಕ ಸಂಕಷ್ಟದ ಕಾರಣ ಇನ್ನೂ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದರು.

ಮೃತ ನೌಕರನ ಅಂತ್ಯ ಸಂಸ್ಕಾರಕ್ಕೆ ನೀಡುತ್ತಿದ್ದ ಹಣವನ್ನು ₹ 5ರಿಂದ ₹15 ಸಾವಿರಕ್ಕೆ ಏರಿಸಲಾಗಿದೆ.
ಡಯಾಲಿಸಿಸ್‌ ಮತ್ತು ಕ್ಯಾನ್ಸರ್‌ ರೋಗಿಗಳಿಗೆ ವೇತನ ಸಹಿತ ವಿಶೇಷ ಸಾಂದರ್ಭಿಕ ರಜೆ ನೀಡಲಾಗುತ್ತಿದೆ
ಎಂದರು.

ವರ್ಷದಿಂದ 6 ತಿಂಗಳಿಗೊಮ್ಮೆ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ನೌಕರರ ಕುಂದು ಕೊರತೆ ಸಭೆ
ನಡೆಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿಯೇ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ರಚನೆ ಮಾಡಲಾಗಿದ್ದು, ನೌಕರರು
ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಜಗದೀಶ ಗೌಡಪ್ಪ ಪಾಟೀಲ್‌ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳು
ಸಾಕಷ್ಟಿವೆ. ಮುಂದಿನ 15 ದಿನಗಳಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯುತ್ತಿದ್ದು, ಸಮರ್ಥ ಅಭ್ಯರ್ಥಿಗಳನ್ನು
ಆಯ್ಕೆ ಮಾಡಬೇಕಿದೆ. ವರ್ಗಾವಣೆ ವಿಚಾರದಲ್ಲಿ ಸಾಕಷ್ಟು ಸಮಸ್ಯೆ ಇದೆ. ಹೊಸ ಎನ್‌ಪಿಎಸ್‌ ರದ್ದಪಡಿಸಿ ಹಳೆಯ
ಯೋಜನೆ ಜಾರಿಯಾಗುವಂತೆ ಮಾಡಬೇಕಿದೆ ಎಂದು ಹೇಳಿದರು.

ಸಂಘಟನಾ ಕಾರ್ಯದರ್ಶಿ ಗಿರಿಗೌಡ, ಖಜಾಂಚಿ ಶ್ರೀನಿವಾಸ್‌, ಗೌರವಾಧ್ಯಕ್ಷ ಶಿವರುದ್ರಯ್ಯ, ಜಿಲ್ಲಾ ಘಟಕದ
ಅಧ್ಯಕ್ಷ ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಶಿವಸ್ವಾಮಿ, ಖಜಾಂಚಿ ಬಿ.ಎಂ. ಸುರೇಶ್‌ ಇದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.