ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು | ಮಿಶ್ರ ಬೆಳೆಯಿಂದ ಲಾಭ ಗಳಿಸಿದ ರೈತ

ಆಲೂರು – ಸಕಲೇಶಪುರ ಗಡಿ ಪ್ರದೇಶದ ಕುಣಿಗನಹಳ್ಳಿ ಭೂತಾಯಿ ಗ್ರಾಮದ ಕೃಷಿಕನ ಸಾಧನೆ
Last Updated 10 ಮೇ 2020, 20:00 IST
ಅಕ್ಷರ ಗಾತ್ರ

ಆಲೂರು: ಲಾಕ್‌ಡೌನ್‌ ಬಿಸಿಯ ನಡುವೆ ರೈತರು ನಷ್ಟ ಅನುಭವಿಸುತ್ತಿರುವ ಬೆನ್ನಲ್ಲೇ ಆಲೂರು - ಸಕಲೇಶಪುರ ತಾಲ್ಲೂಕು ಗಡಿ ಪ್ರದೇಶದಲ್ಲಿರುವ ಕುಣಿಗನಹಳ್ಳಿ ಗ್ರಾಮದ ಕೃಷಿಕ ಕೆ.ಎಸ್.ಮುತ್ತಪ್ಪ ಮಿಶ್ರ ಬೆಳೆ ಬೆಳೆದು ಲಾಭದತ್ತ ಮುಖ ಮಾಡಿದ್ದಾರೆ.

ನಾಲ್ಕು ಎಕರೆ ಕಾಫಿ ತೋಟ, 4 ಎಕರೆ ಗದ್ದೆ ಹೊಂದಿದ್ದಾರೆ. ಇವರು ವರ್ಷವಿಡೀ ಬೆಳೆಯುವ ತರಕಾರಿ ಮಾರಾಟ ಮಾಡಿ ಬಂದ ಹಣದಿಂದ ಕಾಫಿ ತೋಟ, ಗದ್ದೆ ಕೃಷಿ ಮಾಡುತ್ತಿದ್ದಾರೆ. ಹಾಲು ಸೋರೆಕಾಯಿ, ಹಾಲು ಸೊಂಡೆ ಬೆಳೆದಿದ್ದಾರೆ. ಒಂದು ಸೋರೆಕಾಯಿ ಸುಮಾರು 4 - 6 ಕೆ.ಜಿ ತೂಕ, 4 ಅಡಿ ಉದ್ದ ಬೆಳೆದು ಅಚ್ಚರಿ ಮೂಡಿಸಿದೆ. ತಮ್ಮ ಜಮೀನು ಹಾಗೂ ಮನೆಯ ಬಳಿಯೇ ತರಕಾರಿ ವ್ಯಾಪಾರ ಮಾಡಿ ಸಂತೃಪ್ತರಾಗಿದ್ದಾರೆ.

ಸೋರೆಕಾಯಿ ಬೆಳೆಯಲು ಒಂದು ಎತ್ತರದ ಚಪ್ಪರ ಸಾಕು. ಚಪ್ಪರದಲ್ಲಿ ಬೆಳೆದರೆ ಕಾಯಿ ಉದ್ದವಾಗಿ ಬೆಳೆಯುತ್ತದೆ. ನೆಲದ ಮೇಲೆ ಹಬ್ಬಿಸಿ ಬೆಳೆದರೆ ಕಾಯಿ ವಕ್ರವಾಗುತ್ತೆ. ಒಂದು ಚಪ್ಪರದಲ್ಲಿ 4 ರಿಂದ 6 ಬೀಜ ಗುಣಿ ಇದ್ದರೆ ಸಾಕು. ಗುಣಿ ಹಾಕಿದ 2 ತಿಂಗಳಿಗೆ ಕಾಯಿ ಬೆಳೆಯುತ್ತದೆ. ಒಂದು ಚಪ್ಪರದಲ್ಲಿ ತಿಂಗಳಿಗೆ 60 ರಿಂದ 70 ಕೆ.ಜಿ ಸೋರೆಕಾಯಿ ಸಿಗುತ್ತದೆ. ಕೆ.ಜಿ.ಗೆ ತಲಾ ₹ 20 ರಂತೆ ಮಾರಾಟ ಮಾಡುತ್ತಾರೆ.

ಹಲವು ಪ್ರಶಸ್ತಿ: ಹಾಲು ಸೋರೆಕಾಯಿಯನ್ನು ಎರಡು ಚಪ್ಪರದಲ್ಲಿ ಬೆಳೆದಿರುವುದರಿಂದ ತಿಂಗಳಿಗೆ ₹ 2,500 ಆದಾಯ ಸಿಗುತ್ತದೆ. ಹಾಲುಸೋಂಡೆ ಬೆಳೆಯಿಂದಲೂ ಅಧಿಕ ಲಾಭ ಗಳಿಸುತ್ತಿದ್ದಾರೆ. ಕಾಫಿ ತೋಟದಲ್ಲಿರುವ ಮೆಣಸು ಬಳ್ಳಿಯಿಂದ ಅಧಿಕ ಲಾಭ ಗಳಿಸಿದ್ದಾರೆ. ಇವರ ಕೃಷಿಯನ್ನು ಬೆಂಬಲಿಸಿ ಹಲವು ಪ್ರಶಸ್ತಿಗಳು ಲಭಿಸಿವೆ.

‘ಕೊರೊನಾ ನಮ್ಮ ಹತ್ತಿರ ಸುಳಿದಿಲ್ಲ. ಪ್ರತಿದಿನ ಎಂದಿನಂತೆ ಕೆಲಸ ಮಾಡುತ್ತೇವೆ. ಒಮ್ಮೆ ನಷ್ಟವಾಯಿತೆಂದು ಬೇಸರಿಸದೆ ಪುನಃ ಪ್ರಯತ್ನ ಮಾಡುವುದರಿಂದ ಭೂತಾಯಿ ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ’ ಎಂದು ಹರುಷದಿಂದ ನುಡಿಯುತ್ತಾರೆ ತಿಮ್ಮಪ್ಪ.

ಸೋರೆಕಾಯಿ ಬೆಳೆಗೆ ಬೀಜ, ಚಪ್ಪರ ಹಾಕುವ ಖರ್ಚು ಹೊರತುಪಡಿಸಿದರೆ ಇತರೆ ಖರ್ಚು ಇಲ್ಲ. ದನಗಳ ಗೊಬ್ಬರ ಹಾಕುವುದರಿಂದ ಬಲು ರುಚಿ ಎಂದು ಅನುಭವ ಹಂಚಿಕೊಳ್ಳುತ್ತಾರೆ.

ರೈತರು ಮಿಶ್ರ ಬೆಳೆ ಬೆಳೆಯುವುದರಿಂದ ಒಂದಲ್ಲ ಒಂದು ಬೆಳೆ ಕೈ ಹಿಡಿಯುತ್ತದೆ. ತಿಮ್ಮಪ್ಪ ಅವರ ಕೃಷಿ ಇತರರಿಗೆ ಮಾದರಿಯಾಗಿದೆ. ಮಿಶ್ರ ಬೆಳೆ ಕೃಷಿ ಪದ್ಧತಿ ಅಳವಡಿಕೊಳ್ಳುವುದರಿಂದ ರೈತರ ಆರ್ಥಿಕ ಸುಧಾರಣೆಯಾಗಲಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಾಥ್ ಚಿಮ್ಮಲಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT