ಸೋಮವಾರ, ಮಾರ್ಚ್ 8, 2021
27 °C
ಗೊರೂರು ಗ್ರಾ.ಪಂ

ಗ್ರಾ.ಪಂನಲ್ಲಿ ಕೋಟ್ಯಂತರ ರೂ ದುರುಪಯೋಗ ಆರೋಪ:ಅಧ್ಯಕ್ಷೆ, ಪಿಡಿಓ ವಿರುದ್ಧ ಎಫ್ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ತಾಲ್ಲೂಕಿನ ಗೊರೂರು ಗ್ರಾಮ ಪಂಚಾಯಿತಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಸರ್ಕಾರ ಬಿಡುಗಡೆ ಮಾಡಿದ್ದ ಕೋಟ್ಯಂತರ ರೂಪಾಯಿ ದುರುಪಯೋಗ ಪಡಿಸಿಕೊಂಡಿರುವ ಆರೋಪ ಹಿನ್ನೆಲೆಯಲ್ಲಿ ಅಧ್ಯಕ್ಷೆ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಗೂರೂರು ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ರೇಣುಕಮ್ಮ ಹಾಗೂ ಪಿಡಿಓ ನವೀನ್ ಕುಮಾರ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಬಂಧನದ ಭೀತಿಯಿಂದ ನವೀನ್ ಕುಮಾರ್ ತಲೆ ಮರೆಸಿಕೊಂಡಿದ್ದಾರೆ.

ಅಭಿವೃದ್ಧಿ ಕಾಮಗಾರಿಗಾಗಿ ಗ್ರಾಮ ವಿಕಾಸ ಯೋಜನೆ, 14 ನೇ ಹಣಕಾಸು ಯೋಜನೆ ಯಡಿ ಕೋಟ್ಯಂತರ ಹಣ ಬಂದಿತ್ತು. ಇದರ ಜೊತೆಗೆ ವಾರದ ಸಂತೆ ಸುಂಕ,ಕೋಳಿ ಅಂಗಡಿ ಹರಾಜು ಹಣ ಹಾಗೂ ಕರ ವಸೂಲಿಯಿಂದಲೂ ಅಪಾರ ಪ್ರಮಾಣದ ಹಣ ಸಂಗ್ರಹವಾಗಿತ್ತು. ಸುಮಾರು ₹ 1.28 ಕೋಟಿ ಹಣವನ್ನು ಠೇವಣಿ ಇಡಲಾಗಿತ್ತು. ನವೀನ್ ಮತ್ತು ರೇಣುಕಮ್ಮ ಜಂಟಿ ಸಹಿ ಮಾಡಿ ಕೋಟಿ ಹಣ ಡ್ರಾ ಮಾಡಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ.

ಏಳೆಂಟು ತಿಂಗಳಿಂದ ಸಿಬ್ಬಂದಿಗೆ ವೇತನ ಕೊಟ್ಟಿಲ್ಲ. 3 ವರ್ಷದಿಂದ ಒಂದು ಗ್ರಾಮಸಭೆ ಮಾಡಿಲ್ಲ. ಕಚೇರಿಯ ಫೋನ್ ಬಿಲ್ ಕಟ್ಟಲೂ ಹಣ ಇಲ್ಲವಾಗಿದೆ. ರಾಜಕೀಯ ಪ್ರಭಾವ ಬಳಸಿ ಸಕಲೇಶಪುರ ತಾಲೂಕು ಐಗೂರು ಗ್ರಾಮ ಪಂಚಾಯಿತಿಗೆ ನವೀನ್ ವರ್ಗ ಮಾಡಿಸಿಕೊಂಡಿದ್ದಾರೆ.

ದಾಖಲೆಯೂ ನಾಶ
‘ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಆ ವರದಿಯನ್ನು ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ಕಳಿಸಲಾಗಿತ್ತು. ಪ್ರಕರಣ ಕುರಿತು ದೂರು ದಾಖಲಿಸಲು ಸಿಇಒ ಅವರು ಅನುಮತಿ ನೀಡಿದ ನಂತರ ರೇಣುಕಮ್ಮ, ನವೀನ್ ಕುಮಾರ್ ವಿರುದ್ಧ ಸ್ಥಳೀಯ ಠಾಣೆಗೆ ದೂರು ನೀಡಲಾಗಿದೆ. ತನಿಖೆ ಮುಂದುವರಿದಿದ್ದು, ಹಣ ದುರುಪಯೋಗವಾಗಿರುವ ಬಗ್ಗೆ ದಾಖಲೆ ಸಿಗದಂತೆ ನಾಶಪಡಿಸಿದ್ದಾರೆ’ ಎಂದು ಹಾಸನ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೇವರಾಜೇಗೌಡ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು