ಬುಧವಾರ, ನವೆಂಬರ್ 20, 2019
22 °C
ಬಿಜೆಪಿ ಹಿರಿಯ ಮುಖಂಡ ಎ.ಮಂಜು ಆರೋಪ

ಎ.ಟಿ ರಾಮಸ್ವಾಮಿ ಸಹೋದರರಿಂದ ಭೂ ಕಬಳಿಕೆ

Published:
Updated:
Prajavani

ಹಾಸನ: ‘ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಅವರ ಸಹೋದರರ ಮಕ್ಕಳು ಬಿಸಿಲಹಳ್ಳಿ ಗ್ರಾಮದಲ್ಲಿ ನೂರಾರು ಎಕರೆ ಭೂಮಿ ಕಬಳಿಸಿದ್ದಾರೆ’ ಎಂದು ಬಿಜೆಪಿ ಹಿರಿಯ ಮುಖಂಡ ಎ.ಮಂಜು ಆರೋಪಿಸಿದರು.

‘ಅರಸೀಕಟ್ಟೆಯಮ್ಮ ದೇವಾಲಯದ ಅಭಿವೃದ್ಧಿಗೆ ಭೂಮಿ ಒತ್ತುವರಿ ತೆರವುಗೊಳಿಸಲು ಹೋಗುವ ರಾಮಸ್ವಾಮಿ, ಅವರ ಸಹೋದರರ ಮಕ್ಕಳ ಭೂ ಒತ್ತುವರಿ ಬಗ್ಗೆ ಯಾಕೆ ಮಾತನಾಡುವುದಿಲ್ಲ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಶಾಸಕರ ಸಹೋದರರಾದ ವೇದಮೂರ್ತಿ, ಶ್ರೀನಾಥ್‌ ಸೇರಿದಂತೆ ಇತರರು ಬಿಸಲಹಳ್ಳಿಯಲ್ಲಿ ಸರ್ವೆ 91, 92, 93, 78 ರಲ್ಲಿ ಅಂದಾಜು 70–80 ಎಕರೆ ಒತ್ತುವರಿ ಮಾಡಿದ್ದಾರೆ. ಜಮೀನು ಕಳೆದುಕೊಂಡವನ ಒಕ್ಕಲೆಬ್ಬಿಸುವುದರಲ್ಲಿ ಅರ್ಥವಿಲ್ಲ. ತಮ್ಮ ಪಕ್ಕದ ಜಮೀನಿನ ವಾಸೀಂ ಎಂಬವರಿಗೆ ಖರಾಬ್ ಜಾಗವಿದ್ದರೂ ರಸ್ತೆ ನೀಡುತ್ತಿಲ್ಲ. ರಾಮಸ್ವಾಮಿ ಅವರು ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ತಮ್ಮ ಮನೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿಸಿಕೊಂಡಿದ್ದಾರೆ. ವಾಸೀಂ ಎಂಬವರು ಜಮೀನಿಗೆ ಹೋಗದಂತೆ ಸುತ್ತಲೂ ಬೇಲಿ ಹಾಕಿಕೊಂಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ರಾಮಸ್ವಾಮಿ ಅವರು ಮಾತನಾಡುವ ರೀತಿಯೇ ನಡೆದುಕೊಳ್ಳಬೇಕು, ಸತ್ಯ ಹರಿಶ್ಚಂದ್ರ ಅಂತ ಹೇಳಿಕೊಳ್ಳುವವರು ಹಾಗೆಯೇ ನಡೆದುಕೊಳ್ಳಬೇಕು. ಬೆಂಗಳೂರಿನ ಭೂ ಒತ್ತುವರಿ ತೆರವು ವಿರುದ್ಧ ಹೋರಾಟ ಮಾಡುವವರು ತಮ್ಮ ಕುಟುಂಬದ ಭೂ ಒತ್ತುವರಿ ಬಗ್ಗೆ ಸುಮ್ಮನಿರುವುದು ಏಕೆ’ ಎಂದು ಪ್ರಶ್ನಿಸಿದರು.

‘ಅರಸೀಕಟ್ಟೆ ದೇವಾಲಯದ ಬಳಿ ರೈತನೊಬ್ಬ 45 ವರ್ಷಗಳಿಂದ 1.20 ಎಕರೆ ಉಳುಮೆ ಮಾಡುತ್ತಿದ್ದಾರೆ. ತೆಂಗಿನ ಮರಗಳು ಇವೆ. ಈ ಜಾಗವನ್ನು ಹೇಮಾವತಿ ಜಲಾಶಯ ಯೋಜನೆಗಾಗಿ ಮೀಸಲಿಡಲಾಗಿದೆ. ನಾಲೆಗಾಗಿ ಭೂಮಿ ಕಳೆದುಕೊಂಡಿರುವ ಇವರಿಗೆ ಎಚ್ಆರ್‌ಪಿ ಸರ್ಟಿಫಿಕೇಟ್‌ ಸಹ ನೀಡಲಾಗಿದೆ. ಕಾನೂನು ಪ್ರಕಾರ ಭೂಮಿ ಕೊಡಿಸಬೇಕು. ಆದರೆ, ತಹಶೀಲ್ದಾರ್‌ ಮೂಲಕ ಅವರನ್ನು ಒಕ್ಕಲೆಬ್ಬಿಸುವುದು ಯತ್ನಿಸಿರುವುದು ಸರಿಯಲ್ಲ. ನಾನು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಮಾಡುವುದೂ ಇಲ್ಲ. ಈ ಚರ್ಚೆಗೆ ಆಹ್ವಾನಿಸಿದ್ದರೂ ಶಾಸಕರು ಬರಲಿಲ್ಲ’ ಎಂದು ವ್ಯಂಗ್ಯವಾಡಿದರು.

ಪ್ರತಿಕ್ರಿಯಿಸಿ (+)