ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

52 ಜೀತದಾಳು ಬಂಧಮುಕ್ತ

ಸಾವಂಕನಹಳ್ಳಿ ತೋಟದಲ್ಲಿ ದುಡಿಯುತ್ತಿದ್ದ ಕಾರ್ಮಿಕರು
Last Updated 17 ಡಿಸೆಂಬರ್ 2018, 13:54 IST
ಅಕ್ಷರ ಗಾತ್ರ

ಹಾಸನ: ಹೆಚ್ಚು ಕೂಲಿ ಕೊಡುವುದಾಗಿ ನಂಬಿಸಿ, ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 52 ಮಂದಿ ಬಡ ಕೂಲಿ ಕಾರ್ಮಿಕರನ್ನು ಜೀತದಾಳಾಗಿ ಇರಿಸಿಕೊಂಡಿದ್ದ ಅಮಾನವೀಯ ಪ್ರಕರಣವನ್ನು ಜಿಲ್ಲಾ ಪೊಲೀಸರು ಬೇಧಿಸಿದ್ದಾರೆ.

ತಾಲ್ಲೂಕಿನ ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯ ಸಾವಂಕನಹಳ್ಳಿ ಗ್ರಾಮದ ತೋಟವನ್ನು ಅದೇ ಊರಿನ ಕೃಷ್ಣೇಗೌಡ ಎಂಬುವರಿಂದ ಗುತ್ತಿಗೆ ಪಡೆದಿದ್ದ ಅರಸೀಕೆರೆ ತಾಲ್ಲೂಕಿನ ಮುನೇಶ್ ಅಲಿಯಾಸ್ ಮುರುಳಿ ಎಂಬಾತ 4 ಮಕ್ಕಳು, 17 ಮಹಿಳೆಯರು ಹಾಗೂ ಉಳಿದ ಪುರುಷರನ್ನು ಜೀತದಾಳಾಗಿ ಇಟ್ಟುಕೊಂಡಿದ್ದ.

ಪೊಲೀಸ್‌ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್ ಗೌಡ ಹಾಗೂ ಸಿಬ್ಬಂದಿ ದಾಳಿ ನಡೆಸಿ ನರಕಯಾತನೆ ಅನುಭವಿಸುತ್ತಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಿ ಬಂಧ ಮುಕ್ತಗೊಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಸ್ತ್ರಿ ಮುನೇಶ್ ಮತ್ತು ಬಸವರಾಜ್ ಅವರನ್ನು ಬಂಧಿಸಿ, ಕಾರ್ಮಿಕರ ಸಾಗಣೆಗೆ ಬಳಸುತ್ತಿದ್ದ ಬೈಕ್, ಕಾರು ಸೇರಿ ಒಟ್ಟು 5 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಮಿಕರುಮಲ, ಮೂತ್ರ ವಿಸರ್ಜನೆಗೆ ಹೋಗಬೇಕಾದರೆ ಮೇಸ್ತ್ರಿ ನೇಮಿಸಿದ್ದ ಕಾವಲುಗಾರರ ಭದ್ರತೆಯಲ್ಲಿ ಹೋಗಿ ಬರಬೇಕಿತ್ತು. ತೆಂಗಿನಗರಿಯಲ್ಲಿ ನಿರ್ಮಿಸಿದ್ದ ಗುಡಿಸಲಿನಲ್ಲಿಯೇ ವಾಸ. ಟಾರಪಲ್‌ ಮೇಲೆ ಗೋಣಿ ಚೀಲ ಹೊದ್ದುಕೊಂಡು ಮಲಗುತ್ತಿದ್ದರು. ಸದ್ಯ ಕೂಲಿ ಕಾರ್ಮಿಕರಿಗೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ.

ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವೃದ್ಧ ನಾಗಣ್ಣ ಅವರು ಕಾರ್ಮಿಕರ ಜೊತೆ ಇದ್ದರು. ಈ ನಡುವೆ ಮುನೇಶನ ಸಂಕೋಲೆಯಿಂದ ತಪ್ಪಿಸಿಕೊಂಡಿದ್ದ ಕಾರ್ಮಿಕ ಕೃಷ್ಣಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದರು.

‘ಹೊಟ್ಟೆಪಾಡಿಗಾಗಿ ಆಂದ್ರ ಪ್ರದೇಶ, ವಿಜಯಪುರ, ಹುಬ್ಬಳ್ಳಿ, ಧಾರವಾಡ, ತುಮಕೂರು ಮೊದಲಾದ ಜಿಲ್ಲೆಗಳಿಂದ ಬಂದ ಕಾರ್ಮಿಕರನ್ನು ಅಮಾನವೀಯವಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಬೆಳಗ್ಗೆ-ರಾತ್ರಿ ಎನ್ನದೆ ತನ್ನದೇ ವಾಹನಗಳಲ್ಲಿ ಬೇರೆ ಕಡೆಗೆ ಶುಂಠಿ ಕೀಳುವುದೂ ಸೇರಿ ಬೇರೆ ಕೆಲಸಗಳಿಗೆ ಮುನೇಶ್‌ ಕರೆದುಕೊಂಡು ಹೋಗುತ್ತಿದ್ದ. ಏನಾದರೂ ಪ್ರಶ್ನೆ ಮಾಡಿದರೆ ಹಲ್ಲೆ ನಡೆಸುತ್ತಿದ್ದ’ ಎಂದು ಹಾವೇರಿ ಜಿಲ್ಲೆ ಕಾರ್ಮಿಕ ಸಂತೋಷ್ ದೂರಿದರು.

‘ಮಹಿಳೆಯರೂ ಒಬ್ಬರಿಗೊಬ್ಬರು ಮಾತನಾಡುವಂತಿರಲಿಲ್ಲ. ತಿಂಗಳಿಗೊಮ್ಮೆ ತಣ್ಣೀರು ಸ್ನಾನ, ಅನಾರೋಗ್ಯವಾದರೂ ಹೊರಗೆ ಕಳಿಸುತ್ತಿರಲಿಲ್ಲ. ತೋಟದ ಸುತ್ತಲೂ ಬೇಲಿ ಹಾಕಲಾಗಿತ್ತು. ದಿನದ ಮೂರೂ ಹೊತ್ತು ಅನ್ನ-ಸಾಂಬರ್ ಹೊರತಾಗಿ ಬೇರೇನೂ ಕೊಡುತ್ತಿರಲಿಲ್ಲ’ ಎಂದು ಕೂಲಿ ಕಾರ್ಮಿಕರಾದ ಮಂಜಮ್ಮ ಅಲವತ್ತುಕೊಂಡರು.

‘ದೈಹಿಕ ಹಲ್ಲೆ ಹಾಗೂ ಕಾರ್ಮಿಕ ಕಾಯ್ದೆ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಜರುಗಿಸಲಾಗುವುದು. ಕಾರ್ಮಿಕರಿಗೆ ಸರ್ಕಾರದ ಸವಲತ್ತು ದೊರಕಿಸಿಕೊಡಲು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಡಿವೈಎಸ್‌ಪಿ ಟಿ.ಆರ್‌.ಪುಟ್ಟಸ್ವಾಮಿಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT