ಶನಿವಾರ, ಸೆಪ್ಟೆಂಬರ್ 24, 2022
21 °C
ಹರ್ ಘರ್ ತಿರಂಗಾ: ಧ್ವಜ ಸಂಹಿತೆ ಪಾಲಿಸಲು ಜಿಲ್ಲಾಧಿಕಾರಿ ಗಿರೀಶ್‌ ಮನವಿ

ಹಾಸನ ಜಿಲ್ಲೆಯಲ್ಲಿ 2.25 ಲಕ್ಷ ರಾಷ್ಟ್ರಧ್ವಜ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆ.13 ರಿಂದ 15 ರವರೆಗೆ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಪ್ರತಿ ಮನೆ ಹಾಗೂ ವಾಣಿಜ್ಯ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಈಗಾಗಲೇ ಜಿಲ್ಲೆಗೆ 3.25 ಲಕ್ಷ ರಾಷ್ಟ್ರಧ್ವಜ ಸಂಗ್ರಹಿಸಲಾಗಿದ್ದು, ಈಗಾಗಲೇ 2.25 ಲಕ್ಷ ದ್ವಜಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗಿದೆ. ಸಂಘ– ಸಂಸ್ಥೆಗಳು, ಗ್ರಾಮ ಪಂಚಾಯಿತಿ, ಸರ್ಕಾರಿ ಹಾಗೂ ಖಾಸಗಿ ಸಂಘ ಸಂಸ್ಥೆಗಳ ಮೂಲಕ ವಿತರಣೆ ಮಾಡಲಾಗುತ್ತಿದೆ. ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ವಿಶೇಷ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಆ. 13 ರಿಂದ 15 ರವರೆಗೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ ನಂತರ, ಸಂಜೆ ವೇಳೆ ಸಂಪ್ರದಾಯದಂತೆ ಇಳಿಸಲಾಗುವುದು. ಸಾರ್ವಜನಿಕರಿಗೆ ಆ. 13 ರಿಂದ 15 ರವರೆಗೆ ದಿನದ 24 ಗಂಟೆಯೂ ಧ್ವಜವನ್ನು ಹಾರಿಸಲು ವಿನಾಯಿತಿ ನೀಡಲಾಗಿದೆ. ನಂತರ ಧ್ವಜವನ್ನು ಗೌರವಾಯುತವಾಗಿ ಸಂಗ್ರಹಿಸಿ, ಇಡಬೇಕು ಎಂದು ಸಲಹೆ ನೀಡಿದರು.

ಧ್ವಜ ಸಂಹಿತೆ ಪಾಲಿಸಿ: ರಾಷ್ಟ್ರಧ್ವಜವನ್ನು ಮೂರು ದಿನಗಳ ಕಾಲ ಹಾರಿಸುವ ಸಾರ್ವಜನಿಕರು ರಾಷ್ಟ್ರಧ್ವಜಕ್ಕೆ ಅವಮಾನ ಆಗದ ರೀತಿಯಲ್ಲಿ ಧ್ವಜ ಸಂಹಿತೆಯನ್ನು ಪಾಲಿಸಬೇಕು ಎಂದು ಆರ್. ಗಿರೀಶ್‌ ಹೇಳಿದರು.

ಹರಿದು ಹೋದ ಹಾಗೂ ಕಲೆಯಾದ ರಾಷ್ಟ್ರಧ್ವಜವನ್ನು ಹಾರಿಸಬಾರದು. ರಾಷ್ಟ್ರಧ್ವಜದ ಪಕ್ಕದಲ್ಲಿ ಹಾಗೂ ಎತ್ತರವಾಗಿ ಬೇರೆ ಯಾವುದೇ ಧ್ವಜವನ್ನು ಹಾರಿಸಬಾರದು. ರಾಷ್ಟ್ರಧ್ವಜ ನೆಲಕ್ಕೆ ಮುಟ್ಟದಂತೆ, ಮರ– ಗಿಡಗಳಿಗೆ ತಾಗಿ ಹರಿಯದಂತೆ ಸುರಕ್ಷಿತವಾಗಿ ಹಾರಿಸುವಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಕಚೇರಿ ಎದುರು ರಾಷ್ಟ್ರಧ್ವಜವನ್ನು ಹಿಡಿದು ಸಾಂಕೇತಿಕವಾಗಿ ಪ್ರದರ್ಶಿಸುವ ಮೂಲಕ ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೇರೆಪಿಸಿದರು‌.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಮ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದ್ ಚಂದ್ರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು