ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ಅಂಗಡಿ ಪರವಾನಗಿ ಅಮಾನತು

ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜದ ಸಮರ್ಪಕ ಪೂರೈಕೆಗೆ ಕೃಷಿ ಇಲಾಖೆ ಕ್ರಮ
Last Updated 8 ಜೂನ್ 2022, 16:20 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ನಿಗದಿತ ಗುರಿಯಲ್ಲಿ ಶೇ 15ರಷ್ಟು ಜಮೀನಿನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.

ಮುಂಗಾರು ಇನ್ನೇನು ಜಿಲ್ಲೆಗೆ ಪ್ರವೇಶಿಸಲಿದ್ದು, ಕೃಷಿ ಚಟುವಟಿಕೆಗಳು ಮತ್ತಷ್ಟು ಚುರುಕಾಗಲಿವೆ. ಈ ಸಂದರ್ಭದಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಅಭಾವ ಉಂಟಾಗದೇ ಇರಲಿ ಎನ್ನುವ ಉದ್ದೇಶದಿಂದ ಕೃಷಿ ಇಲಾಖೆ ಅಗತ್ಯ ದಾಸ್ತಾನು ಮಾಡಿಕೊಂಡಿದೆ. ಕಾಳಸಂತೆಯಲ್ಲಿ ಬಿತ್ತನೆ ಬೀಜ, ಗೊಬ್ಬರಗಳನ್ನು ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

‘ಜಿಲ್ಲೆಯ ರೈತರಿಗೆ ಗುಣಮಟ್ಟದ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕಗಳು ಸಕಾಲದಲ್ಲಿ ಸಮರ್ಪಕವಾಗಿ ದೊರೆಯಬೇಕು ಎನ್ನುವ ಉದ್ದೇಶ ಕೃಷಿ ಇಲಾಖೆಯದ್ದು. ಇದಕ್ಕಾಗಿ ಈಗಿನಿಂದಲೇ ಅಧಿಕಾರಿಗಳು ಕಟ್ಟುನಿಟ್ಟಿನ ತಪಾಸಣೆ ಆರಂಭಿಸಿದ್ದಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್‌. ರವಿ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಇಲಾಖೆಯ ಪರಿವೀಕ್ಷಕರು ವಿವಿಧ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಮಾರಾಟ ಮಳಿಗೆಗಳ ತಪಾಸಣೆ ನಡೆಸುತ್ತಿದ್ದು, ಕಾಯ್ದೆಯ ಉಲ್ಲಂಘನೆ ಮಾಡಿರುವ 11 ಮಳಿಗೆಗಳ ಪರವಾನಗಿ ಅಮಾನತು ಮಾಡಲಾಗಿದೆ’ ಎಂದು ರವಿ ಹೇಳಿದ್ದಾರೆ.

‘ಮಳಿಗೆಗಳಿಗೆ ಭೇಟಿ ನೀಡಿ ದಾಸ್ತಾನು ಹಾಗೂ ದಾಖಲಾತಿಗಳನ್ನು ಪರಿಶೀಲಿಸಲಾಗುತ್ತಿದ್ದು, ದಾಸ್ತಾನು ದಾಖಲೆಗಳನ್ನು ನಿರ್ವಹಿಸದೇ ಇರುವುದು ಹಾಗೂ ರೈತರಿಗೆ ರಶೀದಿ ನೀಡದೇ ಇರುವುದು ಕಂಡುಬಂದಿದೆ. ರಸಗೊಬ್ಬರ ನಿಯಂತ್ರಣ ಆದೇಶ 1985ರ ನಿಯಮಗಳು ಉಲ್ಲಂಘನೆ ಆಗಿರುವ ಹಿನ್ನಲೆಯಲ್ಲಿ ಅಂತಹ ಮಳಿಗೆಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಅರಕಲಗೂಡು ತಾಲ್ಲೂಕಿನ ಕೊಣನೂರಿನ ಎರಡು ಚಿಲ್ಲರೆ ರಸಗೊಬ್ಬರ ಅಂಗಡಿಗಳು, ಅರಸೀಕೆರೆಯ ಒಂದು, ಬೇಲೂರು ತಾಲ್ಲೂಕಿನ ಒಂದು ರಸಗೊಬ್ಬರ ಹಾಗೂ ಒಂದು ಕೀಟನಾಶಕ ಮಳಿಗೆ, ಹಾಸನ ತಾಲ್ಲೂಕಿನ ಮೂರು ರಸಗೊಬ್ಬರ ಮಳಿಗೆ, ಎರಡು ಬಿತ್ತನೆ ಬೀಜ ಮಾರಾಟ ಅಂಗಡಿ ಹಾಗೂ ಒಂದು ಕೀಟನಾಶಕ ಅಂಗಡಿಯ ಪರಿವಾನಗಿಯನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.

ಹಾಸನ ತಾಲ್ಲೂಕಿನ ದುದ್ದ ಹೋಬಳಿಯ ಹೆರಗು ಗ್ರಾಮದಲ್ಲಿ ಪರವಾನಗಿ ಇಲ್ಲದೇ ಅನಧಿಕೃತವಾಗಿ ದಾಸ್ತಾನು ಮಾಡಿದ್ದ ರಾಷ್ಟ್ರೀಯ ಕೆಮಿಕಲ್ಸ್ ಆಂಡ್‌ ಫರ್ಟಿಲೈಸರ್ ಸಂಸ್ಥೆಯ 402 ಚೀಲ ಯೂರಿಯಾ, ಫ್ಯಾಕ್ಸ್ ಸಂಸ್ಥೆಯ 20-20-0-13 ರಸಗೊಬ್ಬರದ 89 ಚೀಲಗಳು ಹಾಗೂ ಇಸ್ಕೊ ಸಂಸ್ಥೆ ಡಿಎಪಿ ರಸಗೊಬ್ಬರದ 4 ಚೀಲಗಳನ್ನು ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ನಿರ್ದೇಶಕರು ಜಪ್ತಿ ಮಾಡಿದ್ದಾರೆ.

‘533 ಹೆಕ್ಟೇರ್‌ನಲ್ಲಿ ಬೆಳೆ ಹಾನಿ’

ಮೇ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಜಿಲ್ಲೆಯ ಒಟ್ಟು 533 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ.

ಮೇ ತಿಂಗಳಲ್ಲಿ 9.7 ಸೆಂ.ಮೀ. ವಾಡಿಕೆ ಮಳೆ ಇದ್ದು, 25.1 ಸೆಂ.ಮೀ. ಮಳೆಯಾಗಿದೆ. ಶೇ 157 ರಷ್ಟು ಹೆಚ್ಚಿನ ಮಳೆಯಾಗಿದ್ದು, ಬೆಳೆ ಹಾನಿಯಾಗಿದೆ. ಈ ಬಗ್ಗೆ ಕೃಷಿ ಅಧಿಕಾರಿಗಳು ಜಮೀನಿಗೆ ತೆರಳಿ, ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಕೆ.ಎಚ್‌. ರವಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT