ಶನಿವಾರ, ಅಕ್ಟೋಬರ್ 1, 2022
25 °C
ಮೊದಲ ದಿನ 2,500 ಯುವಕರು

ಅಗ್ನಿಪಥ್ ನೇಮಕಾತಿ ರ‍್ಯಾಲಿ ಆರಂಭ: ಉತ್ಸಾಹದಿಂದ ಪಾಲ್ಗೊಂಡ ಅಗ್ನಿವೀರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ರಾಜ್ಯದಲ್ಲಿಯೇ ಪ್ರಥಮ ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿ ಬುಧವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭವಾಯಿತು. ಬೆಳಿಗ್ಗೆಯಿಂದಲೇ ಸಾವಿರಾರು ಆಕಾಂಕ್ಷಿಗಳು ಕ್ರೀಡಾಂಗಣದತ್ತ ಧಾವಿಸಿದ್ದರು.

ಜಿಲ್ಲಾ ಕ್ರೀಡಾಂಗಣದಲ್ಲಿ‌ ಆಗಸ್ಟ್ 10 ರಿಂದ ಆಗಸ್ಟ್ 22 ರವರೆಗೂ ಅಗ್ನಿಪಥ್ ನೇಮಕಾತಿ ರ‍್ಯಾಲಿ ನಡೆಯಲಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ, ವಿಜಯನಗರ ಜಿಲ್ಲೆಯ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ‌.

ಅಗ್ನಿವೀರ ಜನರಲ್ ಡ್ಯೂಟಿ, ಅಗ್ನಿವೀರ ಟೆಕ್ನಿಕಲ್, ಅಗ್ನಿವೀರ ಸ್ಟೋರ್ ಕೀಪರ್, ಅಗ್ನಿವೀರ ಕ್ಲರ್ಕ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ನೇಮಕಾತಿ ಅಧಿಕಾರಿಗಳು ತಿಳಿಸಿದ್ದಾರೆ.

ಪರದಾಡಿದ ಅಭ್ಯರ್ಥಿಗಳು: ಸುಮಾರು 14 ಜಿಲ್ಲೆಯ ಅಗ್ನಿವೀರರು ನೇಮಕಾತಿಗೆ ಬರುತ್ತಿದ್ದು, ಪ್ರತಿದಿನ ಒಂದೊಂದು ಜಿಲ್ಲೆಯವರಿಗೆ ನೇಮಕಾತಿ ನಡೆಯಲಿದೆ. ಆದರೆ ಬುಧವಾರ 2,500 ಮಂದಿ ಒಮ್ಮೆಲೆ ನಗರಕ್ಕೆ ಬಂದಿದ್ದು, ಸೌಲಭ್ಯ ಇಲ್ಲದೆ ಪರದಾಡಿದರು‌.

ವಸತಿ ವ್ಯವಸ್ಥೆ ಇದ್ದರೂ ಊಟ, ಉಪಾಹಾರ ಹಾಗೂ ನಿತ್ಯ ಕರ್ಮಕ್ಕೆ ಪರದಾಡಬೇಕಾಯಿತು. ಮಳೆಯ ಕಾರಣ ಸರದಿ ಸಾಲಿನಲ್ಲಿ ನಿಂತು ದಾಖಲಾತಿ, ಎತ್ತರ, ತೂಕ, ಓಟದ ಪರೀಕ್ಷೆಯಲ್ಲಿ ಭಾಗವಹಿಸಿದ್ದರು.

2500 ಮಂದಿಗೆ ಪರೀಕ್ಷೆ: ಮೊದಲ ದಿನದ ಅಗ್ನಿಪಥ್ ನೇಮಕಾತಿ ರ‍್ಯಾಲಿಯಲ್ಲಿ 2500 ಮಂದಿಯ ಪರೀಕ್ಷೆ ನಡೆಸಲಾಯಿತು. ಇವರಲ್ಲಿ ಕೇವಲ 50–60 ಮಂದಿ ಮಾತ್ರ ಅಂತಿಮ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯಾಗಲಿದ್ದಾರೆ. ಓಟದ ಪರೀಕ್ಷೆಯಲ್ಲಿ 1600 ಮೀಟರ್ ಅನ್ನು ಕೇವಲ 5.4 ನಿಮಿಷದಲ್ಲಿ ಗುರಿ ಮುಟ್ಟಬೇಕಾಗಿದೆ. ಬಹುತೇಕ ಮಂದಿ ಅಂತಿಮ ಹಂತದ ವೈದ್ಯಕೀಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ನೇಮಕಾತಿ ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರದ ಜಿಲ್ಲೆಗಳಿಂದ ಸೇನೆ ಸೇರಲು ಬಂದಿದ್ದ ಅಭ್ಯರ್ಥಿಗಳು ಸೂಕ್ತ ದಾಖಲೆಗಳಿದ್ದರೂ ಅಗತ್ಯ ಎತ್ತರ ಹಾಗೂ ತೂಕದ ಕೊರತೆಯಿಂದಾಗಿ ನೇಮಕಾತಿಯ ಮೊದಲ ಹಂತದಲ್ಲಿಯೇ ಅನುತ್ತೀರ್ಣರಾಗಿದ್ದು ಕಂಡುಬಂತು. ಬಹುತೇಕ ಅಭ್ಯರ್ಥಿಗಳು ವಿವಿಧ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಕಾರಣ ಕಣ್ಣೀರು ಹಾಕುತ್ತಾ ಹಿಂತಿರುಗಿದ್ದು ಸಾಮಾನ್ಯವಾಗಿತ್ತು.

ಸೇನೆ ಸೇರುವ ಆಕಾಂಕ್ಷೆ: ಸೇನಾ ನೇಮಕಾತಿಗಾಗಿ ಹೆಚ್ಚು ಯುವಕರು ಅಗ್ನಿಪಥ್ ರ‍್ಯಾಲಿಯಲ್ಲಿ ಭಾಗಹಿಸಿದ್ದು, ಬಹುತೇಕ ಯುವಕರು ಸೇನೆ ಸೇರುವುದಷ್ಟೇ ನಮ್ಮ ಆಸೆಯಾಗಿದೆ. ಮನೆಯಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಅಭಿಪ್ರಾಯ ಹಂಚಿಕೊಂಡರು. ಪಾಲ್ಗೊಂಡವರಲ್ಲಿ ಪ್ರಥಮ ವರ್ಷದ ಪದವಿ ಓದುತ್ತಿರುವವರೇ ಹೆಚ್ಚಾಗಿದ್ದರು.

ನೇಮಕಾತಿ ವೇಳೆ ವಿವಿಧ ಪರೀಕ್ಷೆಯಲ್ಲಿ ಪಾಸಾಗಲು ವಿಫಲವಾದ ಅಭ್ಯರ್ಥಿಗಳು ಮುಂದಿನ ದಿನ ಹೆಚ್ಚಿನ ಶ್ರಮ ವಹಿಸಿ ಮತ್ತೊಂದು ಸೇನಾ ರ‍್ಯಾಲಿಯಲ್ಲಿ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದರು. ಇನ್ನೂ ಕೆಲವರು ಪೊಲೀಸ್ ಇಲಾಖೆಗೆ ಸೇರುವ ಬಗ್ಗೆ ಮಾತನಾಡಿದರು‌.

25 ಕ್ಕೂ ಹೆಚ್ಚು ಸೇನೆ ಸಿಬ್ಬಂದಿ

ಭಾರತೀಯ ಸೇನೆಯ ಸುಮಾರು 25 ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಹಾಗೂ ಸೇನೆ ಸಿಬ್ಬಂದಿ ಅಗ್ನಿಪಥ್ ನೇಮಕಾತಿ ಪರೀಕ್ಷೆ ನಡೆಸಿದರು.

ಎತ್ತರ, ತೂಕ, ವೈದ್ಯಕೀಯ ಪರೀಕ್ಷೆಗೆ ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿತ್ತು. ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ಡಿವೈಎಸ್ಪಿ ಉದಯಭಾಸ್ಕರ್ ಸೇರಿದಂತೆ 30 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕೀಡಾಂಗಣ ಸುತ್ತ ಬಂದೋಬಸ್ತ್‌ ಮಾಡಿದ್ದರು.

ಪರೀಕ್ಷೆ ನಡೆಸುವ ವೇಳೆ ಅಭ್ಯರ್ಥಿಗಳಿಗೆ ಆರೋಗ್ಯದಲ್ಲಿ ಏರುಪೇರು ಅಥವಾ ಪೆಟ್ಟುಗಳಾದರೆ ತುರ್ತು ಚಿಕಿತ್ಸೆ ಒದಗಿಸಲು ಪ್ರತ್ಯೇಕವಾಗಿ ಚಿಕಿತ್ಸಾ ಘಟಕವನ್ನು ಕ್ರೀಡಾಂಗಣದ ಸಮೀಪದಲ್ಲಿಯೇ ತೆರೆಯಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು