ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಗೊತ್ತಿಲ್ಲದ ವಿಚಾರಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ: ಶಾಸಕ ಪ್ರೀತಂ ಗೌಡ

ವಿಮಾನ ನಿಲ್ದಾಣ ಟೆಂಡರ್‌ ಅವ್ಯವಹಾರ ಗೊತ್ತಿಲ್ಲ: ಶಾಸಕ ಪ್ರೀತಂ ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ’ಜೆಡಿಎಸ್‌ ಎಚ್.ಡಿ.ರೇವಣ್ಣ ಅವರು ಆರೋಪ ಮಾಡಿರುವಂತೆ ವಿಮಾನ ನಿಲ್ದಾಣ ಟೆಂಡರ್‌ ವಿಚಾರದಲ್ಲಿ ₹  20 ಕೋಟಿ ಅವ್ಯವಹಾರದ ಬಗ್ಗೆ ಮಾಹಿತಿ ಇಲ್ಲ’ ಎಂದು ಶಾಸಕ ಪ್ರೀತಂ ಗೌಡ ಹೇಳಿದರು. 

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಒಬ್ಬ ಸಾಮಾನ್ಯ ಶಾಸಕ, ಯಾವ ಟೆಂಡರ್‌ ಕರೆಯುವವನೂ ಅಲ್ಲ. ಗೊತ್ತಿಲ್ಲದ ವಿಚಾರಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ದಾಖಲೆ ಸಮೇತ ಯಾರ ಬಗ್ಗೆಯಾದರೂ ಮಾತನಾಡಿದರೆ ಪ್ರತಿಕ್ರಿಯಿಸುತ್ತೇನೆ. ಬಿ.ಎಸ್‌.ಯಡಿಯೂರಪ್ಪ ಅವರು ಜಿಲ್ಲೆಗೆ ವಿಮಾನ ನಿಲ್ದಾಣವನ್ನು ಕೊಡುಗೆಯಾಗಿ ನೀಡಿದ್ದಾರೆ. ಅದನ್ನು ಅತ್ಯಂತ ಶೀಘ್ರವಾಗಿ ಕಾರ್ಯಗತ ಮಾಡುವುದು ನನ್ನ ಜವಾಬ್ದಾರಿ’ ಎಂದು ತಿಳಿಸಿದರು.

‘ಪ್ರೀತಂ ಜೆ.ಗೌಡ ಶಾಸಕರ ಅನುದಾನದ ಕಾಮಗಾರಿಗಳಿಗೆ ಭಾವಚಿತ್ರ ಹಾಕಿಸಿಕೊಂಡಿದ್ದಾರೆ’ ಎಂಬ ಜೆಡಿಎಸ್‌ ಆರೋಪಕ್ಕೆ ಪ್ರತಿಕ್ರಿಯಿಸಿ, ’ನನ್ನ ಅನುದಾನದಲ್ಲಿ ನಡೆದ ಕಾಮಗಾರಿಗಳಿಗೆ ಫೋಟೊ ಹಾಕಿಕೊಂಡರೆ ದೂರು ನೀಡುತ್ತೇವೆ ಎನ್ನುತ್ತಾರೆ. ಆದರೆ, 20 ವರ್ಷಗಳಿಂದ ಇವರು ಮಾಡಿರುವುದು ಏನು? ನನ್ನ ವಿರುದ್ಧ ದೂರು ನೀಡಿದರೆ ಕಾನೂನಾತ್ಮಕವಾಗಿ ಎದುರಿಸುತ್ತೇನೆ. ಪ್ರೀತಂ ಗೌಡರ ಭಾವಚಿತ್ರ ಹಾಸನ ಕ್ಷೇತ್ರದ ಪ್ರತಿ ಮತದಾರರ ಹೃದಯದಲ್ಲಿ ದೆ.  ಫೋಟೊ ಹಾಕಿಸಿಕೊಳ್ಳುವ ಅವಶ್ಯಕತೆ ಇಲ್ಲ. ಶಾಸಕರ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳಿಗೆ ಫೋಟೊ ಹಾಕಿಸಿಕೊಳ್ಳುವ ಪದ್ಧತಿ ಮೊದಲಿನಿಂದಲೂ ಇದೆ, ಅದನ್ನು ಮುಂದುವರೆಸುತ್ತಿದ್ದಾರೆ’ ಎಂದು ಹೇಳಿದರು.

’ ನನ್ನ ಅನುದಾನದಲ್ಲಿ  ಫೋಟೊ ಹಾಕಿಕೊಂಡರೆ ಅವರಿಗೆ ಏಕೆ ಬೇಸರವಾಗಬೇಕು? ಅದರರ್ಥ ನಾನು ಶಾಸಕನಾಗಿರುವುದನ್ನೇ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ 5 - 6 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಗೆಲ್ಲುತ್ತಾರೆ, ಆಗ ಹೇಗೆ ಜೀರ್ಣಿಸಿಕೊಳ್ಳುತ್ತಾರೆ ಕಾದು ನೋಡೋಣ. ಮೊದಲು ದೂರು ನೀಡುವವರ ತಟ್ಟೆಯಲ್ಲಿ ಹೆಗಣ ಬಿದ್ದಿರುವುದನ್ನು  ನೋಡಿಕೊಳ್ಳಲಿ. ನೊಣ ಬಿದ್ದಿರುವ ಕಡೆ ನೋಡಬಾರದು. ಮೊದಲು ಅವರ ಫೋಟೊ ತೆಗೆಯಲಿ ಆಮೇಲೆ ದೂರು ನೀಡಲಿ’ ಎಂದು ತಿರುಗೇಟು ನೀಡಿದರು.

’ ನಗರ ಹೊಸ ಬಸ್‌ ನಿಲ್ದಾಣ ಸಮೀಪ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಡಿಸೆಂಬರ್‌ ಅಂತ್ಯಕ್ಕೆ ಪೂರ್ಣಗೊಳ್ಳಬೇಕಿತ್ತು. ಕೋವಿಡ್‌ ಕಾರಣದಿಂದ ಒಂದೆರಡು ತಿಂಗಳು ವಿಳಂಬ ಆಗಬಹುದು. ರೈಲ್ವೆ ಇಲಾಖೆಯಿಂದ ಮೇಲ್ಸೇತುವೆ ವಿನ್ಯಾಸಕ್ಕೆ ಅನುಮೋದನೆ ದೊರೆತಿದ್ದು, ಶೀಘ್ರ ಕಾಮಗಾರಿ ಮುಕ್ತಾಯವಾಗಲಿದೆ. ಪಿಲ್ಲರ್‌ ಕಾರ್ಯ ಪೂರ್ಣಗೊಂಡಿದ್ದು,  ಮೋಲ್ಡ್‌ ಅಳವಡಿಸುವ ಕಾರ್ಯ ಸದ್ಯದಲ್ಲೇ ನಡೆಯಲಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.