ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ರೊಳಗೆ ರೈತರ ಸಾಲ ಸಂಪೂರ್ಣ ಮನ್ನಾ: ಎಚ್‌.ಡಿ. ಕುಮಾರಸ್ವಾಮಿ

ಮಾರ್ಚ್ ವೇಳೆಗೆ ₹ 12 ಸಾವಿರ ಕೋಟಿ ಬಿಡುಗಡೆ
Last Updated 15 ಫೆಬ್ರುವರಿ 2019, 14:12 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: 2020ರ ಮಾರ್ಚ್ ಒಳಗೆ ಎರಡು ಹಂತದಲ್ಲಿ ರೈತರ ಸಾಲ ಮನ್ನಾ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ಬರಗೂರು ಹ್ಯಾಂಡ್ ಪೋಸ್ಟ್ ಬಳಿ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಮೂರನೇ ಹಂತ ಹಾಗೂ ಆಲಗೊಂಡನಹಳ್ಳಿ ಏತ ನೀರಾವರಿ ಯೋಜನೆ, ಅಕ್ಕನಹಳ್ಳಿ ಕೂಡು, ನವಿಲೆ ಗ್ರಾಮದಲ್ಲಿ ನಿರ್ಮಿಸಲಿರುವ ಆಸ್ಪತ್ರೆಯ ಕಟ್ಟಡ ದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಸಹಕಾರಿ ಬ್ಯಾಂಕ್‌ ಹಾಗೂ ರಾಷ್ಟ್ರೀಕತ ಬ್ಯಾಂಕ್‌ಗಳಲ್ಲಿ ರೈತರ ₹ 46 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಮೊದಲ ಹಂತದಲ್ಲಿ ಮಾರ್ಚ್ ವೇಳೆಗೆ ₹ 12 ಸಾವಿರ ಕೋಟಿ ಬಿಡುಗಡೆ ಮಾಡಲಾಗುವುದು. ಇದರಿಂದ 6 ಲಕ್ಷ ರೈತರಿಗೆ ಅನುಕೂಲವಾಗಲಿದೆ. ರೈತರ ಖಾತೆಗೆ ನೇರವಾಗಿ ಹಣ ಜಮಾ ಆಗಲಿದೆ. ಈ ಒಂದು ವರ್ಷ ಸ್ವಲ್ಪ ತೊಂದರೆ ಇದ್ದು, ಮುಂದಿನ ವರ್ಷ ಯಾವುದೇ ಆರ್ಥಿಕ ಸಮಸ್ಯೆ ಇಲ್ಲದೇ ಜನರ ಅನುಕೂಲಕ್ಕಾಗಿ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ವಿವರಿಸಿದರು.

ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದರೂ ಕೇಂದ್ರ ಸರ್ಕಾರ ಬಿಡಿಗಾಸು ಬಿಡುಗಡೆ ಮಾಡಲಿಲ್ಲ. ರಾಜ್ಯ ಸರ್ಕಾರದ ವತಿಯಿಂದ ಎಕರೆಗೆ ₹ 18-20 ಸಾವಿರ ಪರಿಹಾರ ನೀಡಲಾಗುವುದು. ವಿಜಯಪುರ ಸುತ್ತಮುತ್ತ ದ್ರಾಕ್ಷಿ ಬೆಳೆಗಾರರ ನೆರವಿಗೆ ₹ 150 ಕೋಟಿ ಪ್ಯಾಕೇಜ್ ಘೋಷಿಸಲಾಗಿದೆ ಎಂದು ತಿಳಿಸಿದರು.

2007ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಚೇನಹಳ್ಳಿ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ₹ 165 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಈಗ ಮೂರನೇ ಹಂತದ ಯೋಜನೆಯನ್ನು ₹ 141 ಕೋಟಿ ವೆಚ್ಚದಲ್ಲಿ ಜಾರಿಗೊಳಿಸಿ ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಇದರಿಂದಾಗಿ ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿದಂತಾಗುತ್ತದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಮೂಲಕ ಯುವಜನರಿಗೆ ಉದ್ಯೋಗ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಸಚಿವ ಎಚ್.ಡಿ. ರೇವಣ್ಣ ಮಾತನಾಡಿದರು. ಶಾಸಕರಾದ ಸಿ.ಎನ್. ಬಾಲಕೃಷ್ಣ, ಎ.ಟಿ. ರಾಮಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ಸಂಸದೀಯ ಕಾರ್ಯದರ್ಶಿ ಎಂ.ಎ. ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುಪ್ರಿತ್ ಯಜಮಾನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಂಜಿತಾ ನಿಂಗೇಗೌಡ, ದಕ್ಷಿಣ ವಲಯದ ಐಜಿಪಿ ಕೆ.ವಿ. ಶರತ್ ಚಂದ್ರ, ಎಸ್ಪಿ ಎ.ಎನ್. ಪ್ರಕಾಶ್ ಗೌಡ, ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶೀ ರಾಕೇಶ್‍ಸಿಂಗ್, ಕಾರ್ಯದರ್ಶಿ ಕೆ. ಜಯಪ್ರಕಾಶ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಚ್.ಎಲ್. ಪ್ರಸನ್ನ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್. ಪುಟ್ಟಸ್ವಾಮಿಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT