ಅಕ್ರಮ ಕಟ್ಟಡ ತೆರವಿಗೆ ಆದೇಶ

7
ಅಧಿಕಾರಿಗಳ ಅಮಾನತ್ತಿಗೆ ಕೋರ್ಟ್‌ ಸೂಚನೆ

ಅಕ್ರಮ ಕಟ್ಟಡ ತೆರವಿಗೆ ಆದೇಶ

Published:
Updated:

ಹಾಸನ: ನಗರದ ಬಿ.ಎಂ ರಸ್ತೆಯಲ್ಲಿ ನಗರಸಭೆ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಿದ್ದ ಬೃಹತ್ ಕಟ್ಟಡದ ಅಕ್ರಮ ಭಾಗವನ್ನು ನೆಲಸಮ ಮಾಡುವಂತೆ ಮಾಲೀಕರಿಗೆ ಹೈಕೋರ್ಟ್ ಕಟ್ಟಪ್ಪಣೆ ಮಾಡಿದೆ.

ಮೂರು ತಿಂಗಳಿಂದ ತೂಗುಯ್ಯಾಲೆಯಲ್ಲಿದ್ದ ಕಟ್ಟಡ ನೆಲಸಮ ವಿವಾದಕ್ಕೆ ನ್ಯಾಯಾಲಯ ತೆರೆ ಎಳೆದಿದ್ದು, ಮುಂದಿನ ನಾಲ್ಕು ವಾರಗಳಲ್ಲಿ  ತೆರವು ಮಾಡುವಂತೆ ತಾಕೀತು ಮಾಡಿರುವ ಕೋರ್ಟ್‌, ₹ 50 ಲಕ್ಷ ಠೇವಣಿ ಇಡುವಂತೆ ನಿರ್ದೇಶನ ಮಾಡಿದೆ.
ಇದರಿಂದಾಗಿ ಕಾನೂನು ಕಣ್ತಪ್ಪಿಸಿ ಕಟ್ಟಡ ನಿರ್ಮಿಸಿದ್ದರೂ, ನಗರಸಭೆ ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ ಕಟ್ಟಡ ಮಾಲೀಕ ಉದ್ಯಮಿ ಅನಿಲ್ ಕುಮಾರ್ ಗೆ ಹಿನ್ನಡೆಯಾದಂತಾಗಿದೆ.

ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಿದ ಆಗಿನ ಅಧಿಕಾರಿಗಳ ಅಮಾನತಿಗೂ ಹೈಕೋರ್ಟ್ ಆದೇಶ ಮಾಡಿದೆ. ಇಷ್ಟೆಲ್ಲಾ ಪ್ರಕ್ರಿಯೆಗಳನ್ನು ನಾಲ್ಕು ವಾರಗಳಲ್ಲಿ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ತಿಳಿಸಿದೆ.

ಏನಿದು ಪ್ರಕರಣ: ನಗರಸಭೆಯ 1ನೇ ವಾರ್ಡ್ ನಲ್ಲಿ ₹ 3 ಕೋಟಿ ವೆಚ್ಚದಲ್ಲಿ 7 ಅಂತಸ್ತಿನ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಕಾನೂನು ಬಾಹಿರವಾಗಿ ನಿರ್ಮಿಸಿರುವ ವಾಣಿಜ್ಯ ಕಟ್ಟಡ ಭಾಗವನ್ನು 1964 ಕರ್ನಾಟಕ ಮುನ್ಸಿಪಲ್ ಕಾಯ್ದೆ ಪ್ರಕಾರ, ತೆರವು ಗೊಳಿಸಿ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜುಲೈ 21 ರಂದೇ ನಗರಸಭೆ ಆಯುಕ್ತರಿಗೆ ನಿರ್ದೇಶನ ನೀಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ನೆಲಸಮ ಸಾಧ್ಯವಾಗಿರಲಿಲ್ಲ. ಮಾಲೀಕರಿಗೆ ನೋಟಿಸ್ ನೀಡಿದರೂ ಪ್ರಕ್ರಿಯೆ ನಡೆದಿರಲಿಲ್ಲ. ಅನಿಲ್ ಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು.

ಶೇಕಡಾ 75 ಭಾಗ ನೆಲಸಮ: ‘ ತೆರವು ಕಾರ್ಯಾಚರಣೆ ನಗರಸಭೆ ಆಯುಕ್ತರ ಮೇಲುಸ್ತುವಾರಿಯಲ್ಲೇ ನಡೆಯಬೇಕು. ಆ ನಂತರ ನ್ಯಾಯಾಲಯಕ್ಕೆ ವರದಿ ನೀಡಬೇಕು. ಮುಖ್ಯವಾಗಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಿದ ವೇಳೆ ಕರ್ತವ್ಯದಲ್ಲಿದ್ದ ಆರೋಗ್ಯ ಪರಿವೀಕ್ಷಕರು, ಕಂದಾಯ ನಿರೀಕ್ಷಕರು, ಬಿಲ್ ಕಲೆಕ್ಟರ್ ಹಾಗೂ ನಗರಸಭೆ ಎಂಜಿನಿಯರ್‌ಗಳನ್ನು ಸೇವೆಯಿಂದ ಅಮಾನತು ಮಾಡುವಂತೆಯೂ ಆದೇಶ ಮಾಡಿದೆ. ಅ ಅಧಿಕಾರಿಗಳು ತಲಾ ₹ 5 ಸಾವಿರ ಠೇವಣಿ ಇಡಬೇಕು. ಕಟ್ಟಡದಲ್ಲಿ ಶೇಕಡಾ 75 ರಷ್ಟು ನೆಲಸಮವಾಗಲಿದೆ’ ಎಂದು ನಗರಸಭೆ ಆಯುಕ್ತ ಪರಮೇಶ್‌ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !