ಹಾಸನ: ಕಾರಕೆರೆ ಕೃಷಿ ಮಹಾವಿದ್ಯಾಲಯದಿಂದ ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮ ನಡೆಯಿತು.
ಗ್ರಾಮದ ಎಚ್.ಡಿ. ದೇವೇಗೌಡ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಕಾಲೇಜಿನ ವಿದ್ಯಾರ್ಥಿಗಳು, ಗ್ರಾಮದ ನಕ್ಷೆ ತಯಾರಿಸಿ ಗ್ರಾಮದ ಮುಖಂಡರು ಹಾಗೂ ಮಹಿಳೆಯರಿಂದಲೇ ಗ್ರಾಮದ ಪ್ರಮುಖ ಸ್ಥಳಗಳನ್ನು ಗುರುತಿಸುವ ಮೂಲಕ ಗಮನ ಸೆಳೆದರು.
ಹಳ್ಳಿ ಸೊಗಡಿನ ರಾಗಿ ಮಂಟಪ, ಚಲನವಲನ ನಕ್ಷೆ, ಬೆಳೆಗಳ ಗೋಪುರ, ಆದ್ಯತೆ ಶ್ರೇಣಿ, ಸಮಸ್ಯಾತ್ಮಕ ವೃಕ್ಷ, ಬೆಳೆ ಋತುಮಾನ ಚಕ್ರ, ಶ್ರೇಣಿ ಪದ್ಧತಿ, ವೃಕ್ಷ ಸ್ಥಾಪನೆ ಮಾಡುವ ಮೂಲಕ ಸಮಗ್ರ ಕೃಷಿ ಪದ್ದತಿ ಬಗ್ಗೆ ನಕ್ಷೆ ರಚಿಸಿ, ಅದರ ಬಗ್ಗೆ ಗ್ರಾಮದ ಮುಖಂಡರು, ಮಹಿಳೆಯರು ಹಾಗೂ ಮಕ್ಕಳಿಗೆ ಮಾಹಿತಿ ನೀಡಿದರು.
ಸೋಮನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಂದ್ರ ಮಾತನಾಡಿ, ‘ಕಾರೆಕೆರೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಮ್ಮ ಗ್ರಾಮಕ್ಕೆ ಬಂದಾಗಿನಿಂದ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ವಿದ್ಯಾರ್ಥಿ ಜೀವನದಲ್ಲೇ ರೈತರ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅನ್ವೇಷಣೆಗೆ ಮುಂದಾಗಿರುವ ವಿದ್ಯಾರ್ಥಿಗಳ ನಡೆ ಶ್ಲಾಘನೀಯ’ ಎಂದರು.
ಗ್ರಾಮೀಣ ರೈತರಿಗೆ ಮಣ್ಣಿನ ಮಹತ್ವ, ರಾಸಾಯನಿಕ ಗೊಬ್ಬರಗಳಿಂದ ಆಗುವ ಅಪಾಯ, ಕೃಷಿ ಚಟುವಟಿಕೆಗಳಲ್ಲಿ ಅನುಸರಿಸಬೇಕಾದ ಸಾವಯವ ಪದ್ಧತಿ, ಸಾವಯವ ಕೃಷಿಯ ಉಪಯೋಗ ಹೀಗೆ ವಿವಿಧ ವಿಚಾರಗಳ ಬಗ್ಗೆ ರೈತರಿಗೆ ತಿಳಿಸಿಕೊಟ್ಟು ಆರೋಗ್ಯಕರ ಕೃಷಿ ಉತ್ಪನ್ನಗಳನ್ನು ಬೆಳೆಯಲು ಅನೇಕ ಸಲಹೆಗಳನ್ನು ನೀಡಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಕೂಡ ನಮ್ಮ ಗ್ರಾಮದ ಎಲ್ಲರ ಸಹಕಾರ ವಿದ್ಯಾರ್ಥಿಗಳಿಗೆ ಇರಲಿದೆ ಎಂದು ಭರವಸೆ ನೀಡಿದರು.
ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಸದಾಶಿವನಗೌಡ ಮಾತನಾಡಿ, ‘ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮಕ್ಕೆ ಭೇಟಿ ನೀಡಿ ಮೂರು ತಿಂಗಳು ಇಲ್ಲಿಯೇ ನೆಲೆಸಲಿದ್ದಾರೆ. ಗ್ರಾಮದಲ್ಲಿನ ಕೃಷಿ ಚುವಟಿಕೆಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಅವುಗಳಿಗೆ ಪರಿಹಾರ ಮಾರ್ಗೋಪಾಯದ ಬಗ್ಗೆ ಗ್ರಾಮದ ರೈತರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ’ ಎಂದರು.
ಕಬ್ಬಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪುಟ್ಟರಾಜು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್, ನಿರ್ದೇಶಕ ರಾಮೇಗೌಡ, ಗ್ರಾಮಸ್ಥ ಪುಟ್ಟಸ್ವಾಮಿ ಗೌಡ ಹಾಗೂ ಕೃಷಿ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.