ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಡಿಗೇಡಿಗಳಿಂದ 600 ಅಡಿಕೆ ಮರ ಧ್ವಂಸ

ಹಳೇಬೀಡು: ನೆಲಕ್ಕೆ ಉರುಳಿದ ಹೊಂಬಾಳೆ ಬಿಟ್ಟ ಮರಗಳು
Last Updated 31 ಡಿಸೆಂಬರ್ 2021, 18:37 IST
ಅಕ್ಷರ ಗಾತ್ರ

ಹಳೇಬೀಡು: ಇಲ್ಲಿನ ಯಲಹಂಕ ಗ್ರಾಮ ಪಂಚಾಯಿತಿಯ ಅಜ್ಜೇನಹಳ್ಳಿಯ ಉಪ್ಪಾರ ಸಮುದಾಯದ ರೈತ ವೀರಲಿಂಗೇಗೌಡರ ತೋಟದಲ್ಲಿದ್ದ 600 ಅಡಿಕೆ ಮರಗಳನ್ನು ಕಿಡಿಗೇಡಿಗಳು ಕತ್ತರಿಸಿರುವುದು ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. 1 ಎಕರೆ 5 ಗುಂಟೆಯಲ್ಲಿ ಬೆಳೆಸಿದ್ದ ಮರಗಳಲ್ಲಿ ಮುಂದಿನ ವರ್ಷದಿಂದ ಫಸಲು ದೊರೆಯುತ್ತಿತ್ತು.

‘ಬರಗಾಲದಲ್ಲಿ ಕೊಳವೆಬಾವಿ ಒಣಗಿದಾಗ ಪತ್ನಿ ಕಮಲಮ್ಮ ನೆರವಿನೊಂದಿಗೆ 1 ಕಿ.ಮೀ ದೂರದಿಂದ ನೀರು ಹೊತ್ತು ತೋಟವನ್ನು ಉಳಿಸಿಕೊಂಡಿದ್ದೆ. ಇದುವರೆಗೆ ₹12 ಲಕ್ಷ ಖರ್ಚಾಗಿತ್ತು. ಇಲ್ಲಿಯವರೆಗೂ ಯಾವುದೇ ಆದಾಯವಿಲ್ಲದ ಕಾರಣ, ಕೂಲಿ ಮಾಡುತ್ತಿದ್ದೆವು. ಮಗಳಿಗೆ ಕಷ್ಟಪಟ್ಟು ಮದುವೆ ಮಾಡಿದ್ದೆವು. ಇಬ್ಬರು ಗಂಡು ಮಕ್ಕಳು ಕೂಲಿ ಮಾಡುತ್ತಿದ್ದಾರೆ’ ಎಂದುವೀರಲಿಂಗೇಗೌಡ ಅಳಲು ತೋಡಿಕೊಂಡರು.

‘ಫಸಲು ಬಂದರೆ ನೆಮ್ಮದಿ ಕಾಣಬಹುದು ಎಂದು ಕನಸು ಕಂಡಿದ್ದೆವು. ಕತ್ತಿ ಏಟಿಗೆ 150 ಮರಗಳು ಸಂಪೂರ್ಣ ಕೆಳಗೆ ಬಿದ್ದಿದ್ದರೆ, ಉಳಿದ ಮರಗಳಿಗೂ ತೀವ್ರವಾಗಿ ಏಟುಬಿದ್ದಿದ್ದು, ಚೇತರಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

‘ಕಳೆದ ತಿಂಗಳು ಮಳೆ ಹೊಡೆತಕ್ಕೆ ವಾಸದ ಮನೆ ಬಿದ್ದು ಹೋಯಿತು. ಗಾಯದ ಮೇಲೆ ಬರೆ ಎಳೆದಂತೆ ಮರಗಳನ್ನು ಕಡಿದಿದ್ದಾರೆ’ ಎಂದು ಕಮಲಮ್ಮ ಕಣ್ಣೀರಿಟ್ಟರು.

ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಯು.ಎಂ.ಮೋಹನ್ ಕುಮಾರ್, ‘ಘಟನೆ ಕುರಿತು ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗುವುದು. ಮರ ಕಡಿದವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸೂಚಿಸಲಾಗುವುದು’ ಎಂದರು.

‘ಅಡಿಕೆ ಮರ ತುಂಡು ಮಾಡಿರುವುದಕ್ಕೆ ಪರಿಹಾರ ದೊರಕುವುದಿಲ್ಲ. ಹೊಸದಾಗಿ ತೋಟ ಬೆಳೆಸಲು ನರೇಗಾ ಯೋಜನೆ ಅಡಿಯಲ್ಲಿ ಸಹಾಯಧನ ಪಡೆಯಲು ಅವಕಾಶವಿದೆ’ ಎಂದು ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಯತೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT