ಆನೆ ಹಾವಳಿ ಪ್ರದೇಶ: 2 ವಸತಿ ಶಾಲೆ

7
ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಎಚ್.ಡಿ.ರೇವಣ್ಣ

ಆನೆ ಹಾವಳಿ ಪ್ರದೇಶ: 2 ವಸತಿ ಶಾಲೆ

Published:
Updated:
Prajavani

ಹಾಸನ: ಆಲೂರು ಮತ್ತು ಸಕಲೇಶಪುರ ತಾಲ್ಲೂಕುಗಳ ಆನೆ ಹಾವಳಿ ಪೀಡಿತ ಪ್ರದೇಶಗಳ ಬಾಧಿತ ಮಕ್ಕಳ ಕಲಿಕೆಗೆ ಎರಡು ಹೊಸ ಸುವ್ಯವಸ್ಥಿತ ವಸತಿ ಶಾಲೆ ಪ್ರಾರಂಭಿಸಲು ಪ್ರಸ್ತಾವ ಸಲ್ಲಿಸುವಂತೆ ಸಚಿವ ಎಚ್‌.ಡಿ.ರೇವಣ್ಣ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಲಾಖೆಗಳ ಪ್ರಗತಿ ಹಾಗೂ ಯೋಜನಾ ಅನುಷ್ಠಾನ ಕುರಿತು ಪರಿಶೀಲನಾ ಸಭೆ ನಡೆಸಿದರು.

ಆನೆ ಹಾವಳಿಯಿಂದ ವಿದ್ಯಾರ್ಥಿಗಳಿಗೆ ಅಗುತ್ತಿರುವ ಸಮಸ್ಯೆ ನಿವಾರಿಸಿ ಉತ್ತಮ ಗುಣ ಮಟ್ಟದ ಶಿಕ್ಷಣ ಒದಗಿಸಲು ಬಾಲಕರ ಹಾಗೂ ಬಾಲಕಿಯರ ಎರಡೂ ಪ್ರತ್ಯೇಕ ಶಾಲೆಗಳನ್ನು ತೆರೆಯಲು ಚಿಂತಿಸಲಾಗಿದೆ ಎಂದರು.

ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ 1ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ ಮತ್ತು ವಸತಿ ಊಟೋಪಚಾರ ಒದಗಿಸುವ ಶಾಲೆಗಳ ಪ್ರಾರಂಭಕ್ಕೆ ವಿವರವಾದ ವರದಿ ಸಲ್ಲಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬುಗೆ ನಿರ್ದೇಶನ ನೀಡಿದರು.

ಎತ್ತಿನ ಹೊಳೆ ಯೋಜನೆ, ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಆಗುತ್ತಿರುವುದರಿಂದ ಎರಡು ಉಪವಿಭಾಗಗಳಿಗೆ ಇಬ್ಬರು ಪ್ರತ್ಯೇಕ ಎ.ಡಿ.ಎಲ್.ಆರ್ ಗಳು ಹಾಗೂ ಸರ್ವೆ ಸೂಪರ್ ವೈಸರ್‌ಗಳನ್ನು ನೇಮಿಸುವ ಅಗತ್ಯವಿದೆ. ಅದಕ್ಕೆ ಪ್ರಸ್ತಾವ ಸಿದ್ದಪಡಿಸಿ ಸಲ್ಲಿಸುವಂತೆ ಸಚಿವರು ವಿಶೇಷ ಭೂಸ್ವಾಧೀನ ಅಧಿಕಾರಿಗಳಾದ ಗಿರೀಶ್ ನಂದನ್ ಮತ್ತು ಶ್ರೀನಿವಾಸಗೌಡ ಗೆ ಸೂಚಿಸಿದರು.

ಹೇಮಾವತಿ ಯೋಜನಾ ನಿರಾಶ್ರಿತರಿಗೆ ಸೂಕ್ತ ಪುನರ್ ವಸತಿ ಕಲ್ಪಿಸಿ ಜೊತೆಗೆ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ನಿಯಮಾನುಸಾರ ಹಕ್ಕು ಪತ್ರ ವಿತರಿಸಬೇಕು. ಇದರಲ್ಲಿ ಯಾವುದೇ ತಾರತಮ್ಮ್ಯ ಇಲ್ಲ ಎಂದು ಸಚಿವರು ಹೇಳಿದರು.

ಉದ್ದೇಶಿತ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಮಾತ್ರ ಮರಗಳನ್ನು ತೆರವು ಮಾಡಿ ಉಳಿದ ಪ್ರದೇಶದಲ್ಲಿ ಇನ್ನಷ್ಟು ಗಿಡ, ಮರಗಳನ್ನು ನೆಟ್ಟು ಉತ್ತಮ ಪರಿಸರ ನಿರ್ಮಿಸಬೇಕು. ಅದೇ ರೀತಿ ರಸ್ತೆ ವಿಸ್ತರಣೆ ಕಾಮಗಾರಿಗಳಿಗೆ ಅಗತ್ಯವಿರುವೆಡೆ ಮರಗಳನ್ನು ತೆರವುಗೊಳಿಸುವ ಕಾರ್ಯ ಚುರುಕುಗೊಳಿಸಿ ಎಂದು ಅವರು ತಿಳಿಸಿದರು.

ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಮರಳು ಲಭ್ಯವಾಗುತ್ತಿಲ್ಲ. ಶೀಘ್ರವೇ ಸಮಸ್ಯೆ ಬಗೆ ಹರಿಯಬೇಕು. ನಿಯಮಾನುಸಾರ ದರ ನಿಗದಿ ಮಾಡಿ ವಿತರಣೆ ಪ್ರಾರಂಭಿಸಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಹೆಚ್ಚುವರಿ ಪಡಿತರ ಕಾರ್ಡ್ ಹೊಂದಿರುವ ನ್ಯಾಯಬೆಲೆ ಅಂಗಡಿಗಳನ್ನು ವಿಂಗಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಮಲೆನಾಡು ಪ್ರದೇಶದಲ್ಲಿ ಕಡಿಮೆ ಕಾರ್ಡ್ ದಾರರಿದ್ದರೂ ಸಮೀಪದಲ್ಲಿ ಪಡಿತರ ಧಾನ್ಯಗಳು ದೊರೆಯುವಂತೆ ಸೌಲಭ್ಯ ಕಲ್ಪಿಸಬೇಕು. ಕಾರ್ಡ್ ವಿತರಣೆಯಲ್ಲಾಗುತ್ತಿರುವ ವಿಳಂಬ ಮತ್ತು ಲೋಪಗಳನ್ನು ಸರಿಪಡಿಸುವಂತೆ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಸವಿತಾಗೆ ರೇವಣ್ಣ ಸೂಚನೆ ನೀಡಿದರು.

ಶಾಸಕರಾದ ಎಚ್.ಕೆ ಕುಮಾರಸ್ವಾಮಿ, ಸಿ.ಎನ್. ಬಾಲಕೃಷ್ಣ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಮಂಜು, ಭೂದಾಖಲೆಗಳ ಉಪನಿರ್ದೇಶಕ ಕೃಷ್ಣಕುಮಾರ್ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !