ಅಧಿಕಾರಿಗಳ ಪತ್ರ: ಕೆಶಿಪ್‌ ಕಚೇರಿ ಸ್ಥಳಾಂತರ

7
ಕೆಲಸ ಇಲ್ಲದಿದ್ದರೂ ಸಂಬಳ ಕೊಡಬೇಕೆ: ರೇವಣ್ಣ

ಅಧಿಕಾರಿಗಳ ಪತ್ರ: ಕೆಶಿಪ್‌ ಕಚೇರಿ ಸ್ಥಳಾಂತರ

Published:
Updated:
Deccan Herald

ಹಾಸನ: ‘ವಿಶ್ವ ಬ್ಯಾಂಕ್‌ ಅಧಿಕಾರಿಗಳ ಪತ್ರ ವ್ಯವಹಾರದ ಆಧಾರದ ಮೇಲೆ ಬೆಳಗಾವಿ ಕೆಶಿಪ್ ಕಚೇರಿ ಸೇರಿದಂತೆ ತಮ್ಮ ಇಲಾಖೆ ವ್ಯಾಪ್ತಿಯ ವಿವಿಧ ಕಚೇರಿಗಳನ್ನು ಸ್ವಂತ ಜಿಲ್ಲೆ ಹಾಗೂ ಇತರೆಡೆಗೆ ಸ್ಥಳಾಂತರ ಮಾಡಲಾಗಿದೆ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟ ಪಡಿಸಿದರು.

‘ಉತ್ತರ ಕರ್ನಾಟಕ ಕೆಲವೆಡೆ ವಿಶ್ವಬ್ಯಾಂಕ್ ನೆರವಿನಲ್ಲಿ ₹ 618 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ವಾಪಸ್ ತೆಗೆದುಕೊಳ್ಳಿ ಎಂದು ಅಧಿಕಾರಿಗಳು ಪತ್ರ ಬರೆದಿದ್ದರು. ಅದರಂತೆ ಈಗ ಸ್ಥಳಾಂತರ ಮಾಡಲಾಗಿದೆ. ಯಾರೇ ಆಗಲೀ ವಿಷಯ ತಿಳಿದು ಮಾತನಾಡಬೇಕು’ ಎಂದು ಬಿಜೆಪಿ ನಾಯಕ ಜಗದೀಶ್‌ ಶೆಟ್ಟರ್‌ಗೆ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

‘ಹಾಸನ, ಬೇಲೂರು, ಅರಸೀಕೆರೆ, ಮಡಿಕೇರಿ, ಮೈಸೂರು ವ್ಯಾಪ್ತಿಯಲ್ಲಿ ಶೀಘ್ರವೇ ₹ 685 ಕೋಟಿಗೂ ಅಧಿಕ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿ (ಬೇಲೂರು–ಬೆಂಗಳೂರು ₹ 175 ಕೋಟಿ, ಎಡೆಗೌಡನಹಳ್ಳಿ–ಹಾಸನ ₹ 324 ಕೋಟಿ, ಚಾರ್ಮಡಿ ಘಾಟ್‌ ₹ 175 ಕೋಟಿ, ಬಾಣವಾರ–ಹಿರಿಯೂರು ₹ 125 ಕೋಟಿ) ಆರಂಭವಾಗಲಿವೆ. ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ ಕಾಮಗಾರಿ ಮುಗಿದಿದ್ದರೂ, ಅಲ್ಲೇ ಉಪವಿಭಾಗ ಉಳಿಸಿ ಆರು ತಿಂಗಳಿಂದ ಕೆಲಸ ಇಲ್ಲದಿದ್ದರೂ ಸುಮ್ಮನೇ ಸಂಬಳ ಕೊಡಬೇಕೆ’ ಎಂದು ರೇವಣ್ಣ ಖಾರವಾಗಿ ಪ್ರಶ್ನಿಸಿದರು.

‘ರಸ್ತೆ ಅಭಿವೃದ್ಧಿ ಕಾಮಗಾರಿ ಇದ್ದ ಕಡೆಗೆ ಕಚೇರಿಗಳನ್ನು ಸ್ಥಳಾಂತರ ಮಾಡೋದು ತಪ್ಪಾ? ಬೆಳಗಾವಿಯಲ್ಲಿರುವ ಕಾಯಂ ಕಚೇರಿಗಳನ್ನು ಎತ್ತಂಗಡಿ ಮಾಡಿದ್ದೇನೇಯೇ ಅಥವಾ ಬೆಳಗಾವಿ ಅನುದಾನ ಹಾಸನಕ್ಕೆ ಹಾಕಿದ್ದರೆ ಕೇಳಲಿ. ವಿಷಯ ತಿಳಿಯದೇ ಏನೇನೋ ಹೇಳಿಕೆ ಕೊಡಬಾರದು’ ಎಂದು ಟಾಂಗ್ ನೀಡಿದರು.

‘ಈ ಎಲ್ಲಾ ಯೋಜನೆಗಳು ನಾನು ಸಚಿವನಾಗುವ ಮುನ್ನವೇ ಮಂಜೂರಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಉತ್ತರ ಕರ್ನಾಟಕ ಸೇರಿ ಮೂರು ವರ್ಷದಿಂದ ರಾಜ್ಯದಲ್ಲಿ ₹ 24 ಸಾವಿರ ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಪ್ರತಿ ತಿಂಗಳು 8ನೇ ತಾರೀಖಿನಂದು ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ನಡೆಯಲಿದೆ. ಇದರಿಂದ ಕೆಲಸ ತ್ವರಿಗತಿಯಲ್ಲಿ ನಡೆಯುತ್ತದೆ’ ಎಂದರು.

‘ಸಿದ್ದರಾಮಯ್ಯ ಸಿ.ಎಂ. ಆಗಿದ್ದಾಗಲೂ ಯಡಿಯೂರಪ್ಪ ಇದೇ ರೀತಿ ಆರೋಪ ಮಾಡುತ್ತಿದ್ದರು. ಟೀಕೆ ಮಾಡುವುದನ್ನು ಬಿಟ್ಟು ಕೆಲಸ ಮಾಡಲು ಬಿಡಿ. ಸ್ಥಳಾಂತರ ಮಾಡುವುದು ಬೇಡವೆಂದರೆ ಹೇಳಲಿ ಮತ್ತೊಂದು ಉಪವಿಭಾಗ ರಚಿಸುವೆ’ ಎಂದು ನುಡಿದರು.

 

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !