ಬುಧವಾರ, ನವೆಂಬರ್ 13, 2019
22 °C
ಅರಸೀಕೆರೆ ಅದ್ಧೂರಿ ಗಣೇಶ ವಿಸರ್ಜನಾ ಮಹೋತ್ಸವ

ವೈಭವದ ಮೆರವಣಿಗೆ, ಕುಣಿದು ಕುಪ್ಪಳಿಸಿದ ಜನತೆ

Published:
Updated:
Prajavani

ಅರಸೀಕೆರೆ: ಅರಸೀಕೆರೆ ಗಣೇಶ ಮಹೋತ್ಸವಕ್ಕೆ 78 ವರ್ಷದ ಇತಿಹಾಸವಿದೆ. ಈ ವರ್ಷದ ಗಣೇಶೋತ್ಸವಕ್ಕೆ ಶನಿವಾರ ತೆರೆ ಬಿದ್ದಿತು.

ಗಣೇಶ ವಿಸರ್ಜನಾ ಅದ್ಧೂರಿ ಮಹೋತ್ಸವ ಹಿನ್ನೆಲೆ ಶುಕ್ರವಾರ ರಾತ್ರಿಯಿಂದ ಆರಂಭವಾದ ಮೆರವಣಿಗೆ ಶನಿವಾರವೂ ನಗರದ ಪ್ರಮುಖ ಬೀದಿಗಳಲ್ಲಿ ವೈಭವದಿಂದ ನಡೆಯಿತು.

ವಿವಿಧ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಾದ್ಯಗೋಷ್ಠಿಗಳೊಂದಿಗೆ ಸಾಗಿದ ಗಣಪತಿ ಉತ್ಸವ ನಗರದ ಆರ್‌ಆರ್ ರಸ್ತೆ, ಸಂತೆಪೇಟೆ, ಶಿವಾಲಯ, ಪೇಟೆಬೀದಿ, ಹಾಸನ ರಸ್ತೆ, ಮಾರ್ಕೆಟ್ ಚೌಕ, ಪಿಪಿ ಸರ್ಕಲ್, ರೈಲ್ವೆ ನಿಲ್ದಾಣ ರಸ್ತೆ, ಆರ್‌ಎಂಎಸ್ ರಸ್ತೆ, ಮೊದಲಿಯಾರ್ ಬೀದಿ, ಎಪಿಎಂಸಿ ಮಾರುಕಟ್ಟೆ, ಗ್ರಂಥಾಲಯ ರಸ್ತೆ, ಯಜಮಾನ ರಂಗೇಗೌಡರ ಬೀದಿ, ಶ್ಯಾನುಭೋಗರ ಬೀದಿ, ಕರಿಯಮ್ಮ ದೇವಾಲಯದ ರಸ್ತೆ, ಗರುಡನಗಿರಿ ರಸ್ತೆ, ಸಂತೆಮೈದಾನ, ಸಾಯಿನಾಥ ರಸ್ತೆ, ಹರಿಜನ ಕಾಲೊನಿ, ಸುಭಾಷ್ ನಗರ, ನಿರಂಜನ ಸರ್ಕಲ್, ಲಕ್ಷ್ಮಿಪುರ, ಮಿನಿವಿಧಾನ ಸೌಧ, ಬಿ.ಎಚ್. ರಸ್ತೆಯ ಮೂಲಕ ಸಾಗಿ ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ನಗರದ ಕಂತೇನಹಳ್ಳಿ ಕೆರೆಯಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಸರ್ಜನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ತಾಲ್ಲೂಕಿನ ವಡೇರಹಳ್ಳಿ ಗ್ರಾಮದ ಕಾಳಿಕಾಂಬಾ ಫೈರ್ ವರ್ಕ್ಸ್ ವತಿಯಿಂದ ಚಿತ್ತಾಕರ್ಷಕ ಮದ್ದು ಪ್ರದರ್ಶನ ನಡೆಯಿತು.

ನಗರದಲ್ಲಿ ಸಾಗಿ ಬಂದ ಗಣೇಶ ಉತ್ಸವಕ್ಕೆ ನಗರದ ಎಲ್ಲ ಬೀದಿಗಳಲ್ಲಿ ಹಾಗೂ ಸರ್ಕಲ್ ಗಳ ಬಳಿ ಅಲ್ಲಲ್ಲಿ ವಿವಿಧ ಸಂಘಟನೆಗಳ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಜತೆಗೆ ಗಣೇಶ ಮೂರ್ತಿಗೆ ವಿಶೇಷ ಪೂಜೆ ಹಾಗೂ ಭಕ್ತಿ ಸಮರ್ಪಣೆ ಮಾಡಿ ಭಕ್ತರು ಪುನೀತರಾಗಿ ಗಣೇಶ ಉತ್ಸವವನ್ನು ಬೀಳ್ಕೊಟ್ಟರು.

ಪ್ರತಿಕ್ರಿಯಿಸಿ (+)