ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ವಹಿಸಲು ಶಾಸಕ ಎಚ್‌.ಡಿ. ರೇವಣ್ಣ ಸೂಚನೆ

Last Updated 12 ಫೆಬ್ರುವರಿ 2021, 2:44 IST
ಅಕ್ಷರ ಗಾತ್ರ

ಹಾಸನ: ‘ಗ್ರಾಮೀಣ ಭಾಗದ ಪೆಟ್ಟಿಗೆ ಅಂಗಡಿಗಳಲ್ಲಿ ನಕಲಿ ಮತ್ತು ಅಕ್ರಮ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಶಾಸಕ ಎಚ್‌.ಡಿ. ರೇವಣ್ಣ ಅಬಕಾರಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಹಾಸನ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದ ಅಂಗಡಿಗಳಲ್ಲಿ ಟೀ, ಕಾಫಿಗಿಂತಲೂ ಅಕ್ರಮ ಮದ್ಯ ಮಾರಾಟವೇ ಹೆಚ್ಚಾಗಿದೆ. ನಕಲಿ ಮದ್ಯ ಸೇವನೆಯಿಂದ ಜನರ ಆರೋಗ್ಯವೂ ಹಾಳಾಗುತ್ತಿದೆ. ತಾಲ್ಲೂಕು ಒಂದರಲ್ಲಿಯೇ ಲಕ್ಷಾಂತರರೂಪಾಯಿ ಇಲಾಖೆಗೆ ನಷ್ಟ ಉಂಟಾಗಿದೆ. ಬೇಕೆಂದರೆ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರನ್ನು ನಾನೇ ಹಿಡಿದು ಕೊಡುತ್ತೇನೆ. ಕಡಿವಾಣ ಹಾಕಲುಆಗದಿದ್ದರೆ ಕೆಲಸ ಬಿಟ್ಟು ಮನೆಗೆ ಹೋಗಿ’ ಎಂದು ತರಾಟೆ ತೆಗೆದುಕೊಂಡರು.

ಗ್ರಾಮ ಪಂಚಾಯಿತಿಗೆ ನೀಡಿರುವ 14 ಮತ್ತು 15ನೇ ಹಣಕಾಸು ಯೋಜನೆ ಅನುದಾನವನ್ನು ಫೆ. 28ರ ಒಳಗೆ ಖರ್ಚು ಮಾಡಿ ಶೇಕಡಾ 100 ರಷ್ಟು ಪ್ರಗತಿ ಸಾಧಿಸಬೇಕು. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಪ್ರಸ್ತಾವ ಸಲ್ಲಿಸಿ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆಸೂಚಿಸಿದರು.

ಈಗಾಗಲೇ ಆರಂಭವಾಗಿರುವ ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಮೋಸ ಆಗದಂತೆ ಎಚ್ಚರಿಕೆ ವಹಿಸಿ ಎಂದು ಕೃಷಿ ಇಲಾಖೆ ಅಧಿಕಾರಿಗೆ ನಿರ್ದೇಶಿಸಿದರು.

ದುದ್ದ ಹಾಗೂ ಶಾಂತಿಗ್ರಾಮ ಹೊಬಳಿಯ ರೈತರಿಗೆ ಟಾರ್ಪಲ್ ವಿತರಣೆ ಮಾಡಿ. ಮಾರ್ಚ್, ಎಪ್ರಿಲ್ ನಂತರ ಮಳೆಗಾಲ ಪ್ರಾರಂಭವಾಗಲಿದ್ದು, ಬಿತ್ತನೆ ಬಿಜ, ರಸ ಗೊಬ್ಬರ ಕೊರತೆಯಾಗದಂತೆ ದಾಸ್ತಾನು ಮಾಡಿಕೊಳ್ಳಿ ಎಂದು ಎಂದು ಕೃಷಿ ಅಧಿಕಾರಿಗಳಿಗೆ ತಿಳಿಸಿದರು.

‘ಪಶುಪಾಲನೆ ಇಲಾಖೆಯಿಂದ ಕುರಿ, ಕೋಳಿ, ಹಂದಿಗಳ ಸಾಕಾಣಿಕೆಗೆ ನೀಡುವ ಅನುದಾನವನ್ನು ದುದ್ದ, ಶಾಂತಿಗ್ರಾಮ ಹೋಬಳಿಗೆನ್ಯಾಯವಾಗಿ ಹಂಚಬೇಕು’ ಎಂದು ‌ಪಶುಪಾಲನೆ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ರೇಷ್ಮೆ ಇಲಾಖೆಯಿಂದ 10 ಮನೆಗಳನ್ನು ವಿತರಣೆ ಮಾಡಲಾಗಿದೆ. ಈ ಮನೆಗಳನ್ನು ಅಧಿಕಾರಿಗಳಿಗೆ ಇಷ್ಟ ಬಂದವರಿಗೆ ಕೊಡುವುದಾದರೆ ನಾವು ಶಾಸಕರಾಗಿ ಯಾಕೆ ಇರಬೇಕು ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.

ನನ್ನ ವಿಧಾನಸಭೆ ಕ್ಷೇತ್ರಕ್ಕೆ ಸೆರುವ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಪ್ರೌಢ ಶಾಲೆ ಶಿಕ್ಷಕರ ಸಭೆ ಕರೆದು ಶಾಲೆ‌ ಕಟ್ಟಡ ನಿರ್ಮಾಣ, ಕಟ್ಟಡಗಳಿಗೆ ಬಣ್ಣ ಹೊಡೆಯುವುದು ಹಾಗೂ ಮೂಲ ಸೌಕರ್ಯ ಕೊರತೆಗಳ ಪಟ್ಟಿ ಮಾಡಿ ಣಿಡುವಂತೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗೆಸೂಚಿಸಿದರು.

ವಿದ್ಯಾಭ್ಯಾಸ ಮಾಡಲು ಬರುವ ಯಾವ ವಿದ್ಯಾರ್ಥಿಗಳಿಗೆಹಾಸ್ಟೆಲ್ ಪ್ರವೇಶಾತಿ ನಿರಾಕರಿಸಬಾರದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ಅಂಗನವಾಡಿ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ದುದ್ದ, ಶಾಂತಿಗ್ರಾಮ ಹೋಬಳಿಯಲ್ಲಿ ಕರಪತ್ರಗಳನ್ನು ಹಂಚಿಕೆ ಮಾಡಿ ಕಾರ್ಮಿಕರನ್ನು ನೋಂದಾವಣೆ ಮಾಡಿ ಅವರಿಗೆ ಇಲಾಖೆಯಿಂದ ಇರುವ ಸೌಲಭ್ಯಗಳನ್ನು ವಿತರಿಸಿ ಎಂದು ಕಾರ್ಮಿಕ ಇಲಾಖೆ ಲೇಬರ್‌ ಇನ್‌ಸ್ಪೆಕ್ಟರ್‌ಗೆ ತಿಳಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಶಿವಶಂಕರಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಅಧಿಕಾರಿ ಯಶವಂತ್, ಎಚ್‌.ಡಿ.ಸಿ.ಸಿ ಬ್ಯಾಂಕ್‌ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್. ದುದ್ದ ಲಕ್ಷಣ್ ಗೌಡ, ಎಸ್‌. ದ್ಯಾವೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT