ಹಾಸನಾಂಬ ದೇವಿ ಪವಾಡ ಬಯಲು: ಅ.23ಕ್ಕೆ ನಗರದಲ್ಲಿ ಭಕ್ತರಿಂದ ಮೆರವಣಿಗೆ

7
‘ದೇವರ ನಂಬಿಕೆ ಅವರವರ ಭಾವಕ್ಕೆ ಬಿಟ್ಟದ್ದು’

ಹಾಸನಾಂಬ ದೇವಿ ಪವಾಡ ಬಯಲು: ಅ.23ಕ್ಕೆ ನಗರದಲ್ಲಿ ಭಕ್ತರಿಂದ ಮೆರವಣಿಗೆ

Published:
Updated:
Deccan Herald

ಹಾಸನ: ‘ಹಾಸನಾಂಬ ದೇವಿ ಪವಾಡ ಬಯಲು ಕುರಿತು ವಿಚಾರವಾದಿಗಳ ಕೈಗೊಂಡಿರುವ ತೀರ್ಮಾನ ಖಂಡಿಸಿ ಅ. 23ರಂದು ಹೇಮಾವತಿ ಪ್ರತಿಮೆಯಿಂದ ಭಕ್ತರು ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸುವರು’ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಎಚ್ಚರಿಕೆ ನೀಡಿದರು.

‘ಮಹೋತ್ಸವ ಸಮೀಪಿಸುತ್ತಿರುವಾಗ ಕೆಲ ವಿಚಾರವಾದಿಗಳು ದೇವಾಲಯದ ಗರ್ಭಗುಡಿ ತೆರೆಯುವ ಮುನ್ನ ತಾಯಿಯ ಪವಾಡವನ್ನು ಬಯಲು ಮಾಡಬೇಕು. ಇಲ್ಲವಾದರೇ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿರುವುದು ಸರಿಯಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

‘12ನೇ ಶತಮಾನದಲ್ಲಿ ನಿರ್ಮಾಣವಾದ ದೇವಾಲಯಕ್ಕೆ ಪ್ರಸ್ತುತ ಭಕ್ತರು ನೀಡಿರುವ ಕಾಣಿಕೆಯಿಂದ ಜಿಲ್ಲಾಡಳಿತ ಜನರಿಗೆ ಮೂಲ ಸೌಕರ್ಯ ಒದಗಿಸುತ್ತಿದೆ. ಗರ್ಭಗುಡಿ ಬಾಗಿಲನ್ನು ವರ್ಷಕ್ಕೊಮ್ಮೆ ತೆರೆದು ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ದೇವರ ಮೇಲಿನ ನಂಬಿಕೆಯು ಅವರವರ ಭಾವಕ್ಕೆ ಬಿಟ್ಟಿದೆ. ಆದರೆ, ದೇವರು ಮತ್ತು ಭಕ್ತರ ನಡುವೆ ವಿಚಾರವಾದಿಗಳು ಹುಳುಕನ್ನು ಹುಡುಕುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಗರ್ಭಗುಡಿಯಲ್ಲಿ ವರ್ಷವೀಡಿ ಬಾಡದೆ ಇರುವ ಹೂವು, ದೀಪ ಆರದೇ ಇರುವ ಬಗ್ಗೆ ವಿಚಾರವಾದಿಗಳಿಗೇನು ತೊಂದರೆ? ದೇವಿಯ ಮಹಿಮೆಯನ್ನು ಉಪಯೋಗಿಸಿಕೊಂಡು ಯಾರಾದರೂ ಹಣ ಮಾಡುತ್ತಿದ್ದಾರೆಯೇ? ದೇವಾಲಯದ ಹೊರಗಿರುವ ಹೂವಿನ ಅಂಗಡಿ, ದೀಪದ ಅಂಗಡಿ ಮತ್ತು ಫೋಟೊ ಅಂಗಡಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ? ಈ ಬಗ್ಗೆ ಭಾರತ ಜ್ಞಾನ ವಿಜ್ಞಾನ ಸಮಿತಿ ಪದಾಧಿಕಾರಿಗಳು ಉತ್ತರಿಸಬೇಕು’ ಎಂದು ಆಗ್ರಹಿಸಿದರು.

‘ಹಾಸನ ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಅವರು ಸಹ ದೇವಿ ಪವಾಡ ಅಂತ ಎಲ್ಲಿಯೂ ಹೇಳಿಲ್ಲ ಎಂದಿದ್ದಾರೆ. ಇನ್ನಾದರೂ ವಿಚಾರವಾದಿಗಳಿಗೆ ಈ ಬಗ್ಗೆ ಅರ್ಥವಾಗಬೇಕಿದೆ’ ಎಂದರು.

‘ದೇವಾಲಯದ ಗರ್ಭಗುಡಿಯ ಬಾಗಿಲನ್ನು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಮಾಧ್ಯಮದವರ ಸಮ್ಮುಖದಲ್ಲಿಯೇ ತೆರೆಯಲಾಗುತ್ತದೆ. ಕೊನೆ ದಿನ ಸಹ ಎಲ್ಲರ ಸಮ್ಮುಖದಲ್ಲಿಯೇ ಬಾಗಿಲು ಮುಚ್ಚಲಾಗುತ್ತದೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ರಾಕೇಶ್ ಸಿಂಗ್ ಅವರು ದೇವಾಲಯದ ಬಾಗಿಲು ತೆರೆದ ದಿನ ಅಲ್ಲಿ ಇದ್ದ ನಿಜಾಂಶವನ್ನು ಆಕಾಶವಾಣಿಯ ಮೂಲಕ ಮಾಹಿತಿ ನೀಡಿದ್ದಾರೆ’ ಎಂದು ವಿವರಿಸಿದರು.

‘ಆದರೆ, ಈಗ ಇದ್ದಕ್ಕಿದ್ದಂತೆ ವಿಚಾರವಾದಿಗಳು ದೇವಿಯ ಪವಾಡವನ್ನು ಬಯಲು ಮಾಡಿ ಎಂದು ದುಂಡು ಮೇಜಿನ ಸಭೆ ಮಾಡುವ ಮೂಲಕ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಪವಾಡವನ್ನು ಬಯಲು ಮಾಡಿ ಅಂತ ವಿಚಾರವಾದಿಗಳು ಹೇಳುತ್ತಿರುವುದು ಕೇವಲ ಪ್ರಚಾರಕ್ಕಾಗಿ ಮಾತ್ರವಾಗಿದೆ. ಪವಾಡ ಬಯಲು ಮಾಡಿ ಅಂತ ಒತ್ತಡ ಹಾಕುವ ಮೂಲಕ ಮುಂದಿನ ದಿನಗಳಲ್ಲಿ ಜಿಲ್ಲೆ ಅಥವಾ ರಾಜ್ಯದಲ್ಲಿ ಏನಾದರೂ ಅನಾಹುತಗಳು ಸಂಭವಿಸಿದರೇ ಅದಕ್ಕೆ ವಿಚಾರವಾದಿಗಳೇ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ವಿಶ್ವ ಹಿಂದೂ ಪರಿಷತ್ ನಗರ ಕಾರ್ಯದರ್ಶಿ ರವಿ, ನಾಗೇಶ್, ಮರಾಠ ಸಭಾದ ಕಾರ್ಯದರ್ಶಿ ಜ್ಞಾನೇಶ್, ರಘು, ಬಿಜೆಪಿ ಮುಖಂಡ ಪುನೀತ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !