ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ನಡೆಸಲು ಆಗದಿದ್ದರೆ ಸಿಎಂ ರಾಜೀನಾಮೆ ನೀಡಲಿ: ಕೋಡಿಹಳ್ಳಿ ಚಂದ್ರಶೇಖರ್

Last Updated 31 ಜನವರಿ 2019, 13:19 IST
ಅಕ್ಷರ ಗಾತ್ರ

ಹಾಸನ : ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೂ ರಾಜೀನಾಮೆ ನೀಡುತ್ತೇನೆಂದು ಹೇಳುವ ಮೂಲಕ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದು, ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಲಿ’ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

‘ಈ ರೀತಿ ರಾಜೀನಾಮೆ ಪದ ಬಳಸುವ ಮೂಲಕ ತಾವು ದುರ್ಬಲ ಎಂಬುದನ್ನು ಕುಮಾರಸ್ವಾಮಿ ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾದರೆ ಆಡಳಿತ ವರ್ಗ ಕೈ ಮೀರಿ ವರ್ತಿಸುತ್ತದೆ. ಎರಡೂ ಪಕ್ಷಗಳಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.

‘ಫೆ. 8ರಂದು ಮಂಡಿಸುವ ರಾಜ್ಯ ಬಜೆಟ್ ನಲ್ಲಿ ರೈತ ಪರ ಯೋಜನೆ ಘೋಷಿಸುತ್ತಾರೆಂಬ ವಿಶ್ವಾಸವಿದೆ. ಕಡಿಮೆ ದರದಲ್ಲಿ ರಸಗೊಬ್ಬರ, ಬೆಳೆಗೆ ಬೆಂಬಲ ಬೆಲೆ ಘೋಷಿಸಿ ಅನ್ನದಾತರನ್ನು ಕಾಪಾಡಬೇಕು. ಇಲ್ಲದಿದ್ದರೆ ರೈತರು ಬೀದಿಗಿಳಿದು ಹೋರಾಟ ಆರಂಭಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಮಂಡಿಸಿದ ನಾಲ್ಕು ಬಜೆಟ್ ಗಳಿಂದ ರೈತರಿಗೆ ಯಾವ ಪ್ರಯೋಜನ ಆಗಿಲ್ಲ. ಕೊನೆ ಬಜೆಟ್ ಫೆ. 1ರಂದು ಮಂಡಿಸಲಿದ್ದು, ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸುತ್ತಾರೆಂಬ ನಿರೀಕ್ಷೆಯಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ದೇಶದ ಶೇಕಡಾ 63ರಷ್ಟು ಜನರು ಗ್ರಾಮೀಣ ಭಾಗದಲ್ಲಿದ್ದು, ಕೃಷಿ ಕಾಯಕವನ್ನೇ ಅವಲಂಬಿಸಿದ್ದಾರೆ. ಆದರೆ, ಪ್ರಧಾನಿ ರೈತರಿಗಾಗಿ ಉತ್ತಮ ಯೋಜನೆ ಜಾರಿಗೆ ತರಲಿಲ್ಲ. ಪ್ರತಿ ತಿಂಗಳು ಮನ್ ಕಿ ಬಾತ್ ಮೂಲಕ ದೇಶದ ಸಮಸ್ಯೆಗಳ ಕುರಿತು ಮಾತನಾಡಿದರು. ಆದರೆ ಅನ್ನದಾತರ ಕುರಿತು ಚಕಾರ ಎತ್ತಲಿಲ್ಲ. ಈ ಮೂಲಕ ತಾನು ಬಂಡವಾಳಶಾಹಿಗಳ ಪ್ರಧಾನಿಯೇ ಹೊರತು ರೈತಪರವಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸಾಲಮನ್ನಾ ಮಾಡುವಂತೆ ಆಗ್ರಹಿಸಿ 2017ರ ಜೂನ್ 6ರಂದು ಮಧ್ಯ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ನಡೆದ ಗೋಲಿಬಾರ್‌ನಿಂದ 6 ಜನ ರೈತರು ಮೃತಪಟ್ಟರೂ ಮಾತನಾಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿ ಫೆ. 2ರಂದು ಬೆಳಿಗ್ಗೆ 11 ಗಂಟೆಗೆ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಬಾಬು, ಕಾರ್ಯದರ್ಶಿ ಆನೆಕೆರೆ ರವಿ, ಪದಾಧಿಕಾರಿಗಳಾದ ಮೀಸೆ ಮಂಜಣ್ಣ, ಶಿವರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT