ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂನತೆ ಮೆಟ್ಟಿ ನಿಂತ ಸಾಧಕ

Last Updated 2 ಡಿಸೆಂಬರ್ 2020, 11:43 IST
ಅಕ್ಷರ ಗಾತ್ರ

‌ಹಾಸನ: ಸಾಧಿಸುವ ಛಲ ಹೊಂದಿ ಸತತ ಪ್ರಯತ್ನ ಮಾಡಿದರೆ ಸವಾಲು ಮೆಟ್ಟಿ ನಿಲ್ಲಬಹುದು. ಕಷ್ಟ, ಅವಮಾನ ಸಹಿಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಂಗವಿಕಲ ನಾಗೇಶ್ ಇತರರಿಗೆ ಮಾದರಿಯಾಗಿದ್ದಾರೆ.

ತಾಲ್ಲೂಕಿನ ಕೌಶಿಕ ಗ್ರಾಮದ ಶಾಟ್‌‍ಪಟ್‌ ಕ್ರೀಡಾಪಟು ನಾಗೇಶ್ (32) ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶ ಪ್ರತಿನಿಧಿಸಿ ಕೀರ್ತಿ ತಂದಿದ್ದಾರೆ.

ಗುಂಡು ಎಸೆತ (ಶಾಟ್‌ಪಟ್‌) ಸ್ಪರ್ಧೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ತಂದಿದ್ದಾರೆ. ಇವರು ಹುಟ್ಟಿನಿಂದಲೇ ಅಂಗವಿಕಲರಲ್ಲ. ಎಂಟು ತಿಂಗಳು ಇದ್ದಾಗ ಎಡಗೈ ಬೆಂಕಿಗೆ ತಗುಲಿ ಸುಟ್ಟು ಹೋಯಿತು. ಎಡಗೈನ ಸ್ವಾಧೀನ ಕಳೆದುಕೊಂಡ ಬಳಿಕ, ತನಗೆ ಒಂದು ಕೈ ಇಲ್ಲ ಎಲ್ಲ ಎಂದು ಮನೆಯಲ್ಲಿ ಕೂರದೇ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಂದು ತೆಗೆದುಕೊಂಡ ನಿರ್ಧಾರ, ಸತತ ಅಭ್ಯಾಸ ಮತ್ತು ಪರಿಶ್ರಮ ಅವರನ್ನು ಎತ್ತರಕ್ಕೆ ಕೊಂಡ್ಯೊಯಿತು.

ಮನೆಯಲ್ಲಿ ಕಡು ಬಡತನ, ಇಬ್ಬರು ಮಕ್ಕಳು. ತುತ್ತು ಊಟಕ್ಕೂ ಪರದಾಡುವ ಸ್ಥಿತಿ. ತಾಯಿ ಕೂಲಿ ಮಾಡಿ ಸಂಪಾದಿಸಿದ ಹಣದಲ್ಲಿ ಮಗ ಬಿ.ಎ ಪದವಿ ಜತೆಗೆ ಕ್ರೀಡಾ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾರೆ.

‘ಶಾಲಾ ದಿನಗಳಲ್ಲಿ ಕ್ರೀಡೆ ಬಗ್ಗೆ ವಿಶೇಷ ಆಸಕ್ತಿ ಇತ್ತು. ಅಂಗವಿಕಲ ಎಂಬ ಕಾರಣಕ್ಕೆ ಕ್ರೀಡೆಗಳಲ್ಲಿ ಭಾಗವಹಿಸಲು ಅಷ್ಟು ಅವಕಾಶ ಸಿಗಲಿಲ್ಲ. ಬ್ಯಾಗ್‌ ತುಂಬಾ ಪ್ರಶಸ್ತಿ, ಪದಕ ಹೊತ್ತು ತರುತ್ತೀಯ, ಇದರಿಂದ ಜೀವನ ಆಗುತ್ತಾ? ಯಾವುದಾದರೂ ಕೆಲಸ ನೋಡಿಕೊಳ್ಳುವಂತೆ ತಾಯಿ ಹೇಳುತ್ತಿದ್ದರು. ಇದೀಗ ಸಾಧನೆ ಕಣ್ತುಂಬಿಕೊಳ್ಳಲು ತಾಯಿಯೂ ಇಲ್ಲ. ನನ್ನ ಸಾಧನೆಯನ್ನು ಸರ್ಕಾರವೂ ಗುರುತಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘12 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೆಸ್ಕ್‌ ನಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ವರ್ಷದ ಹಿಂದೆ ಕಾಯಂ ಮಾಡಿದ್ದಾರೆ. ತರಬೇತಿಗೆ ಊರಿನಿಂದ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ಹೋಗಲು ಹಣ ಇರುತ್ತಿರಲಿಲ್ಲ. ಸ್ನೇಹಿತರು, ಸಂಬಂಧಿಕರು, ಸಹೋದ್ಯೋಗಿಗಳು, ಜಿಲ್ಲಾ ಕ್ರೀಡಾಂಗಣದ ಟೆನ್ನಿಸ್ ಬಾಲ್ ಅಸೋಷಿಯೇಷನ್ ಹಾಗೂ ಮುಂಜಾನೆ ಮಿತ್ರರ ಬಳಗದವರು ನೇಪಾಳಕ್ಕೆ ತೆರಳಲು ಒಂದಿಷ್ಟು ಹಣ ಕೂಡಿಸಿಕೊಟ್ಟರು’ ಎಂದು ಸ್ಮರಿಸಿದರು.

2006ರಲ್ಲಿ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಅಂಗವಿಕಲರ ಕ್ರೀಡಾಕೂಟದಲ್ಲಿ ಜಾವೆಲಿನ್ ಹಾಗೂ ಗುಂಡು ಎಸೆತ ಸ್ಪರ್ಧೆಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ. ಕರ್ನಾಟಕ ಸ್ಪೋರ್ಟ್ಸ್‌ ಅಸೋಸಿಯೇಷನ್ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರೀಡಾಕೂಟ ಮತ್ತು 2007ರ ಪ್ಯಾರಾ ಒಲಿಂಪಿಕ್ ಕಮಿಟಿ ಆಫ್ ಇಂಡಿಯಾ ಆಯೋಜಿಸಿದ್ದ 9ನೇ ಸೀನಿಯರ್ ನ್ಯಾಷನಲ್ ಅಥ್ಲೇಟಿಕ್ಸ್ ಚಾಂಪಿಯನ್‌ಷಿಪ್‌ನ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಸೇರಿದಂತೆ ಇತರೆ ಕ್ರೀಡಾಕೂಟಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

2018ರಲ್ಲಿ ನೇಪಾಳ ಪ್ಯಾರಾ ಒಲಿಂಪಿಕ್ ಕಮಿಟಿ ಆಯೋಜಿಸಿದ್ದ ಸೌತ್ ವೆಸ್ಟ್‌ ಏಷಿಯನ್ ಪ್ಯಾರಾ ಗೇಮ್ಸ್‌ ನಲ್ಲಿ ಭಾಗವಹಿಸಲು ಅವಕಾಶ ದೊರೆಯಿತು. ಆದರೆ, ಆರ್ಥಿಕ ಸಂಕಷ್ಟ ಎದುರಾಯಿತು. ತರಬೇತಿಗೆ ಅಗತ್ಯವಾದ ಟ್ರ್ಯಾಕ್‌ ಶೂ, ವಿಶೇಷ ಆಹಾರ ತಿನ್ನಲು ಹಣ ಇರಲಿಲ್ಲ. ಆಗ ಸ್ನೇಹಿತರು ಆರ್ಥಿಕ ನೆರವು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT