ಶನಿವಾರ, ಡಿಸೆಂಬರ್ 14, 2019
22 °C
ಹಾಸನದಲ್ಲಿ ಕಾರ್ಯಕ್ರಮ: ಸಮ್ಮೇಳನಾಧ್ಯಕ್ಷೆಯಾಗಿ ಕೀರ್ತನಾ ನಾಯಕ್ ಆಯ್ಕೆ

29ರಿಂದ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನ. 29, 30 ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಅಖಿಲ ಭಾರತ ಪ್ರಥಮ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರನ್ನಾಗಿ ತುಮಕೂರಿನ ಕೀರ್ತನಾ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ತಿಳಿಸಿದರು.

ನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಕ್ಕಳೇ ಸಮ್ಮೇಳನದ ಕೇಂದ್ರ ಬಿಂದುಗಳಾಗಿರುವುದರಿಂದ ಸರ್ವಾಧ್ಯಕ್ಷತೆ, ಸಹ ಅಧ್ಯಕ್ಷತೆ ಹಾಗೂ ವಿವಿಧ ಗೋಷ್ಠಿಗಳಿಗೆ ಮಕ್ಕಳೇ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ, ಹೊರ ರಾಜ್ಯಗಳಿಂದ ಪಾಲ್ಗೊಂಡಿದ್ದ ಮಕ್ಕಳಿಗೆ ಸ್ಥಳದಲ್ಲೇ ನೀಡಿದ ವಿಷಯಕ್ಕೆ ಪ್ರಬಂಧ ರಚನೆ, ಆಶುಭಾಷಣ ಸ್ವರಚಿತ ಕವನ ವಾಚನ, ಉಕ್ತಲೇಖನ ಸ್ಪರ್ಧೆಗಳನ್ನು ಏರ್ಪಡಿಸಿ ಉತ್ತಮ ಜ್ಞಾನ ಉಳ್ಳವರನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಸಹಾಧ್ಯಕ್ಷರನ್ನಾಗಿ ಮಂಡ್ಯದ ರೇವಂತ್ ರಾಜೀವ್, ದಕ್ಷಿಣ ಕನ್ನಡದ ಪ್ರದ್ಯುಮ್ನ ಮೂರ್ತಿ, ನವದೆಹಲಿಯ ಅಭಿಷೇಕ್ ಉಭಾಳೆ ಅವರನ್ನು ಆಯ್ಕೆ ಮಾಡಲಾಗಿದೆ.

ಕವಿಗೋಷ್ಠಿಯ ಅಧ್ಯಕ್ಷರನ್ನಾಗಿ ಕೊಪ್ಪದ ಬಿ. ಅನೀಶ್, ಮಹಾರಾಷ್ಟ್ರದ ನಿಖಿತಾ ಶಿವಾನಂದ ಕೋನಾಪುರೆ, ರಾಯಚೂರಿನ ಶಿವಶಂಕರ ಸ್ವಾಮಿ, ಕಾಸರಗೋಡುವಿನ ಸೃಷ್ಟಿ ಕೆ. ಶೆಟ್ಟಿ, ರಾಮನಗರದ ಆನಂದ್, ಬೆಂಗಳೂರಿನ ಸೂರ್ಯ ಸಾಧಿ, ಬಾಗಲಕೋಟೆಯ ಭೂಮಿಕಾ ಮಗದುಮ್, ಚಿಕ್ಕಮಗಳೂರಿನ ವೈಷ್ಣವಿ ಎನ್. ರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷೆ ಕೀರ್ತನಾ ನಾಯಕ್ ಮಾತನಾಡಿ, ‘ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ನನ್ನನ್ನು ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಖುಷಿ ತಂದಿದೆ. ನೀಡಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವುದಾಗಿ’ ಹೇಳಿದರು.

ಕೊರಟಗೆರೆಯ ಆಳ್ವಾಸ್ ಶಾಲೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನದಲ್ಲಿ ಶಿಕ್ಷಣ ಪಡೆಯುತ್ತಿದ್ದೇನೆ. ತಂದೆ ನರಸಿಂಹ, ತಾಯಿ ಪದ್ಮಾವತಿ ತುಮಕೂರಿನಲ್ಲಿ ನೆಲೆಸಿದ್ದು ಕೃಷಿ ಮಾಡುತ್ತಿರುವುದಾಗಿ ತಿಳಿಸಿದರು.

ಪೋಷಕರು ಸಾಹಿತ್ಯದಲ್ಲಿ ಆಸಕ್ತಿ ಉಳ್ಳವರಾಗಿದ್ದು, ಇವರ ಹಾಗೂ ಶಾಲೆಯಲ್ಲಿ ಶಿಕ್ಷಕರ ಪ್ರೋತ್ಸಾಹದಿಂದ ಸಾಹಿತ್ಯಕ್ಷೇತ್ರದಲ್ಲಿ ಒಲವು ಮೂಡಲು ಸಾಧ್ಯವಾಯಿತು. ‘ಕಾಲ ಬದಲಾಗುತ್ತಿದೆ’ ಹಾಗೂ ‘ಆ ಕ್ಷಣಗಳ ಕೊಯ್ಲು’ ಎಂಬ ಎರಡು ಕವನ ಸಂಕಲನ ರಚಿಸಿರುವುದಾಗಿ ಹೇಳಿದರು.

ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸಿ.ಎನ್. ಅಶೋಕ್ ಮಾತನಾಡಿ, ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯಕ್ರಮವನ್ನು ಐತಿಹಾಸಿಕವನ್ನಾಗಿ ಮಾಡಲು ಪಣ ತೊಟ್ಟಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಲಿ ಎಂಬ ನಿಟ್ಟಿನಲ್ಲಿ ರಾಜ್ಯ–ಹೊರ ರಾಜ್ಯದಿಂದ ಬರುವವರಿಗೆ ಪ್ರವಾಸ ಭತ್ಯೆ, ಊಟ–ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು. ‌

ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಕಾಶ್, ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್, ಸಿದ್ದೇಶ್, ನಾಗೇಶ್, ಮಹದೇವ್ ಇದ್ದರು.

ಪ್ರತಿಕ್ರಿಯಿಸಿ (+)