ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆ ವಾಪ‍ಸ್‌: ಸಿಹಿ ಹಂಚಿ ಸಂಭ್ರಮ

ಕೇಂದ್ರ ಸರ್ಕಾರದ ನಿರ್ಧಾರಕ್ಕೆ ರೈತರು, ಸಂಘಟನೆಗಳ ಮುಖಂಡರಿಂದ ಸ್ವಾಗತ
Last Updated 19 ನವೆಂಬರ್ 2021, 15:17 IST
ಅಕ್ಷರ ಗಾತ್ರ

ಹಾಸನ: ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಹೇಮಾವತಿ ಪ್ರತಿಮೆ ಮುಂಭಾಗದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಜಿಲ್ಲೆಯಲ್ಲೂ ಬಂದ್‌, ಪ್ರತಿಭಟನೆ, ರ್‍ಯಾಲಿಗಳು, ರಸ್ತೆ ತಡೆ ನಡೆದಿದ್ದವು. ರೈತ ಸಂಘಗಳು, ಕೃಷಿ ಕೂಲಿಕಾರರ ಸಂಘ, ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿ–ಯುವಜನ ಸಂಘಟನೆಗಳು, ರೈತಸಂಘಟನೆಗಳು, ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ರೈತರ ಹೋರಾಟಕ್ಕೆ ಬೆಂಬಲ ನೀಡಿದವು.

ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ ರೈತರು. ರಸ್ತೆಯಲ್ಲಿ ಕುಳಿತು ಊಟ ಮಾಡುವ ಮೂಲಕ ಕೃಷಿ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಿದ್ದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್‌.ಆರ್‌. ನವೀನ್‌ ಕುಮಾರ್‌ ಮಾತನಾಡಿ, 2020ರ ಜೂನ್‌ನಲ್ಲಿ ಮೊದಲಿಗೆ ಸುಗ್ರಿವಾಜ್ಞೆಗಳ ಮೂಲಕ ಜಾರಿಗೆ ತಂದ ಕಾರ್ಪೊರೇಟ್ ಪರವಾರ ಮೂರು ರೈತ ವಿರೋಧಿ ಕರಾಳ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿರುವುದು ಸಂತೋಷದ ವಿಷಯ ಎಂದರು.

ಅಂದಾಜು 700ಕ್ಕೂ ಹೆಚ್ಚು ರೈತರು ಈ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ. ಲಖೀಂಪುರ್ ಖೇರಿ ಹತ್ಯಾಕಾಂಡ ಸೇರಿದಂತೆ ಹಲವು ಸಾವುಗಳಿಗೆ ಕೇಂದ್ರದ ಹಠಮಾರಿತನವೇ ಕಾರಣ ಎಂದು ಆರೋಪಿಸಿದರು.

ರೈತರ ಹೋರಾಟ ಕೇವಲ ಮೂರು ಕರಾಳ ಕೃಷಿ ಕಾಯ್ದೆಗಳ ರದ್ದತಿಗಾಗಿ ಮಾತ್ರವಲ್ಲದೇ ಎಲ್ಲಾ ರೈತರ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸುವ ಶಾಸನದ ಈಡೇರಿಕೆಗಾಗಿ ಕೂಡ ಎಂಬುದನ್ನು ಸಂಯುಕ್ತ ಕಿಸಾನ್ ಮೋರ್ಚಾ ಪ್ರಧಾನ ಮಂತ್ರಿಗೆ ನೆನಪಿಸಲು ಬಯಸುತ್ತದೆ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ವಸಂತ್ ಕುಮಾರ್, ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಾಬು, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಡಿ.ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಅರವಿಂದ್‌, ರಮೇಶ್‌ ಇದ್ದರು.

ಒಂದು ವರ್ಷ ನಡೆದ ಹೋರಾಟದಲ್ಲಿ ದೇಶದ ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ - ಯುವಜನರು ಭಾಗಿಯಾಗಿ, ಬೆಂಬಲವಾಗಿ ನಿಂತಿದ್ದರು. ಈ ಒಗ್ಗಟ್ಟಿನ ಹೋರಾಟದ ಫಲವಾಗಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತಾಗಿದೆ ಎಂದು ಎಐಡಿಎಸ್‌ಒ ಜಿಲ್ಲಾ ಸಹ ಸಂಚಾಲಕಿ ಚೈತ್ರಾ ತಿಳಿಸಿದ್ದಾರೆ.

ಹುತಾತ್ಮರಾದ 700ಕ್ಕೂ ಹೆಚ್ಚು ರೈತರ ತ್ಯಾಗ ಮತ್ತು ಬಲಿದಾನ ದೇಶದ ಜನರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ. ಈ ಚಳುವಳಿ ಎಲ್ಲರಿಗೂ ಒಂದು ಪಾಠವನ್ನು ಕಲಿಸಿದೆ. ಸರಿಯಾದ ಮಾರ್ಗದಲ್ಲಿ, ಸರಿಯಾದ ವಿಚಾರದಡಿಯಲ್ಲಿ, ಪ್ರಜಾತಾಂತ್ರಿಕ ಹಕ್ಕುಗಳಿಗಾಗಿ ನಡೆಯುವ ನಿರಂತರ ಹೋರಾಟವನ್ನು ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

‘ಸತ್ಯ, ನ್ಯಾಯ, ಧರ್ಮ ಕ್ಕಾಗಿ ಹೋರಾಡಿದ ರೈತರಿಗೆ ಸಂದ ಜಯ. ತಡವಾಗಿ ಕಾಯಿದೆ ವಾಪಸ್ ಪಡೆಯಯುವ ಬದಲು,ಹೋರಾಟಕ್ಕೆ ಮನ್ನಣೆ ನೀಡಿದ್ದರೆ ಸರ್ಕಾರದ ಗೌರವ ಉಳಿಯುತ್ತಿತ್ತು’ ಎಂದು ಕಾಫಿ ಬೆಳೆಗಾರ ಬಾಳ್ಳುಪೇಟೆ ಜಗನ್ನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT