ಭಾನುವಾರ, ಮೇ 9, 2021
25 °C
ಸಿ.ಎಂ. ಯಡಿಯೂರಪ್ಪಗೆ ಶಾಸಕ ಎಚ್‌.ಡಿ.ರೇವಣ್ಣ ಎಚ್ಚರಿಕೆ

ಅಭಿವೃದ್ಧಿ ವಿಷಯದಲ್ಲಿ ಹಾಸನ ಜನರನ್ನು ಎದುರು ಹಾಕಿಕೊಳ್ಳಬೇಡಿ:ರೇವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಜಿಲ್ಲೆಯಲ್ಲಿ ನೀರಾವರಿ ಮತ್ತು ಇತರ ಕಾಮಗಾರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಗಿತವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಹಾಸನ ಜಿಲ್ಲೆಯ ಜನರನ್ನು ಎದುರು ಹಾಕಿಕೊಳ್ಳಬೇಡಿ’ ಎಂದು ಶಾಸಕ ಎಚ್‌.ಡಿ. ರೇವಣ್ಣ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಗೆ ಎಚ್ಚರಿಕೆ ನೀಡಿದರು.

‘ಕಾವೇರಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಒಟ್ಟು ₹7650 ಕೋಟಿ ವೆಚ್ಚದ ಕಾಮಗಾರಿಗಳನ್ನು ತಡೆ ಹಿಡಿಯಲಾಗಿದೆ. ಮೈಸೂರು ದಕ್ಷಿಣ ವಲಯ (ಮಂಡ್ಯ, ಮೈಸೂರು, ಮಡಿಕೇರಿ) ದಲ್ಲಿ ₹ 5 ಸಾವಿರ ಕೋಟಿ, ಹೇಮಾವತಿ ವಲಯದಲ್ಲಿ ₹ 1650 ಕೋಟಿ, ತುಮಕೂರು ವಲಯದಲ್ಲಿ ₹ 500 ಕೋಟಿ ವೆಚ್ಚದ ಕಾಮಗಾರಿಗಳು ಸ್ಥಗಿತಗೊಂಡಿವೆ. ಅಲ್ಲದೇ ಪುರಸಭೆ ಅನುದಾನವನ್ನೂ ತಡೆ ಹಿಡಿದಿದ್ದಾರೆ. ಈ ಬಗ್ಗೆ ನಿಯಮ 60 ರ ಅಡಿಯಲ್ಲಿ ಸಿ.ಎಂ ಅವರ ಗಮನ ಸೆಳೆಯಲಾಗಿತ್ತು. ‌ಯಾವುದೇ ಕಾಮಗಾರಿ ನಿಲ್ಲಿಸಲ್ಲ ಎಂದು ಸಿ.ಎಂ ಸದನದಲ್ಲೇ ಭರವಸೆ ನೀಡಿದ್ದರು. ಅವರು ನೀಡಿದ ಭರವಸೆ ಹುಸಿಯಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಹಣಕಾಸು ಇಲಾಖೆ ಅನುಮತಿ ನೀಡಿದ್ದ ಕಾಮಗಾರಿಗಳನ್ನೂ ನಿಲ್ಲಿಸಿದ್ದಾರೆ. ಮತ್ತೆ ಅವರ ಗಮನಕ್ಕೆ ತರುತ್ತೇವೆ. ಅವರೇ ಸಭೆ ಕರೆದು ಕಾಮಗಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಡಲಿ. ಇಲ್ಲವಾದರೆ ಮುಂದೆ ಏನು ಮಾಡಬೇಕು ಎಂಬುದನ್ನು ತೀರ್ಮಾನಿಸುತ್ತೇವೆ’ ಎಂದರು.

‘ಜನವರಿ, ಡಿಸೆಂಬರ್‌ ವೇಳೆಗೆ ನಾಲೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತದೆ. ಅಷ್ಟರಲ್ಲಿ ಎಲ್ಲ ಕೆಲಸಗಳು ಪೂರ್ಣಗೊಳ್ಳಬೇಕು. ಬೇಲೂರಿನಲ್ಲಿ ₹ 15 ಕೋಟಿ, ಸಕಲೇಶಪುರದಲ್ಲಿ ₹ 30 ಕೋಟಿ ಹಾಗೂ ಹಾಸನದ ಹೊಸ ಬಸ್‌ ನಿಲ್ದಾಣ ಸಮೀಪದ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಅನುಮೋದನೆ ನೀಡಿದ್ದ ₹ 144 ಕೋಟಿ ವೆಚ್ಚದ ಕಾಮಗಾರಿಗಳಿಗೆ ತಡೆ ನೀಡಲಾಗಿದೆ. ಶೀಘ್ರ ಜಿಲ್ಲೆಯ ಪಕ್ಷದ ಆರು ಶಾಸಕರು ಮತ್ತು ಸಂಸದ ಪ್ರಜ್ವಲ್‌ ಅವರೊಂದಿಗೆ ಸಿ.ಎಂ ಅವರನ್ನು ಭೇಟಿ ಮಾಡಲಾಗುವುದು. ಮನವಿಗೆ ಪುರಸ್ಕರಿಸದಿದ್ದರೆ ಜಿಲ್ಲೆಯ ಜನರನ್ನು ಕ್ಷಮೆ ಕೋರುತ್ತೇನೆ. ನಮಗೆ ಅಧಿಕಾರ ಸಿಕ್ಕಾಗ ಅಭಿವೃದ್ಧಿ ಪಡಿಸಲಾಗುವುದು’ ಎಂದು ನುಡಿದರು.

‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೆಡಿಎಸ್‌ ಸಹವಾಸ ಸಾಕು ಎಂದಿದ್ದಾರೆ. ಸರ್ಕಾರ ರಚನೆ ವೇಳೆ ಅವರ ಬಳಿ ಹೋಗಿರಲಿಲ್ಲ. ರಾಹುಲ್‌ ಗಾಂಧಿ ಜೆಡಿಎಸ್‌ ‘ಬಿ’ ಟಿಂ ಎಂದು ಹೇಳಿಕೆ ನೀಡಿದ ಪರಿಣಾಮ 20 ಸೀಟುಗಳನ್ನು ಕಳೆದುಕೊಳ್ಳಬೇಕಾಯಿತು. ತುಮಕೂರಿನಲ್ಲಿ ದೇವೇಗೌಡರು ಹಾಗೂ ಮಂಡ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದು ಯಾರು’ ಎಂದು ಪ್ರಶ್ನಿಸಿದ ರೇವಣ್ಣ, ‘ಪಕ್ಷ ತೊರೆಯಲು ನಿರ್ಧರಿಸಿರುವವರನ್ನು ತಡೆಯುವುದಿಲ್ಲ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಚರ್ಚೆ ಮೂಲಕ ಬಗೆ ಹರಿಸಿಕೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ‌ಎತ್ತಿನ ಹೊಳೆ ಯೋಜನೆಯೂ ಸ್ಥಗಿತಗೊಂಡಿದೆ. ಕೂಡಲೇ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ‘ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಕೆರೆ, ಸೇತುವೆ, ರಸ್ತೆ ಹಾಳಾಗಿದೆ. ಲೋಕೋಪಯೋಗಿ, ಸಣ್ಣ ನೀರಾವರಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಎಲ್ಲಾ ಇಲಾಖೆ ಕಾಮಗಾರಿಗಳಿಗೂ ಹಣ ಬಿಡುಗಡೆ ಮಾಡಿ ಕೆಲಸ ಮಾಡಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಕೆ.ಎಸ್.ಲಿಂಗೇಶ್ , ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಎಚ್‌.ಸ್ವರೂಪ್‌, ಮುಖಂಡ ರಾಜೇಗೌಡ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು