ಶನಿವಾರ, ನವೆಂಬರ್ 23, 2019
17 °C
ಕುರುಬತ್ತೂರು ಪಿಡಿಒನಿಂದ ಗ್ರಾ.ಪಂ. ಅಧ್ಯಕ್ಷರ ಸಹಿ ನಕಲು

20 ಲಕ್ಷ ದುರುಪಯೋಗ: ಗ್ರಾಮಸ್ಥರ ಪ್ರತಿಭಟನೆ

Published:
Updated:
Prajavani

ಸಕಲೇಶಪುರ: ತಾಲ್ಲೂಕಿನ ಕುರುಬತ್ತೂರು ಗ್ರಾಮ ಪಂಚಾಯಿತಿ ಖಾತೆಯಿಂದ ಸುಮಾರು ₹ 20 ಲಕ್ಷಕ್ಕೂ ಹೆಚ್ಚು  ದುರುಪಯೋಗ ಆಗಿರುವ ಹಿನ್ನೆಲೆಯಲ್ಲಿ ಪಿಡಿಒ ಅವರನ್ನು ಅಮಾನತ್ತಿನಲ್ಲಿಟ್ಟು ತನಿಖೆ ನಡೆಯುವವರೆಗೂ ಸದಸ್ಯರು ಯಾವುದೇ ಸಭೆ ನಡೆಸಬಾರದು ಎಂದು ಆಗ್ರಹಿಸಿ ಗ್ರಾಮಸ್ಥರು ಶನಿವಾರ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ವಿಠಲ್‌ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಸಭೆ ನಡೆಯಬೇಕಿತ್ತು. ನೋಟಿಸ್‌ ಬೋರ್ಡ್‌ನಲ್ಲಿಯೂ ಸಹ ಸಭೆಯ ವಿವರ ಹಾಕಲಾಗಿತ್ತು. ಇದನ್ನು ತಿಳಿದ ಗ್ರಾಮಸ್ಥರು ದಿಢೀರ್‌ ಪ್ರತಿಭಟನೆ ನಡೆಸಿದರು.

ಘಟನೆ ವಿವರ: ಪಿಡಿಒ ಕೆ.ಇ. ಪರಮೇಶ್‌ ಅವರು ಗ್ರಾ.ಪಂ. ಬ್ಯಾಂಕ್‌ ಚೆಕ್‌ಗಳಿಗೆ ಹಿಂದಿನ ಅಧ್ಯಕ್ಷೆ ಶಾರದಾ ಸೋಮೇಗೌಡ ಹಾಗೂ ಹಾಲಿ ಅಧ್ಯಕ್ಷೆ ಲಕ್ಷ್ಮಿ ವಿಠಲ್ ಅವರ ಸಹಿಯನ್ನು ನಕಲಿ ಮಾಡಿ ಲಕ್ಷಾಂತರ ರೂಪಾಯಿ ಡ್ರಾ ಮಾಡಿದ್ದಾರೆ ಎಂಬ ಆರೋಪ ಇದೆ. ಈ ಬಗ್ಗೆ ಮಾಜಿ ಅಧ್ಯಕ್ಷ ಶಾರದಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಲಿಖಿತ ದೂರು ನೀಡಿದ್ದಾರೆ. ಇದು ವಿಚಾರಣೆ ನಡೆಯುವ ಹಂತದಲ್ಲಿ ಅ. 15 ರಂದು ಹಗರಣಕ್ಕೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ದಾಖಲೆಗಳು ಕಳವಾಗಿವೆ ಎಂದು ಯಸಳೂರು ಪೊಲೀಸ್‌ ಠಾಣೆಯಲ್ಲಿ ಗ್ರಾ.ಪಂ. ಆಡಳಿತ ದೂರು ನೀಡಿದೆ.

ಹಣ ದುರುಪಯೋಗ ಹಾಗೂ ದಾಖಲೆಗಳು ಕಳವಾಗಿರುವುದನ್ನು ನೋಡಿದರೆ, ಪ್ರಕರಣ ಮುಚ್ಚಿ ಹಾಕುವುದಕ್ಕೆ  ವ್ಯವಸ್ಥಿತ ಪಿತೂರಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಗ್ರಾಮ ಪಂಚಾಯಿತಿ ಖಾತೆಯಲ್ಲಿರುವುದು ಸಾರ್ವಜನಿಕರ ತೆರಿಗೆ ಹಣ ಎಂಬುದು ಆಡಳಿತ ನಡೆಸುವವರಿಗೆ ಹಾಗೂ ಅಧಿಕಾರಿಗೆ ಮರೆತೇ ಹೋದಂತಿದೆ. ಅವರ ಮನೆಯಿಂದ ತಂದಿಟ್ಟ ಖಾಸಗಿ ಹಣ ಎಂಬಂತೆ ಲಕ್ಷಾಂತರ ರೂಪಾಯಿ ಹಣವನ್ನು ನಕಲಿ ಸಹಿ ಮಾಡಿ ಡ್ರಾ ಮಾಡುತ್ತಾರೆ ಎಂದರೆ ಆಡಳಿತ ವ್ಯವಸ್ಥೆ ಎಷ್ಟೊಂದು ಭ್ರಷ್ಟಾಚಾರದಿಂದ ಕೂಡಿದೆ ಎಂಬುದಕ್ಕೆ ಬೇರೆ ಇನ್ಯಾವ ಸಾಕ್ಷಿಬೇಕು’ ಎಂದು ಗ್ರಾಮದ ಎಸ್‌.ಪಿ. ಅರ್ಜುನ್‌ ಅಧಿಕಾರಿಗಳನ್ನು ಪ್ರಶ್ನಿಸಿದರು.

‘ಹಿಂದಿನ ಅಧ್ಯಕ್ಷೆ ಶಾರದಾ ಅವರು ದೂರು ನೀಡಿದ್ದರೂ ಸಹ ಮೇಲಧಿಕಾರಿಗಳು ವಿಚಾರಣೆ ನಡೆಸಿ ಪಿಡಿಇ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಅವರನ್ನೇ ಮುಂದುವರೆಸುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟಿಸಿದೆ’ ಎಂದು ಆರೋಪಿಸಿದರು.

ದೊಡ್ಡ ಪ್ರಮಾಣದ ಭ್ರಷ್ಟಾಚಾರವನ್ನು ಜಿಲ್ಲಾಧಿಕಾರಿಗಳೇ ತನಿಖೆ ಮಾಡಬೇಕು. ಆರೋಪ ಪತ್ತೆ ಹಚ್ಚಿ ಪಿಡಿಒ ಇರಲಿ, ಅಧ್ಯಕ್ಷ, ಸದಸ್ಯರು ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ದುರುಪಯೋಗ ಮಾಡಿಕೊಂಡಿರುವ ಗ್ರಾ.ಪಂ. ಹಣ ಹಾಗೂ ದಂಡವನ್ನು ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಮದ ಕೆ.ಡಿ. ಮಂಜುನಾಥ್‌, ಸೋಮಣ್ಣ, ವೈ.ಪಿ. ಲೋಕೇಶ್‌, ಯಡವರಹಳ್ಳಿ ಮಂಜು ಮುಂತಾದವರು ಇದ್ದರು.

ಪ್ರತಿಕ್ರಿಯಿಸಿ (+)