ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

197 ಅವಿರೋಧ ಆಯ್ಕೆ; 3867 ಅಭ್ಯಥಿಗಳು ಕಣದಲ್ಲಿ

ನಾಲ್ಕು ತಾಲ್ಲೂಕುಗಳಲ್ಲಿ ನಡೆಯುವ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ
Last Updated 15 ಡಿಸೆಂಬರ್ 2020, 11:47 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ನಡೆಯುವ ಮೊದಲ ಹಂತದ 125 ಗ್ರಾಮ ಪಂಚಾಯಿತಿಗಳ ಒಟ್ಟು 1703 ಸದಸ್ಯ ಸ್ಥಾನಗಳ ಪೈಕಿ 197 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಅಂತಿಮವಾಗಿ 3867 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ತಿಳಿಸಿದರು.

ಹಾಸನ ತಾಲ್ಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮ ಪಂಚಾಯಿತಿ ಒಂದು ಕ್ಷೇತ್ರಕ್ಕೆ ಸಲ್ಲಿಸಿದ್ದ ನಾಮಪತ್ರ ಹಿಂಪಡೆಯಲಾಗಿದೆ. ಸಕಲೇಶಪುರ ತಾಲ್ಲೂಕಿನ ದೇವಾಲದಕೆರೆ ಪಂಚಾಯಿತಿಯ ಎಂಟು ಸದಸ್ಯ ಸ್ಥಾನಗಳ ಪೈಕಿ ಏಳು ಸ್ಥಾನಗಳಿಗೆ ನಾಮಪತ್ರ ಹಿಂಪಡೆಯಲಾಗಿದೆ. ಒಟ್ಟು 34 ಸದಸ್ಯ ಸ್ಥಾನಗಳಿಗೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ಕಸ್ತೂರಿ ರಂಗನ್‌ ವರದಿ ಜಾರಿಯಿಂದ ಯಾವುದೇ ತೊಂದರೆವಿಲ್ಲವೆಂದು ಅಧಿಕಾರಿಗಳು ಜನರಿಗೆ ಜಾಗೃತಿ ಮೂಡಿಸಿದ್ದರು. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಎರಡನೇ ಹಂತದಲ್ಲಿ ಅರಸೀಕೆರೆ, ಬೇಲೂರು, ಆಲೂರು , ಹೊಳೆನರಸೀಪುರ ತಾಲ್ಲೂಕುಗಳ 120 ಗ್ರಾಮ ಪಂಚಾಯಿತಿಗಳ 1648 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಡಿ. 14ರ ವರೆಗೆ 2513 ನಾಮ ಪತ್ರಗಳು ಸ್ವೀಕೃತವಾಗಿವೆ. ಸೋಮವಾರ ಅಮಾವಾಸ್ಯೆ ಇದ್ದ ಕಾರಣ ಹೆಚ್ಚು ಮಂದಿ ನಾಮಪತ್ರ ಸಲ್ಲಿಸಿಲ್ಲ. ಇದೇ 16 ರ ವರೆಗೆ ಕಾಲಾವಕಾಶವಿದ್ದು, ಯಾವುದೇ ಭಯ, ಒತ್ತಡವಿಲ್ಲದೆ ನಾಮ ಪತ್ರ ಸಲ್ಲಿಸಬಹುದು ಎಂದರು.

ಚುನಾವಣೆಗೆ ಸಂಬಂಧಿಸಿದಂತೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಮತದಾನದ ದಿನ ಕೊನೆಯ ಒಂದು ಗಂಟೆಯ ಅವಧಿ ಕೋವಿಡ್‌ ಸೋಂಕಿತರಿಗೆ ಮೀಸಲಿಟ್ಟಿದ್ದು, ಮೊದಲೇ ಬೂತ್‌ ಮಟ್ಟದ ಅಧಿಕಾರಿಯ ಬಳಿ ನೋಂದಾಯಿಸಿಕೊಳ್ಳಬೇಕು. ಪಿಪಿಇ ಕಿಟ್‌ಗಳನ್ನು ಜಿಲ್ಲಾಡಳಿತದ ವತಿಯಿಂದಲೇ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಚುನಾವಣೆ ಅಕ್ರಮಗಳನ್ನು ತಡೆಯಲು ಸ್ವೀಪ್‌ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಮದ್ಯ, ಹಣ ಅಥವಾ ಟೋಕನ್‌ ಹಂಚಿಕೆ ಮಾಡುವುದು ಕಂಡು ಬಂದಲ್ಲಿ ಅಧಿಕಾರಿಗಳಿಗೆ ದೂರು ನೀಡಬಹುದು. ಹೆಸರು ಗೌಪ್ಯವಾಗಿ ಇಡಲಾಗುವುದು. ಕಳೆದ ಆರು ತಿಂಗಳ ಸರಾಸರಿ ವ್ಯಾಪಾರವನ್ನು ಗಮನಿಸಿ, ಈ ತಿಂಗಳ ಅವಧಿಯಲ್ಲಿ ಅತಿ ಹೆಚ್ಚು ಮದ್ಯ ಮಾರಾಟ ಮಾಡಿದ್ದರೆ ಅಂತಹ ಮದ್ಯದಂಗಡಿ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಭಾರತಿ ಮಾತನಾಡಿ, ಜಿಲ್ಲೆಯಲ್ಲಿ ಬೀದಿ ನಾಟಕ, ಜನಪದ ಹಾಡುಗಳು, ಪೋಸ್ಟರ್‌ ಅಂಟಿಸುವುದು, ಬ್ಯಾನರ್‌ ಹಾಕುವ ಮೂಲಕ ಮತದಾನದ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ‘ಮತದಾನದಿಂದ ಯಾರೂ ಹಿಂದೆ ಉಳಿಯಬೇಡಿ, ಚಿಂತಿಸಿ ಯೋಗ್ಯ ಅಭ್ಯರ್ಥಿಗೆ ಮತ ನೀಡಿ’ಎಂದು ಸ್ಥಳೀಯ ಕೇಬಲ್‌ ನೆಟ್‌ವರ್ಕ್‌, ರೇಡಿಯೋ ಜಿಂಗಲ್ಸ್‌ ಮೂಲಕವು ಪ್ರಚಾರ ಮಾಡಲಾಗುತ್ತಿದೆ ಎಂದರು.

ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಹಾಗೂ ವಿವಿಧ ಸ್ಥಳಗಳಿಗೆ ಅಂಟಿಸುವ ಪೋಸ್ಟರ್‌ ಬಿಡುಗಡೆ ಮಾಡಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೀದಿ ನಾಟಕಕ್ಕೆ ಚಾಲನೆ ನೀಡಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜರಾಂ ಹಾಗೂ ಇತರೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT