ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದ ಕಲೆಗೆ ಎಂದಿಗೂ ಅಳಿವಿಲ್ಲ: ಜಿ.ಆರ್.ಮಂಜೇಶ್

Last Updated 15 ಅಕ್ಟೋಬರ್ 2018, 15:49 IST
ಅಕ್ಷರ ಗಾತ್ರ

ಹಾಸನ : ‘ಜನಸಾಮಾನ್ಯರಲ್ಲಿ ಆಳವಾಗಿ ಬೇರೂರಿರುವ ಜನಪದದ ಬೇರುಗಳು ಅವಕಾಶ ಸಿಕ್ಕಿದಾಗ ಪುನಃ ಚಿಗುರೆಡೊಯುತ್ತವೆ’ ಎಂದು ಶಾಂತಿಗ್ರಾಮದ ಗ್ರಾಮ ಸಂಸ್ಕೃತಿ ಅಧ್ಯಯನ ಕೇಂದ್ರದಸಂಚಾಲಕ ಜಿ.ಆರ್.ಮಂಜೇಶ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಶಾಂತಿಗ್ರಾಮದ ದೊಡ್ಮನೆ ಆವರಣದಲ್ಲಿ ಗ್ರಾಮ ಸಂಸ್ಕೃತಿ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಗೊಂದಳಿ ಕಲಾವಿದರ ಕಲಾ ಮೇಳದಲ್ಲಿ ಮಾತನಾಡಿದರು.

‘ಸೀರಿಯಲ್ ಮತ್ತು ಸರಾಯಿ ಗ್ರಾಮೀಣ ಭಾಗದ ಸ್ತ್ರೀ, ಪುರುಷರಿಗೆ ಮಾರಕ ರೋಗವಾಗಿ ಪರಿಣಮಿಸಿದ್ದು, ಅಲ್ಲಿಂದ ಅವರನ್ನು ಮೂಲ ಸಂಸ್ಕೃತಿಗೆ ಸೆಳೆಯಲು, ಉಪಯುಕ್ತ ಸಿನಿಮಾಗಳು, ತಿಂಗಳ ಮಾವನ ಹಬ್ಬ, ರೊಟ್ಟಿ ಹಬ್ಬದಂತ ಆಚರಣೆಗಳನ್ನು ಕೋಲಾಟ, ರಂಗೋಲಿ, ಒಗಟು, ಗಾದೆ ಮತ್ತು ರಾಗಿಕಲ್ಲಿನ ಪದಗಳ ಸ್ಪರ್ಧೆಯನ್ನು ಆಯೋಜಿಸುತ್ತಿದ್ದು. ಗ್ರಾಮೀಣ ಜನತೆ ಇವುಗಳಲ್ಲಿ ಭಾಗವಹಿಸಿ ಜನಪದರ ಬದುಕನ್ನು ಅರ್ಥೈಸಿ ಕೊಳ್ಳುವುದರಿಂದತಾವು ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ’ ಎಂದು ಸಲಹೆ ನೀಡಿದರು.

ಜನಪದ ವಿದ್ವಾಂಸ ಹಂಪನಹಳ್ಳಿ ತಿಮ್ಮೇಗೌಡ ಅವರು ಗೊಂದಳಿ ಕಲೆ ಕುರಿತು ಮಾತನಾಡಿ, ‘ದಕ್ಷಿಣ ಕರ್ನಾಟಕದಲ್ಲಿ ಚೌಡಿಕೆ ಕಥೆ, ಜೋಗಿ ಪದಗಳಿದ್ದಂತೆ ಉತ್ತರ ಕರ್ನಾಟಕದಲ್ಲಿ ಗೊಂದಳಿ ಕಲಾ ಮೇಳ ಇದೆ. ಲೌಕಿಕ ಹಾಗೂ ಅಧ್ಯಾತ್ಮಗಳೆರಡರ ಸಮ್ಮಿಲನ ಗೊಂದಳಿ ಕಲೆಯ ವೈಶಿಷ್ಟ್ಯ. ಈ ಕಲಾವಿದರು ಮೂಲ ಮರಾಠಿಗರಾಗಿದ್ದು, ಶಿವಾಜಿ ಸಂಸ್ಥಾನದಲ್ಲಿ ಗೂಡಾಚಾರರಂತೆ ಕೆಲಸ ಮಾಡುತ್ತಿದ್ದು, ತಮ್ಮ ಕಥನ ಶಕ್ತಿಯನ್ನು ಬಳಸಿಕೊಂಡು ಅಂಬಾಭವಾನಿ, ಯಲ್ಲಮ್ಮನ ಮಹಿಮೆಯನ್ನು ಹಾಡುತ್ತಾ ಈ ಕಲೆಯನ್ನು ಪ್ರಚುರಪಡಿಸಿದರು’ ಎಂದು ವಿವರಿಸಿದರು.

ಜನಪದ ವಿದ್ವಾಂಸ ಚಂದ್ರು ಕಾಳೇನಹಳ್ಳಿ ಮಾತನಾಡಿ, ಸಿನಿಮಾ, ಟಿ.ವಿ. ಆಕ್ರಮಣದಿಂದಾಗಿ ಜನಪದಕ್ಕೆ ತಾತ್ಕಾಲಿಕ ಹಿನ್ನಡೆಯಾದರೂಅವುಗಳ ಅಡ್ಡ ಪರಿಣಾಮಗಳನ್ನು ಅರಿತಾಗ ಜನಪದ ಸಂಸ್ಕೃತಿಯಡೆಗೆ ಜನರು ಒಲಿಯುವರು. ಇಂದಿಗೂ ದಸರಾ, ಹಬ್ಬ, ಜಾತ್ರೆಗಳ ಆಚರಣೆಯಲ್ಲಿ ಜನಪದ ಸಂಸ್ಕೃತಿ ಅಡಗಿದ್ದು, ವಿಭಿನ್ನ ನೆಲೆಯಲ್ಲಿ ಅದನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.

ಸಿನಿಮಾ ನಿರ್ದೇಶಕ ರವೀಂದ್ರನಾಥ ಸಿರಿವರ ಮಾತನಾಡಿ, ಗೊಂದಳಿಗರು ಸ್ವಾಭಿಮಾನಿಗಳು. ಗೊಂದಲಿಗ ಸ್ತ್ರೀಯರು ಕೌದಿ ಕಲೆಯಲ್ಲಿ ಪರಿಣಿತರಾಗಿದ್ದು, ತಮ್ಮ ಕೌದಿ ಸಿನಿಮಾದಲ್ಲಿ ಅವರ ಸಂಸ್ಕೃತಿ ಆಚರಣೆಗಳನ್ನು ಬಳಸಿಕೊಳ್ಳಲಾಗಿದೆ ಎಂದರು.

ಗೊಂದಳಿ ಕಲಾವಿದರಾದ ವೆಂಕಪ್ಪ ಅಂಬಾಜಿ ಸುಗೇತಕರ ಮತ್ತು ತಂಡದ ಕಲಾವಿದರನ್ನು ಮತ್ತು ಇತ್ತೀಚೆಗೆ ನಿವೃತ್ತರಾದ ಲೆಕ್ಕಾಧಿಕಾರಿ ಬಿ.ಎ.ಮಲ್ಲೇಶಪ್ಪ, ದ್ವಾರಕಾನಾಥ್, ಪ್ರತಿಭಾವಂತ ವಿದ್ಯಾರ್ಥಿನಿ ವಂದನಾ ಅವರನ್ನು ಸನ್ಮಾನಿಸಲಾಯಿತು.

ಗ್ರಾಮ ಸಂಸ್ಕೃತಿ ಅಧ್ಯಯನ ಕೇಂದ್ರದಹಿರಣ್, ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ವಿ.ಎ.ನಂಜುಂಡಸ್ವಾಮಿ, ದೇವಾಂಗ ನೌಕರರ ಸಂಘದ ಅಧ್ಯಕ್ಷ ಬಿ.ಸೋಮಶೇಖರ್, ಪದಾಧಿಕಾರಿಗಳಾದ ರಾಮಶೆಟ್ಟಿ, ರಾಜಶೆಟ್ಟಿ, ಕುಮಾರ್, ಜಯಚಂದ್ರಗುಪ್ರ, ಮಹೇಶ್, ಪ್ರಕಾಶ್, ತಿಮ್ಮಶೆಟ್ಟಿ ಹಾಗೂ ಲೇಖಕರಾದ ಗೊರೂರು ಶಿವೇಶ್, ಗೊರೂರು ಅನಂತರಾಜು ಮತ್ತು ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT