ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ತಾಲ್ಲೂಕಿಗೆ ₹25 ಲಕ್ಷ

ಅನುದಾನ ಬಿಡುಗಡೆಗೆ ಸಿ.ಎಂ ಸೂಚನೆ: ಶಾಸಕ ರೇವಣ್ಣ
Last Updated 4 ಮೇ 2021, 14:22 IST
ಅಕ್ಷರ ಗಾತ್ರ

ಹಾಸನ: ಕೋವಿಡ್‌ ಪೀಡಿತರ ಚಿಕಿತ್ಸಾ ವ್ಯವಸ್ಥೆಗೆ ಜಿಲ್ಲೆಯ ಪ್ರತಿ ತಾಲ್ಲೂಕಿಗೂ ₹ 25 ಲಕ್ಷ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

ಬೇಡಿಕೆ ಈಡೇರಿಕೆ ಭರವಸೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಿ.ಎಂ. ಕಚೇರಿ ಎದುರು ಸೋಮವಾರ ನಡೆಸಲು ಉದ್ದೇಶಿಸಿದ ಧರಣಿ ಕೈ ಬಿಡಲಾಯಿತು. ಶಾಸಕರಾದ ಸಿ.ಎನ್.ಬಾಲಕೃಷ್ಣ, ಕೆ.ಎಸ್‌.ಲಿಂಗೇಶ್ ಅವರೊಂದಿಗೆ ಸಿ.ಎಂ ಭೇಟಿ ಮಾಡಿ, ಜಿಲ್ಲೆಗೆ ಬೇಕಾದ ರೆಮ್‌ಡಿಸಿವಿರ್‌ ಚುಚ್ಚುಮದ್ದು ಸೇರಿದಂತೆ ಆರೋಗ್ಯ ಪರಿಕರಗಳನ್ನು ಒದಗಿಸುವಂತೆ ಮಾಡಿದ ಮನವಿಗೆ ಅವರು ಸ್ಪಂದಿಸಿದರು. ತಕ್ಷಣ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರಿಗೆ ಕರೆ ಮಾಡಿ ಅನುದಾನ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾಧಿಕಾರಿ ಪಿ.ಡಿ ಖಾತೆಯಲ್ಲಿ ₹ 7 ಕೋಟಿ ಹಣ ಇದೆ. ಈವರೆಗೂ ಹಣ ಬಿಡುಗಡೆ ಮಾಡಿಲ್ಲ.
ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಶಾಸಕರಿಗೂ ಜವಾಬ್ದಾರಿ ನೀಡಬೇಕು. ಕೋವಿಡ್‌ ಸಂದಿಗ್ಧ ಸ್ಥಿತಿಯಲ್ಲಿ ಹಣ ಖರ್ಚು ಮಾಡಲು ಇರುವ ನಿಯಮಗಳನ್ನು ಸಡಿಲ ಮಾಡಬೇಕು. ಜನರ ಜೀವ ಉಳಿಸಲು ಹಣದ ಮುಖ ನೋಡಬಾರದು. ಇಂತಹ ಸಂದರ್ಭದಲ್ಲಿ ಯಾರಾದರೂ ಭ್ರಷ್ಟಾಚಾರ ಮಾಡಿದರೆ ಅವರನ್ನು ದೇವರೇ ನೋಡಿಕೊಳ್ಳುತ್ತಾನೆ ಎಂದರು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪ ಸಂಖ್ಯಾತರ ಇಲಾಖೆ ವಿದ್ಯಾರ್ಥಿ ನಿಲಯಗಳು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಕೋವಿಡ್‌ ಆರೈಕೆ ಕೇಂದ್ರಗಳನ್ನಾಗಿ ಪರಿವರ್ತಿಸಿ, 500 ಹಾಸಿಗೆ ವ್ಯವಸ್ಥೆ ಮಾಡಬೇಕು. ಹಾಸಿಗೆ, ಮಂಚ ಹಾಗೂ ಇತರೆ ಸೌಲಭ್ಯಗಳಿಗೆ ದಾನಿಗಳ ನೆರವು ಪಡೆಯಬೇಕು. ತಾಲ್ಲೂಕು ಆಸ್ಪತ್ರೆಗಳಿಗೆ ವೈದ್ಯರು, ನರ್ಸ್‌‌ಗಳು, ಪ್ರಯೋಗಾಲಯ ತಂತ್ರಜ್ಞರನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕೋವಿಡ್‌ ಆಸ್ಪತ್ರೆಯ ಹಾಸಿಗೆಗಳು ಭರ್ತಿ ಆಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆಯಿಂದ 24 ಜನ ಮೃತಪಟ್ಟಿದ್ದಾರೆ. ಆ ರೀತಿಯ ಘಟನೆ ಹಾಸನದಲ್ಲಿ ನಡೆಯದಂತೆ ಜಿಲ್ಲಾಡಳಿತಮುಂಜಾಗ್ರತೆ ವಹಿಸಬೇಕು ಎಂದು ಹೇಳಿದರು.

ಕೋವಿಡ್‌ ಎರಡನೇ ಅಲೆ ಬಂದ ಬಳಿಕ ಜಿಲ್ಲೆಯಲ್ಲಿ 154 ಮಂದಿ ಮೃತರಾಗಿದ್ದಾರೆ. ಸೋಮವಾರ 200 ವಯಲ್‌ ರೆಮೆಡಿಸಿವಿರ್‌ ಜಿಲ್ಲೆಗೆ ಕಳುಹಿಸಲಾಗಿದೆ. ಎಲ್ಲಾ ಕೆಲಸ ಸಿ.ಎಂ. ಮಾಡಲು ಆಗುವುದಿಲ್ಲ. ಸರ್ಕಾರದಿಂದ ಸಿಗುವ ಅನುದಾನ ಬಳಸಿಕೊಂಡು ಕೋವಿಡ್‌ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದು ತಿಳಿಸಿದರು.

ತರಕಾರಿ ಮಾರಾಟ ಮಾಡುವವರಿಗೆ ಸರ್ಕಾರ ತೊಂದರೆ ನೀಡಬಾರದು. ಆದರೆ ನಿತ್ಯ ಬೆಳಿಗ್ಗೆ 6 ರಿಂದ
12 ಗಂಟೆ ವರೆಗೆ ದಿನಸಿ ಅಂಗಡಿ ತೆರೆಯುವುದು ಅಗತ್ಯವಿಲ್ಲ. ವಾರಕ್ಕೆ ಸಾಕಾಗುವಷ್ಟು ವಸ್ತುಗಳನ್ನು ಒಮ್ಮೆಲೆ ಖರೀದಿಸಲಿ. ವಾರದಲ್ಲಿ ನಾಲ್ಕು ದಿನ ದಿನಸಿ ಅಂಗಡಿಗಳಿಗೆ ಬೆಳಿಗ್ಗೆ 6 ರಿಂದ 10 ಗಂಟೆ ವರೆಗೆ ಮಾತ್ರ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಲಾಕ್‌ಡೌನ್‌ ನಿಂದ ಕಾರ್ಮಿಕರು, ಬಡವರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಪ್ರತಿಯೊಬ್ಬರಿಗೂ 5 ಕೆ.ಜಿ. ಅಕ್ಕಿ, 3 ಕೆ.ಜಿ. ರಾಗಿ ಅಥವಾ ಗೋಧಿ ಮತ್ತು ಮಾಸಿಕ ಕನಿಷ್ಟ ₹2 ಸಾವಿರ ಸಹಾಯಧನ ನೀಡಬೇಕು. ಬಿತ್ತನೆ ಆಲೂಗಡ್ಡೆ, ಗೊಬ್ಬರ, ಔಷಧಿ ಖರೀದಿಗೆ ಸಬ್ಸಿಡಿ ನೀಡಬೇಕು. ಬೇಸಿಗೆ ಆರಂಭವಾಗುತ್ತಿದ್ದು,ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಆದ್ದರಿಂದ ಪ್ರತಿ ವಿಧಾನಸಭಾಕ್ಷೇತ್ರಕ್ಕೆ ಕನಿಷ್ಠ ₹1 ಕೋಟಿ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT