ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

36 ಬಾಲ್ಯವಿವಾಹ ಪ್ರಕರಣಕ್ಕೆ ಬ್ರೇಕ್‌

ಕಾರ್ಯಾಗಾರದಲ್ಲಿ ಜಿ.ಪಂ ಸಿಇಒ ವಿಜಯ ಪ್ರಕಾಶ್‌
Last Updated 24 ಮಾರ್ಚ್ 2019, 12:39 IST
ಅಕ್ಷರ ಗಾತ್ರ

ಹಾಸನ: ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ ಎಂದು ನ್ಯಾಯಾಧೀಶ ಡಿ.ವೈ. ಬಸಾಪುರ್ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾ ಸಮಗ್ರ ಮಹಿಳಾ ರಕ್ಷಣಾ ಘಟಕ ಆಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಆಯೋಜಿಸಿದ್ದ ಬಾಲ ನ್ಯಾಯ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಹಲವು ಮೂಢನಂಬಿಕೆಗಳಿವೆ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಂತಿಲ್ಲ. ಮಕ್ಕಳು ಶೈಕ್ಷಣಿಕವಾಗಿ ಹಾಗೂ ನೈತಿಕವಾಗಿ ಉನ್ನತಮಟ್ಟ ತಲುಪಲು ಪೋಷಕರ ಪಾತ್ರ ಹೆಚ್ಚಿದೆ. ಈ ಮೂರು ಕಾಯ್ದೆಗಳ ಅನುಷ್ಠಾನದಲ್ಲಿ ಎಲ್ಲಾ ಇಲಾಖೆಗಳು, ಪೋಷಕರು ಸಹಕಾರ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್.ವಿಜಯ್‍ಪ್ರಕಾಶ್ ಮಾತನಾಡಿ, ಮಕ್ಕಳು, ಮಹಿಳೆಯರ ರಕ್ಷಣೆಗೆ ಕಾನೂನುಗಳಿದ್ದರೂ ದೌರ್ಜನ್ಯ ನಡೆಸುವುದು ಸಂಪೂರ್ಣವಾಗಿ ನಿಂತಿಲ್ಲ. ಹಾಗಾಗಿ ಸಾಮಾಜಿಕ ಮನ ಪರಿವರ್ತನೆ, ಜಾಗೃತಿ ಕಾರ್ಯಕ್ರಮಗಳು ಅಗತ್ಯ ಎಂದು ನುಡಿದರು.

ಲೈಂಗಿಕ ದೌರ್ಜನ್ಯ ಶೇಕಡಾ 90 ರಷ್ಟು ನಂಬಿಕಸ್ಥರಿಂದಲೇ ನಡೆಯುತ್ತಿದ್ದು, ಸಾಮಾಜಿಕವಾಗಿ, ಆರ್ಥಿಕವಾಗಿ ಮಹಿಳೆ ಮುಂದೆ ಬರಲು ಸಹಕರಿಸಬೇಕು. ಜಿಲ್ಲೆಯಲ್ಲಿ 38 ಬಾಲ್ಯವಿವಾಹ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ 36 ಪ್ರಕರಣಗಳನ್ನು ತಡೆಯಲಾಗಿದೆ ಎಂದು ವಿವರಿಸಿದರು.

ತಾಲ್ಲೂಕು ಮಟ್ಟದಲ್ಲಿ ಪ್ರತಿವಾರ ಎಲ್ಲಾ ಪ್ರಕರಣಗಳ ವಿಶೇಷ ಪರಿಶೀಲನೆ ನಡೆಯಬೇಕಿದೆ. ಇದಕ್ಕೆ ಎಲ್ಲಾ ಇಲಾಖೆಗಳು ಸಹಕರಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅತ್ಯಂತ ಕಟ್ಟುನಿಟ್ಟಿನ ದೃಢನಿರ್ಧಾರ ತೆಗೆದುಕೊಂಡಿದ್ದು, ಇವುಗಳ ಮೂಲಕ ದೌರ್ಜನ್ಯಗಳು ಇಳಿಮುಖ ಕಾಣಬೇಕಿದೆ ಎಂದರು.

ಜಿಲ್ಲಾ ಮಕ್ಕಳ ಸಮಗ್ರ ರಕ್ಷಣಾ ಘಟಕ ಪ್ರಕಟಿಸಿರುವ ‘ಕಲರವ’ ಕಿರು ಹೊತ್ತಿಗೆ ಹಾಗೂ ಕರಪತ್ರ ಬಿಡುಗಡೆಗೊಳಿಸಲಾಯಿತು.
ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಕೆ.ಬಸವರಾಜ್, ವಕೀಲರ ಸಂಘದ ಅಧ್ಯಕ್ಷ ಜೆ.ಪಿ.ಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಟಿ.ಪಾಪಬೋವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT