ಬುಧವಾರ, ಏಪ್ರಿಲ್ 21, 2021
23 °C
ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ

ಅಧ್ಯಾಪಕರ ಸಮಸ್ಯೆ ಬಗೆಹರಿಸಲು ಕ್ರಮ: ಶಾಸಕ ಪ್ರೀತಂ ಜೆ.ಗೌಡ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪದವಿ ಕಾಲೇಜುಗಳನ್ನು ಮಾದರಿಯಾಗಿ ಅಭಿವೃದ್ಧಿ‍ಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರೀತಂ ಜೆ. ಗೌಡ ಹೇಳಿದರು.

ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ 2020-21ನೇ ಶೈಕ್ಷಣಿಕ ಸಾಲಿನ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ನಮ್ಮ ಕ್ಷೇತ್ರದಲ್ಲಿರುವ ಪದವಿ ಕಾಲೇಜುಗಳು ಉತ್ತಮವಾಗಿರಬೇಕು. ನಗರ ವ್ಯಾಪ್ತಿಯಲ್ಲಿಯೇ ಆರು ಸರ್ಕಾರಿ ಪದವಿ ಕಾಲೇಜುಗಳು ಇದ್ದು, ಪ್ರತಿ ಕಾಲೇಜುಗಳಲ್ಲಿ ಸಭೆ ನಡೆಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಅಧ್ಯಾಪಕರ ಕೊರತೆ ಹಾಗೂ ಮೂಲ ಸೌಲಭ್ಯಗಳ ಕೊರತೆಯ ಬಗ್ಗೆ ಈಗಾಗಲೇ ನನ್ನ ಗಮನಕ್ಕೆ ಬಂದಿದ್ದು, ಅಧ್ಯಾಪಕರು ಹಾಗೂ ಅಧ್ಯಾಪಕೇತರ ಸಮಸ್ಯೆಯನ್ನು ಸರ್ಕಾರದ ಹಂತದಲ್ಲಿ ಬಗೆಹರಿಸಲಾಗುವುದು’ ಎಂದರು.

‘ಕಾಲೇಜುಗಳಲ್ಲಿ ಪಠ್ಯದ ಜೊತೆಗೆ ಯೋಗಾಸನ, ಕ್ರೀಡೆಗೆ ಒತ್ತು ನೀಡಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲು ಎಲ್ಲಾ ಪದವಿ ಕಾಲೇಜುಗಳ ಪ್ರಾಂಶುಪಾಲರು ಚಿಂತನೆ ನಡೆಸಿದರೆ ನಗರದಲ್ಲಿ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

ಪ್ರಾಂಶುಪಾಲ ಕೆ.ಟಿ. ಕೃಷ್ಣೇಗೌಡ ಮಾತನಾಡಿ, ಕಾಲೇಜಿನಲ್ಲಿ ಅಂದಾಜು ಮೂರು ಸಾವಿರ ವಿದ್ಯಾರ್ಥಿಗಳು ಇದ್ದು, ನೀರಿನ ಅಭಾವ ಎದುರಾಗಿದೆ. ಅಲ್ಲದೇ ರಾತ್ರಿ ವೇಳೆ ಕಾಲೇಜು ಆವರಣದಲ್ಲಿ ಹೈಮಾಸ್ಟ್‌ ವಿದ್ಯುತ್ ಸೌಲಭ್ಯ ಬೇಕಿದೆ. ಕೆಲವೇ ದಿನಗಳಲ್ಲಿ ಕಾಲೇಜಿಗೆ ನ್ಯಾಕ್ ಸಮಿತಿ ಬರುತ್ತಿರುವುದರಿಂದ ಅಗತ್ಯವಾಗಿ ಆಗಬೇಕಿರುವ ಕೆಲಸಗಳು ಸೇರಿದಂತೆ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಮಾಡಿಸುವಂತೆ ಮನವಿ ಮಾಡಿದರು.

ಸಮಸ್ಯೆ ಆಲಿಸಿದ ಶಾಸಕರು, ನಗರಸಭೆ ಎಂಜಿನಿಯರ್‌ಗಳನ್ನು ಕರೆಸಿ ಕಾಲೇಜಿಗೆ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಹಾಗೂ ಮಿನಿ ಹೈಮಾಸ್ಟ್‌ ವಿದ್ಯುತ್ ಸಂಪರ್ಕ ಮಾಡುವಂತೆ
ಸೂಚಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶೋಭಾ ಯೋಗೇಂದ್ರ, ದೇವಾನಂದ್, ಗೋಪಾಲಕೃಷ್ಣ ಪ್ರಭು, ವರುಣ್ ಬೆಳವಾಡಿ, ಪ್ರೊ. ಆನಂದಸ್ವಾಮಿ, ಜಿ.ಎನ್. ಪ್ರೀತಂ ಹಾಗೂ ಕಾಲೇಜಿನ ಅಧ್ಯಾಪಕರು ಹಾಗೂ ಆಡಳಿತ ಸಿಬ್ಬಂದಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು