ರಾಜಕೀಯ ಲಾಭಕ್ಕಾಗಿ ಭಾರತ ಬಂದ್ಗೆ ಕರೆ: ಶಾಸಕ ಪ್ರೀತಂ ಜೆ.ಗೌಡ

ಹಾಸನ: ‘ರಾಜಕೀಯವಾಗಿ ಮುಳುತ್ತಿರುವ ಹಡಗಿನಂತಿರುವ ಕಾಂಗ್ರೆಸ್ ತೈಲ ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್ಗೆ ಕರೆ ನೀಡಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ’ ಎಂದು ಶಾಸಕ ಪ್ರೀತಂ ಜೆ.ಗೌಡ ಟೀಕಿಸಿದರು.
‘ಬಂದ್ಗೆ ಕರೆಗೆ ಸಾರ್ವಜನಿಕವಾಗಿ ಟೀಕೆ ವ್ಯಕ್ತವಾಗುತ್ತಿದೆ. ಬಲವಂತವಾಗಿ ಅಂಗಡಿ ಮುಗ್ಗಟ್ಟು, ಶಾಲೆ ಕಾಲೇಜು ಮುಚ್ಚಿಸುವುದು ಹಾಗೂ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರೆ ತಕ್ಕ ಉತ್ತರ ನೀಡಲಾಗುವುದು ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
‘ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾಮಗಾರಿ ಸಹಿಸದೆ ಕಾಂಗ್ರೆಸ್ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಜನರ ಮನಸ್ಸನ್ನು ಬದಲಿಸುವ ಕಾರಣಕ್ಕಾಗಿ ಬಂದ್ಗೆ ಕಾಂಗ್ರೆಸ್ ಕರೆ ಕೊಟ್ಟಿದೆ’ ಎಂದು ಹೇಳಿದರು.
‘ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪೆಟ್ರೋಲ್ ಮೇಲಿನ ಸುಂಕವನ್ನು ಶೇ 3 ರಷ್ಟು ಹೆಚ್ಚಿಸಿದರು. ಪೆಟ್ರೋಲ್ ಬೆಲೆ ₹ 10 ಏರಿದರೆ ಅದರಲ್ಲಿ ₹ 3 ರಾಜ್ಯ ಸರ್ಕಾರಕ್ಕೆ ಮತ್ತು ₹ 7 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂದಾಯವಾಗುತ್ತದೆ. ಪ್ರಧಾನಿ ಮೋದಿ ಅವರನ್ನು ಸೋಲಿಸಬೇಕೆಂಬ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಸುಳ್ಳು ಸುದ್ದಿ ಹರಡುತ್ತಿದೆ’ ಎಂದು ದೂರಿದರು.
‘ಮೋದಿ ಅವರ ಜನಪರ ಕಾರ್ಯ ಎಲ್ಲರಿಗೂ ಗೊತ್ತಿದೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಕಾರಣ ಭಾರತ್ ಬಂದ್ ವಿಚಾರವನ್ನು ಕಾಂಗ್ರೆಸ್ ದೇಶದಲ್ಲಿ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹಾಗೂ ಪುನೀತ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.