ಗುರುವಾರ , ಏಪ್ರಿಲ್ 22, 2021
29 °C
ಬೀದಿಬದಿ ವ್ಯಾಪಾರ: ಪ್ರವಾಸಿಗರನ್ನು ನಂಬಿ ದುಡಿಯುವ ಮಂಜುಳಾ

ಸ್ವಾವಲಂಬಿ ಬದುಕು ಕಟ್ಟಿಕೊಂಡ ಪದವೀಧರೆ

ಎಚ್.ಎಸ್.ಅನಿಲ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಹಳೇಬೀಡು: ಹೊಯ್ಸಳೇಶ್ವರ ದೇವಾಲಯದ ಬಳಿ ತಿಂಡಿ ತಿನಿಸು, ಹಣ್ಣು ವ್ಯಾಪಾರ ನಡೆಸುತ್ತಿರುವ ಪದವೀಧರೆ ಮಂಜುಳಾ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ.

ದೂರದ ಊರುಗಳಿಂದ ಬರುವ ಪ್ರವಾಸಿಗರನ್ನು ನಂಭಿಕೊಂಡು ವ್ಯವಹಾರ ನಡೆಸುತ್ತಿದ್ದಾರೆ. ಪ್ರತಿದಿನ ನಿರ್ದಿಷ್ಟವಾದ ವ್ಯಾಪಾರ ನಡೆಯ ದಿದ್ದರೂ ಎದೆಗುಂದದೆ ಕಾಲಮಾನ ಹಾಗೂ ಸಂದರ್ಭಕ್ಕೆ ತಕ್ಕಂತೆ ವ್ಯವಹಾರ ಮಾಡುವ ಜಾಣ್ಮೆಯನ್ನು ಅವರು ಕಲಿತಿದ್ದಾರೆ. ಪದವೀಧರೆಯಾದರೂ ಕೀಳರಿಮೆ ಇವರಲಿಲ್ಲ. 25 ವರ್ಷದಿಂದ ಬೀದಿಬದಿ ವ್ಯಾಪಾರ ಮಾಡಿಕೊಂಡು ನೆಮ್ಮದಿಯಿಂದ ಬದುಕುತ್ತಿರುವ ಇವರು, ಘನತೆ ಹೆಚ್ಚಿಸುವ ಹುದ್ದೆ ಬೇಕು ಎಂದು ಪರದಾಡುವ ವಿದ್ಯಾವಂತರಿಗೆ ಸ್ವಂತ ಉದ್ಯೋಗ ಮೇಲು ಎನ್ನುವ ಮಂಜುಳಾ ಮಾದರಿಯಾಗಿದ್ದಾರೆ.

ಬೇಲ್‌ಪುರಿ, ನಿಪ್ಪಟ್ಟು ತಯಾರಿಸಿ ಮಾರಾಟ ಮಾಡುವ ಅವರು ಸೌತೆಕಾಯಿ, ಕಲ್ಲಂಗಡಿ, ಹಲಸಿನಹಣ್ಣು, ಮಾವಿನಕಾಯಿ ಹೀಗೆ ಕಾಲಮಾನಕ್ಕೆ ಸಿಗುವ ಹಣ್ಣು– ಕಾಯಿಯನ್ನು ಮಾರಾಟ ಮಾಡುತ್ತಾರೆ. ದೂರದಿಂದ ಬರುವ ಪ್ರವಾಸಿಗರೊಂದಿಗೆ ವ್ಯವಹಾರ ಮಾಡಲು ವಿವಿಧ ಭಾಷಾ ಜ್ಞಾನವನ್ನು ಸಂಪಾದಿಸಿದ್ದಾರೆ.

ಬಿ.ಎ ಪದವಿ ಪೂರ್ಣಗೊಳಿಸಿದ ನಂತರ ಮನೆಯಲ್ಲಿ ವಿವಾಹ ಮಾಡಿದರು. ತಂದೆ ಕುಲುಮೆ ನಡೆಸಿಕೊಂಡು ಹೊಟ್ಟೆ, ಬಟ್ಟೆಗೆ ತೊಂದರೆ ಇಲ್ಲದಂತೆ ನೋಡಿಕೊಂಡಿದ್ದರು. ಹೀಗಾಗಿ ವ್ಯವಹಾರ ಜ್ಞಾನ ಅಷ್ಟಾಗಿ ತಿಳಿದಿರಲಿಲ್ಲ. ಪತಿ ಅಶೋಕ ತಳ್ಳುಗಾಡಿಯಲ್ಲಿ  ಕಾಲಮಾನಕ್ಕೆ ತಕ್ಕಂತೆ ಬರುವ ಹಣ್ಣುಗಳು ಹಾಗೂ ಬೇಲ್‌ಪುರಿ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರದಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದೆನು. ವ್ಯವಹಾರ ನಡೆಸಲು ಪ್ರೇರಣೆ ಧೈರ್ಯ ತುಂಬಿದರು ಪತಿ ಎಂದು ತಮ್ಮ ಕತೆ ಆರಂಭಿಸಿದರು.

‘ಯಾವುದೇ ತುರ್ತು ಸಂದರ್ಭ ಬಂದರೂ ಸ್ವಂತವಾಗಿ ದುಡಿದು ಬದುಕಬೇಕು. ಬೇರೆಯವರನ್ನು ಅವಲಂಬಿಸಬಾರದು ಎಂಬುದನ್ನು ಕಲಿಸಿದರು. ಜೀವನದಲ್ಲಿ ಒಂದರ ಮೇಲೊಂದು ಕಷ್ಟ ಬಂತು. ಪತಿ ಅಪಘಾತದಿಂದ ಕಾಲು ಮುರಿದು ಕೊಂಡು ಆಸ್ಪತ್ರೆ ಸೇರಿದರು. ಮನೆಯಲ್ಲಿಯೇ ಕೂತರೆ ಕಾಲಿನ ಶಸ್ತ್ರಚಿಕಿತ್ಸೆಗೆ ಎಲ್ಲಿಂದ ದುಡ್ಡು ಹೊಂದಿಸುವುದು. ಜೀವನ ಮಾಡುವುದು ಹೇಗೆ ಎಂದು ಚಿಂತೆ ಮಾಡುತ್ತ ಕೂರದೆ ಪತಿ ಹೇಳಿಕೊಟ್ಟ ವ್ಯವಹಾರ ಮುಂದುವರೆಸಿದೆ. ಲಾಭ ನಷ್ಟಗಳ ಬಗ್ಗೆ ಚಿಂತೆ ಮಾಡಲಿಲ್ಲ. ವ್ಯಾಪಾರ ನಡೆದ ದಿನ ಹಣ ಕೂಡಿಟ್ಟು ನಾಲ್ಕು ಮಕ್ಕಳನ್ನು ಸಾಕಿದೆ. ದುರಾದೃಷ್ಟಕ್ಕೆ ಒಬ್ಬ ಮಗಳು ಅಕಾಲ ಮರಣಕ್ಕೆ ತುತ್ತಾದಳು. ಉಳಿದ ಮೂರು ಮಕ್ಕಳಲ್ಲಿ ಒಬ್ಬ ಮಗಳು ಡಿ.ಇಡಿ, ಮತ್ತೊಬ್ಬಳು ಎಂ.ಎ, ಬಿ.ಇಡಿ, ಮುಗಿಸಿದ್ದಾಳೆ, ಇಬ್ಬರಿಗೂ ವಿವಾಹವಾಗಿದೆ. ಮಗ ಈಗಷ್ಟೇ ಎಂಜಿನಿಯರಿಂಗ್ ಪದವಿ ಮುಗಿಸಿದ್ದು ಉದ್ಯೋಗದ ಹುಡುಕಾಟದಲ್ಲಿದ್ದಾನೆ. ವಿಶ್ರಾಂತಿಯಲ್ಲಿರುವ ಪತಿಯ ಆಶೀರ್ವಾದದಿಂದ ದುಡಿಯುತ್ತಿದ್ದೇನೆ. ಅವರ ಆರೋಗ್ಯ ಸುಧಾರಿಸುತ್ತಿದೆ. ಮುಂದಿನ ದಿನಗಳಲ್ಲಿ ವ್ಯವಹಾರಕ್ಕೆ ಕೈಜೋಡಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದು ಮಂಜುಳಾ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ತಮ್ಮ ಜೀವನದ ಕಷ್ಟ ಸುಖವನ್ನು ಬಿಚ್ಚಿಟ್ಟರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು